ಮಧ್ಯಪ್ರದೇಶದ ಐವರು ರೈತರು ಬಲಿಯಾಗಿದ್ದು ಪೊಲೀಸರ ಗುಂಡಿಗಾ? ಇದು ರೈತರ ಸಂಕಷ್ಟ ಚಿತ್ರಣ

ಡಿಜಿಟಲ್ ಕನ್ನಡ ಟೀಮ್:

ಮಧ್ಯ ಪ್ರದೇಶದಲ್ಲಿ ತಮ್ಮ ಬೆಳೆಗೆ ಬೆಂಬಲ ಬೆಲೆ ಹಾಗೂ ಸಾಲ ಮನ್ನಾ ಬೇಡಿಕೆ ಈಡೇರಿಸುವಂತೆ ರೈತರು ಮಾಡುತ್ತಿದ್ದ ಹೋರಾಟದಲ್ಲಿ ಐವರು ರೈತರು ಮೃತಪಟ್ಟಿದ್ದಾರೆ. ಗುಂಡೇಟಿನಿಂದ ಈ ರೈತರು ಮೃತಪಟ್ಟಿದ್ದು, ರೈತರು ಪೊಲೀಸರು ನಮ್ಮ ಮೇಲೆ ಗುಂಡು ಹಾರಿಸಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದರೆ, ಸರ್ಕಾರ ಹಾಗೂ ಅಧಿಕಾರಿಗಳು ಪೊಲೀಸರು ಯಾರ ಮೇಲೂ ಗುಂಡು ಹಾರಿಸಿಲ್ಲ ಎಂದಿದ್ದಾರೆ.

ಹೀಗಾಗಿ ಪ್ರತಿಭಟನೆ ವೇಳೆ ಐವರು ಮರಣ ಹೊಂದಿದ್ದು ಹೇಗೆ ಎಂಬುದು ಗೊಂದಲ ಮೂಡಿಸಿದೆ. ಅಷ್ಟಕ್ಕೂ ಮಧ್ಯಪ್ರದೇಶದಲ್ಲಿ ಆಗಿರುವುದೇನು ಎಂಬುದನ್ನು ನೋಡುವುದಾದರೆ…

ಜೂನ್ 1ರಿಂದಲೂ ಮಧ್ಯ ಪ್ರದೇಶದ ನೀಮುಚ್, ರತ್ಲಾಮ್, ಧಾರ್, ಜಭುವಾ ಹಾಗೂ ದೆವಾಸ್ ಜಿಲ್ಲೆಗಳಲ್ಲಿ ರೈತರ ಪ್ರತಿಭಟನೆ ಆರಂಭವಾಗಿತ್ತು. ಮಧ್ಯ ಪ್ರದೇಶದಲ್ಲಿ ಒಂದು ಕೇಜಿ ಈರುಳ್ಳಿಗೆ ₹ 1ರಿಂದ 2 ಬೆಲೆ ಇರುವ ಕಾರಣ, ಬೇಸತ್ತ ರೈತರು ಪ್ರತಿಭಟನೆಗೆ ಮುಂದಾದರು. ಕೇವಲ ಈರುಳ್ಳಿ ಮಾತ್ರವಲ್ಲದೆ ಇತರೆ ತರಕಾರಿಗಳ ಬೆಲೆಯೂ ಕುಸಿದಿದ್ದವು. ಹೀಗಾಗಿ ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಇನ್ನು ಉತ್ತರ ಪ್ರದೇಶದಲ್ಲಿರುವ ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಿದಂತೆ ಇಲ್ಲಿಯೂ ರೈತರ ಸಾಲ ಮನ್ನಾ ಮಾಡಿ ಎಂದು ರೈತರು ಆಗ್ರಹಿಸಿದ್ದರು.

ಸೋಮವಾರವಷ್ಟೇ ಪ್ರತಿಭಟನಾ ನಿರತ ರೈತರನ್ನು ಬೇಟಿ ಮಾಡಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಬೇಡಿಕೆಗಳ ಕುರಿತಾಗಿ ಶೀಘ್ರವೆ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರಿಗೆ ಬೆಂಬಲ ಬೆಲೆ ನೀಡುವ ಸಲುವಾಗಿ ₹ 1 ಸಾವಿರ ಕೋಟಿ ನಿಧಿ ಸ್ಥಾಪಿಸುವುದಾಗಿ ಭರವಸೆ ಕೊಟ್ಟಿದ್ದರು. ಮುಖ್ಯಮಂತ್ರಿಗಳ ಭರವಸೆಯ ನಂತರವೂ ಮಂಗಳವಾರ ರೈತರ ಪ್ರತಿಭಟನೆ ಮುಂದುವರಿದಿತ್ತು.

ನೀಮುಚ್ ಜಿಲ್ಲೆಯಲ್ಲಿ ರೈತರು ರಸ್ತೆ ತಡೆ ನಡೆಸಿ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಚೌಹಾಣ್ ಅವರ ಪ್ರತಿಮೆಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರು. ಈ ಹಂತದಲ್ಲಿ ದ್ವಿಚಕ್ರ ವಾಹನ ಹಾಗೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದವು. ಈ ಹಂತದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬಲ ಪ್ರಯೋಗಿಸಿದರು. ಇನ್ನು ಧಾರ್ ಜಿಲ್ಲೆಯಲ್ಲಿ ರೈತರು 12 ಸಾವಿರ ಲೀಟರ್ ಹಾಲನ್ನು ರಸ್ತೆಯಲ್ಲಿ ಸುರಿದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಕಲ್ಲು ತೂರಾಟ ನಡೆಸಿದರು ಎಂದು ವರದಿಗಳು ಬಂದಿವೆ. ಇದೇ ರೀತಿ ಮಂಡ್ಸುರ್ ಪ್ರದೇಶದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆ ಹಿಂಸಾತ್ಮಕ ರೂಪ ತಳೆಯಿತು. ಹೀಗಾಗಿ ಈ ಪ್ರದೇಶದಲ್ಲಿ ಪೊಲೀಸರು ಕರ್ಫ್ಯೂ ಜಾರಿಗೊಳಿಸಿದರು. ಈ ಹಂತದಲ್ಲಿ ನಡೆದ ಗಲಭೆಯಲ್ಲಿ ಐವರು ರೈತರು ಗುಂಡೇಟಿನಿಂದ ಸತ್ತಿದ್ದಾರೆ.

ಈ ರೈತರು ಪೊಲೀಸರಿಗೆ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಡ್ಸೂರಿನ ಜಿಲ್ಲಾಧಿಕಾರಿ ಎಸ್.ಕೆ ಸಿಂಗ್, ‘ಈ ಪ್ರಕರಣದ ಕುರಿತಾಗಿ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಈ ಘಟನೆ ಹಿಂದೆ ಕಿಡಿಗೇಡಿಗಳ ಕೈವಾಡವಿದ್ದು, ಪೊಲೀಸರ ಬಂದೂಕಿನಿಂದ ಗುಂಡು ಹಾರಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಪ್ರತಿಭಟನೆ ರಾಜಕೀಯ ಸಮರಕ್ಕೆ ಅಸ್ತ್ರವಾಗಿದ್ದು, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ತಮ್ಮ ಟ್ವೀಟರ್ ನಲ್ಲಿ ‘ಮಧ್ಯಪ್ರದೇಶದಲ್ಲಿರುವ ಬಿಜೆಪಿ ಸರ್ಕಾರ ರೈತರ ವಿರುದ್ಧ ಸಮರ ಸಾರಿದೆ’ ಎಂದು ಟೀಕಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಚೌಹಾಣ್, ‘ಇದು ಕಾಂಗ್ರೆಸ್ ಪಕ್ಷದ ಪಿತೂರಿ’ ಎಂದು ಪ್ರತ್ಯಾರೋಪ ಮಾಡಿದ್ದಾರೆ.

Leave a Reply