ಮಾನವ ಹಕ್ಕು ಲಾಬಿಗೆ ಇಂಗ್ಲೆಂಡ್ ನಲ್ಲಿ ಬಿತ್ತು ಹೊಡೆತ, ಪ್ರಧಾನಿ ಥೆರೆಸ್ಸಾ ಮೇ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಒಂದರ ಮೇಲೆ ಒಂದರಂತೆ ನಡೆದ ಉಗ್ರರ ದಾಳಿಗೆ ತತ್ತರಿಸಿರುವ ಬ್ರಿಟನ್ ಈಗ ಪಾಠ ಕಲಿಯುವ ಲಕ್ಷಣ ಗೋಚರಿಸುತ್ತಿವೆ. ಮ್ಯಾಂಚೆಸ್ಟರ್ ಹಾಗೂ ಲಂಡನ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಉಗ್ರವಾದದ ವಿರುದ್ಧ ಕಠಿಣ ನಿಲುವು ತಾಳಲು ನಿರ್ಧರಿಸಿರುವ ಇಂಗ್ಲೆಂಡ್ ಪ್ರಧಾನಿ ಥೆರೆಸ್ಸಾ ಮೇ, ಈ ಉಗ್ರರ ದಮನಕ್ಕೆ ಅಡ್ಡಿಯಾಗುವ ಮಾನವ ಹಕ್ಕು ಕಾನೂನಿನ ಬದಲಾವಣೆಯ ಕುರಿತಾದ ಧ್ವನಿ ಎತ್ತಿದ್ದಾರೆ.

ಉಗ್ರರ ವಿರುದ್ಧದ ಹೋರಾಟದಲ್ಲಿ ಮಾನವ ಹಕ್ಕು ಕಾನೂನು ಪರಿಣಾಮ ಬೀರುತ್ತಿದ್ದು, ಈ ಕಾನೂನನ್ನು ತಿದ್ದುಪಡಿ ಮಾಡಲಾಗುವುದು ಎಂದು ಮೇ ಘೋಷಣೆ ಮಾಡಿದ್ದಾರೆ. ಈ ಕಾನೂನು ಬದಲಾವಣೆಯಿಂದ ವಿದೇಶಿ ಶಂಕಿತ ಉಗ್ರರನ್ನು ಯಾವುದೇ ಮುಲಾಜಿಲ್ಲದೆ ದೇಶದಿಂದ ಗಡಿಪಾರು ಮಾಡಲು ತೀರ್ಮಾನಿಸಿದ್ದಾರೆ ಥೆರೆಸ್ಸಾ ಮೇ.

ಇತ್ತೀಚೆಗೆ ಲಂಡನ್ ದಾಳಿಯ ಕುರಿತಾಗಿ ಮಾತನಾಡಿರುವ ಮೇ, ‘ಈವರೆಗೂ ಆಗಿರುವುದು ಸಾಕು. ಉಗ್ರರ ವಿರುದ್ಧದ ಹೋರಾಟ ಬದಲಾಗಲೇಬೇಕಿದೆ. ಮಾನವ ಹಕ್ಕು ಕಾನೂನಿಗಿಂತ ನಮಗೆ ಭದ್ರತೆಯೇ ಮುಖ್ಯವಾಗಿದೆ. ಉಗ್ರರಿಗೆ ಕಠಿಣ ಶಿಕ್ಷೆ ನೀಡುವ ಅಗತ್ಯ ಎದುರಾಗಿದೆ. ಯಾರು ಇಂತಹ ಕೃತ್ಯ ನಡೆಸುತ್ತರೋ ಅಂತಹವರಿಗೆ ದೀರ್ಘಾವಧಿಯ ಜೈಲು ಶಿಕ್ಷೆ ಹಾಗೂ ಶಂಕಿತರನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಅಧಿಕಾರಿಗಳು ದೇಶದಿಂದ ಹೊರದಬ್ಬುವ ಅವಕಾಶ ನೀಡಬೇಕಿದೆ. ಯಾರಿಂದ ನಮಗೆ ಬೆದರಿಕೆ ಇದೆಯೊ ಅಂತಹವರ ಸ್ವತಂತ್ರವನ್ನು ಕಿತ್ತುಕೊಳ್ಳಬೇಕು. ಈ ಪ್ರಯತ್ನಗಳಿಗೆ ಮಾನವ ಹಕ್ಕು ಕಾನೂನು ಅಡ್ಡಿಯಾಗುವುದಾದರೆ, ಆ ಕಾನೂನನ್ನೇ ಬದಲಿಸೋಣ’ ಎಂದು ಕರೆ ನೀಡಿದ್ದಾರೆ.

ಈ ಹಿಂದೆ ಸ್ವತಃ ಥೆರೆಸ್ಸಾ ಮೇ ‘ತಮ್ಮ ದೇಶದಲ್ಲಿ ಉಗ್ರರ ಕುರಿತಾದ ಕಾನೂನುಗಳು ಸಡಿಲವಾಗಿವೆ’ ಎಂಬ ಅಂಶವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಇಂಗ್ಲೆಂಡ್ ನಲ್ಲಿ ಉಗ್ರವಾದದ ಕುರಿತಾಗಿರುವ ಮೃದು ಧೋರಣೆ ಬಗ್ಗೆ ಡಿಜಿಟಲ್ ಕನ್ನಡ ಸಹ ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಿತ್ತು.

ಮೇ ಅವರ ಈ ಮಾತುಗಳಲ್ಲಿ ಒಂದಂತು ಸ್ಪಷ್ಟವಾಗಿದೆ. ಉಗ್ರವಾದವನ್ನು ಹತ್ತಿಕ್ಕಬೇಕಾದರೆ, ಮೊದಲು ಈ ಮಾನವ ಹಕ್ಕು ಎಂಬ ಲಾಭಿಯಿಂದ ಹೊರಬರಬೇಕು ಎಂದು. ಭಾರತದ ಜಮ್ಮು ಕಾಶ್ಮೀರದಲ್ಲಿ ಇದೇ ಲಾಬಿ ಉಗ್ರರ ವಿಚಾರದಲ್ಲಿ ದೇಶಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಮಾನವ ಹಕ್ಕು ಕಾನೂನನ್ನು ಅಸ್ತ್ರವಾಗಿಸಿಕೊಂಡು ಉಗ್ರರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಅಲ್ಲದೆ ಮಾನವ ಹಕ್ಕು ಉಲ್ಲಂಘನೆ ಹೆಸರಿನಲ್ಲಿ ಭಾರತೀಯ ಯೋಧರ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರಧಾನಿ ಥೆರೆಸ್ಸಾ ಮೇ ಅವರ ಈ ದೃಢ ನಿರ್ಧಾರ ಮಾನವ ಹಕ್ಕು ಲಾಬಿಗೆ ದೊಡ್ಡ ಹೊಡೆತವನ್ನೇ ಕೊಟ್ಟಿದ್ದು, ಈ ನಿರ್ಧಾರ ಭಾರತಕ್ಕೂ ಮಾದರಿಯಾಗಲಿದೆ.

Leave a Reply