ಯುವ ಕಾಂಗ್ರೆಸ್ ಸಮಿತಿಯಲ್ಲಿ ಭಿನ್ನಮತ, ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಲ್ವರು ಸದಸ್ಯರು

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆ ಕುರಿತು ಪಕ್ಷದೊಳಗೆ ಅಸಮಾಧಾನ ಮೂಡಿದೆ. ಸಮಿತಿಯ ನೂತನ ಅಧ್ಯಕ್ಷರಾಗಿ ಬಸನಗೌಡ ಬಾದರ್ಲಿ ಅವರ ನೇಮಕ ಹಾಗೂ ಚುನಾವಣಾ ಪ್ರಕ್ರಿಯೆ ವಿರೋಧಿಸಿ ಕೆಪಿವೈಸಿಸಿಯ ನಾಲ್ವರು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೆಪಿವೈಸಿಸಿ ಉಪಾಧ್ಯಕ್ಷರಾದ ಕೆಂಪರಾಜ.ಕೆ, ರಾಜೇಂದ್ರ ರಾಜಣ್ಣ, ಕೆ.ಶಿವಕುಮಾರ್ ಹಾಗೂ ಸುಮಯ್ಯ ತಬ್ರೆಜ್ ಬುಧವಾರ ತಮ್ಮ ರಾಜೀನಾಮೆ ಹಾಗೂ ದೂರಿನ ಪತ್ರವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರವಾನಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ನಾಲ್ವರು ಸದಸ್ಯರು ನೀಡಿರುವ ಕಾರಣ ಹೀಗಿದೆ.

ಚುನಾವಣೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಅಮೃತ್ ಗೌಡ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದರೂ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿದೆ. ಆ ಮೂಲಕ ಚುನಾವಣೆಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಚುನಾವಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳು ಪಕ್ಷದ ಕಾರ್ಯಕರ್ತರ ಜತೆ ಹಾಗೂ ಪ್ರದೇಶ ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜತೆ ಮನಸ್ಥಾಪ ಹೊಂದಿದ್ದಾರೆ.

ಈ ಚುನಾವಣೆ ಸಂದರ್ಭದಲ್ಲಿ ಅಕ್ರಮ ನಡೆಯಲಾಗಿದೆ ಎಂದು ದೂರು ಸಲ್ಲಿಸಿದರಿಂದ ಭಾರತೀಯ ಯುವ ಕಾಂಗ್ರೆಸ್ ನಿಂದ ತನಿಖೆಗಾಗಿ ಮೂವರು ಪ್ರತಿನಿಧಿಗಳನ್ನು ಕಳುಹಿಸಲಾಗಿತ್ತು. ಈ ತನಿಖೆ ನಡೆಸಿದ ಮೇಲೆ ಯಾವುದೇ ವರದಿಯನ್ನು ನೀಡದೆ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಕಣ್ಣೊರೆಸುವ ತಂತ್ರವಾಗಿದೆ. ತನಿಖಾ ತಂಡ ತನ್ನ ವರದಿ ಸಲ್ಲಿಸುವ ತನಕ ಈ ಪ್ರಮಣವಚನ ಕಾರ್ಯಕ್ರಮವನ್ನು ಮುಂದೂಡಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ, ನಾವು ಯುವ ಕಾಂಗ್ರೆಸ್ ನಿಂದ ಹೊರ ಹೋಗಿ ಅಲ್ಲಿಂದಲೇ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ನಿರತರಾಗಲಿದ್ದೇವೆ.

ರಾಹುಲ್ ಗಾಂಧಿ ಅವರಿಗೆ ಚುನಾವಣೆ ಅಕ್ರಮದ ಬಗ್ಗೆ ನೇರವಾಗಿ ದೂರ ರವಾನೆಯಾಗಿರುವುದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿದೆ.

Leave a Reply