ಮಳೆಗಾಗಿ ಪೂಜೆ: ಭರ್ಜರಿಯಾಗಿ ಸಮರ್ಥಿಸಿಕೊಂಡ ಸಚಿವ ಎಂ.ಬಿ ಪಾಟೀಲ್

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ನದಿಗಳಿಗೆ ಪೂಜೆ ಸಲ್ಲಿಸಿರುವ ಕ್ರಮವನ್ನು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿಧಾನ ಸಭೆಯಲ್ಲಿ ಭರ್ಜರಿಯಾಗಿಯೇ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಪ್ರಶ್ನೋತ್ತರ ವೇಳೆ ಮುಕ್ತಾಯದ ಬಳಿಕ ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿದ ಸಚಿವರು ಈ ಬಗ್ಗೆ ಸಮರ್ಥನೆ ನೀಡುತ್ತಾ ಪ್ರತಿಪಕ್ಷದ ಸದಸ್ಯರಿಗೆ ತಿರುಗೇಟು ನೀಡಿದ್ದು ಹೀಗೆ…

‘ಮಾತೃ ಸ್ವರೂಪಿ ನದಿಗಳಾದ ಕಾವೇರಿ ಮತ್ತು ಕೃಷ್ಣ ಪೂಜೆ ಮಾಡುವುದು ನಮ್ಮ ಸಂಸ್ಕೃತಿ. ತಾಯಿಯ ಪೂಜೆಯನ್ನು ಮಾಡುವುದು ಮೌಢ್ಯ, ತಪ್ಪು ಎನ್ನುವುದಾದರೆ ಇಂತಹ ಪೂಜೆಯನ್ನು ಲಕ್ಷ ಭಾರಿ ಬೇಕಾದರೂ ಮಾಡುತ್ತೇನೆ.

ಅಧಿಕಾರದಲ್ಲಿದ್ದಾಗ ಬರಗಾಲ ನಿವಾರಣೆಗೆ ವಿಶೇಷ ಪೂಜೆ ಸಲ್ಲಿಸಲು ಬಿಜೆಪಿ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದೆ. ಉಪಗ್ರಹ ಹಾರಿಸುವ ಮುನ್ನ ಇಸ್ರೋ ಸಂಸ್ಥೆಯವರು ಅದರ ಪ್ರತಿಕೃತಿಯನ್ನು ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿಟ್ಟು ಪೂಜೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಜೀನಾಮೆ ಕೇಳುತ್ತೀರಾ?

ನಂಜನಗೂಡು ಶ್ರೀಕಂಠೇಶ್ವರ,ಕುಕ್ಕೆ ಸುಬ್ರಮಣ್ಯ ಸೇರಿದಂತೆ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಪ್ರಕೃತಿಯ ನೆರವು ಕೋರಿ ಪರ್ಜನ್ಯ ಜಪದಂತಹ ಸಂಪ್ರದಾಯಗಳನ್ನು ನಡೆಸುವ ಪದ್ದತಿ ಇದೆ. ಇದು ಮೂಢನಂಬಿಕೆ ಅಲ್ಲ. ನದಿಗಳು ಜನರನ್ನು ರಕ್ಷಿಸುವ ತಾಯಿ ಇದ್ದಂತೆ. ಅಂತಹ ತಾಯಿಗೆ ಪೂಜೆ ಸಲ್ಲಿಸುವುದು ನಮ್ಮ ನಾಡಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದಲೇ ಹೊರತು ಬೇರೆ ಯಾವ ಕಾರಣದಿಂದಲೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಾವೇರಿ ಹಾಗೂ ಕೃಷ್ಣಾ ನದಿ ವ್ಯಾಪ್ತಿಯಲ್ಲಿ ತಾವು ನಡೆಸಿದ ಪೂಜೆಯ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸುತ್ತಿಲ್ಲ. ಬದಲಿಗೆ ನಮ್ಮ ಸ್ವಂತ ವೆಚ್ಚದಲ್ಲಿ ನಾವು ಮಂತ್ರಿ, ಶಾಸಕರು ಪೂಜೆ ನಡೆಸಿದ್ದೇವೆ.

ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಅಲ್ಲೇನೂ ಹೋಮ, ಹವನ ನಡೆಸಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆ ಸಮೃದ್ಧವಾಗಲಿ ಎಂಬ ಕಾರಣಕ್ಕಾಗಿ ಎಳ್ಳಮಾವಾಸ್ಯೆಯ ದಿನ ಪೈರು ಪೂಜೆಯನ್ನು ಮಾಡುವ ಪದ್ಧತಿಯಿದೆ. ಇದೇ ರೀತಿ ನದಿಗಳನ್ನು ತಾಯಿ ಎಂದು ಭಾವಿಸಿದ ಕಾರಣಕ್ಕಾಗಿ ಕೃತಜ್ಞತೆ ಸಲ್ಲಿಸುವುದು ನಮ್ಮ ಸಂಪ್ರದಾಯ. ಆದರೆ ಇದನ್ನು ಮೂಢನಂಬಿಕೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮಾಡಿರುವ ಟೀಕೆಯಲ್ಲಿ ಯಾವುದೇ ಹುರುಳಿಲ್ಲ. ನಾಡಿನ ಜನರ ಒಳಿತನ್ನು ಬಯಸಿ ನದಿಗಳಿಗೆ ಪೂಜೆ ಸಲ್ಲಿಸಿದರೆ ಅದು ತಪ್ಪಲ್ಲ. ಹೀಗಾಗಿ ಈ ವಿಷಯದಲ್ಲಿ ವಿವಾದ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಯಸುವುದು ಸರಿಯಲ್ಲ.

ವಿವಿಧ ರಾಜ್ಯ ಸರ್ಕಾರಗಳು ಇಂತಹ ಪೂಜಾ ಸಂಪ್ರದಾಯವನ್ನು ನಡೆಸುತ್ತಾ ಬಂದಿವೆ.ಅಷ್ಟೇ ಅಲ್ಲ, ಇದಕ್ಕಾಗಿ ನೂರಾರು ಕೋಟಿ ರೂಗಳನ್ನು ವೆಚ್ಚ ಮಾಡುತ್ತಾ ಬಂದಿವೆ. ಒಂದು ವೇಳೆ ಇದು ಮೂಢ ನಂಬಿಕೆ ಎನ್ನುವುದಾದರೆ ಇಂತಹ ತಪ್ಪನ್ನು ಲಕ್ಷ ಬಾರಿ ಬೇಕಾದರೂ ಮಾಡುತ್ತೇನೆ.’

ಈ ಹಂತದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ‘ನೀವು ಪೂಜೆ ಸಲ್ಲಿಸಿದ್ದು ಸ್ವಾಗತಾರ್ಹ. ಆದರೆ ನೀವು ಮಾಡಿದ್ದು ಹೋಮ, ಹವನ. ನಾವು ಮಾಡಿದ್ದು ಪ್ರಾರ್ಥನೆ’ ಎಂದು ಸಮರ್ಥಿಸಿಕೊಂಡರು.

Leave a Reply