ಶಾಲಾ ಪಠ್ಯದಲ್ಲಿ ಡಾ.ರಾಜ್ ಸಾಧನೆ, ಇಂದಿನ ಅಧಿವೇಶನದ ಮುಖ್ಯಾಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

  • ಡಾ. ರಾಜ್ ಕುಮಾರ್ ಅವರ ಜೀವನ ಸಾಧನೆಯನ್ನು ಶಾಲಾ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನ ಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕೆ. ಗೋಪಾಲಯ್ಯ ಅವರ ಪ್ರಸ್ತಾವಕ್ಕೆ ಉತ್ತರಿಸುತ್ತಾ, ‘6ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ’ ಎಂದರು.
  • ಮೈಸೂರಿನ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ಭದ್ರತೆ ಕಲ್ಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ವಿಧಾನ ಸಭೆಯಲ್ಲಿ ಹೇಳಿದರು. ಪ್ರಶ್ನೋತ್ತರ ವೇಳೆಯಲ್ಲಿ ಕೆ.ಷಡಕ್ಷರಿ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ‘ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿ ಬ್ಲಾಕ್-1, ಬ್ಲಾಕ್-2 ಮತ್ತು ಬ್ಲಾಕ್-3 ಮಹಿಳಾ ವಿದ್ಯಾರ್ಥಿಗಳ ನಿಲಯಗಳಿವೆ. ಇವುಗಳ ಸುತ್ತಲೂ ತಡೆಗೋಡೆ ನಿರ್ಮಿಸಿರುವುದಲ್ಲದೆ, ಮುಂಭಾಗದಲ್ಲಿ ಇರುವ ಮುಖ್ಯ ದ್ವಾರದ ಗೇಟುಗಳಲ್ಲಿ ಇಡೀ ದಿನ ಭದ್ರತಾ ಸಿಬ್ಬಂದಿಗಳ ವ್ಯವಸ್ಥೆ ಕಲ್ಪಿಸಲಾಗಿದೆ. ’ ಎಂದರು.
  • ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಹತ್ತು ಪದವಿ ವಸತಿ ಕಾಲೇಜುಗಳನ್ನು ಪ್ರಾರಂಭಿಸುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ವಿಧಾನ ಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಡಿ.ಸಿ. ತಮ್ಮಣ್ಣ ಮತ್ತಿತರರ ಪ್ರಶ್ನೆಗೆ ಉತ್ತರಿಸುತ್ತಾ, ‘ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಇಂತಹ ಕಾಲೇಜುಗಳನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯದಲ್ಲಿ 412 ಸರ್ಕಾರಿ ಪದವಿ ಕಾಲೇಜುಗಳಿದ್ದು, ಇದರಲ್ಲಿ ಕೆಲವಡೆ ಶೇ 70ಕ್ಕಿಂತ ಕಡಿಮೆ ವಿದ್ಯಾರ್ಥಿಗಳ ಕೊರತೆ ಇದೆ. ಅಂತಹ ಕಾಲೇಜುಗಳನ್ನು ನಡೆಸುವುದರಿಂದ ಸರ್ಕಾರದ ಮೇಲೆ ಹೊರೆ ಬೀಳಲಿದೆ. ವಿದ್ಯಾರ್ಥಿಗಳ ಕೊರತೆ ಇರುವ ಕಾಲೇಜುಗಳನ್ನು ಮುಚ್ಚುವುದು, ಇಲ್ಲವೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಇಂತಹ 15 ಕಾಲೇಜುಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
  • ಮಹಾತ್ಮಗಾಂಧಿಯವರನ್ನು ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರದಬ್ಬಿ ವರ್ಣಭೇಧ ನೀತಿಯ ಬಿಸಿ ಮುಟ್ಟಿಸಿದ ದಿನ ಎಂಬ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಗಾಂಧೀಜಿಯವರನ್ನು ವಿಶೇಷವಾಗಿ ಸ್ಮರಿಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ಈ ಕುರಿತು ಹೇಳಿಕೆ ನೀಡಿದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ್, ‘7-6-1893 ರಂದು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರನ್ನು ರೈಲಿನಿಂದ ಹೊರದಬ್ಬಲಾಗಿತ್ತು. ಆ ಮೂಲಕ ವರ್ಣಭೇಧ ನೀತಿಯ ಬಿಸಿ ಅವರಿಗೆ ತಟ್ಟುವಂತೆ ಮಾಡಲಾಗಿತ್ತು. ಈ ಘಟನೆಯನ್ನು ಇಂದು ಸ್ಮರಿಸುವ ಮೂಲಕ ಮಹಾತ್ಮಾಗಾಂಧಿಯವರಿಗೆ ವಿಶೇಷ ನಮನಗಳನ್ನು ಸಲ್ಲಿಸೋಣ’ ಎಂದರು.
  • ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಇನ್ನು ಮುಂದೆ ಶಾಸಕರ ನಿಧಿಯಿಂದ ಶೇ.30 ರಷ್ಟು ಹಣ ಪಡೆಯಲು ಸರ್ಕಾರ ನಿರ್ಧರಿಸಿದೆ. ವಿಧಾನಸಭೆಯಲ್ಲಿಂದು ಸದಸ್ಯರಾದ ಐಹೊಳೆ ಮಹಾಲಿಂಗಪ್ಪ ಹಾಗೂ ಎನ್.ಎ.ಹ್ಯಾರೀಸ್ ಅವರ ಪ್ರತ್ಯೇಕ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ‘ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂವತ್ತೊಂದು ಸಾವಿರ ಕೊಠಡಿಗಳನ್ನು ದುರಸ್ಥಿ ಮಾಡಿಸಬೇಕಿದೆ. ಹೊಸತಾಗಿ ಹತ್ತೊಂಭತ್ತು ಸಾವಿರ ಸರ್ಕಾರಿ ಶಾಲೆಗಳನ್ನು ಕಟ್ಟಬೇಕಿದೆ. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ತುಂಬ ಕೆಲಸಗಳಾದವು. ನಲವತ್ತು ಸಾವಿರದಷ್ಟು ಶಾಲಾ ಕೊಠಡಿಗಳು ನಿರ್ಮಾಣವಾದವು. ಆದರೆ ಅದರ ನಿರ್ವಹಣೆ ಈಗ ಕಷ್ಟವಾಗಿದೆ. ಕೇಂದ್ರ ಸರ್ಕಾರ ಕೂಡಾ ರಾಷ್ಟ್ರೀಯ ಶಿಕ್ಷಣ ಅಭಿಯಾನ ಯೋಜನೆಯಡಿ ನಮಗೆ ಸೂಕ್ತ ನೆರವು ನೀಡಲು ಮುಂದಾಗಿಲ್ಲ’ ಎಂದು ಉತ್ತರಿಸಿದರು.

Leave a Reply