ವಿನಾಶದಂಚಿನ ಪ್ರಭೇದಕ್ಕೆ ಮಗುವಾಗಿದೆ! ಈ ಹೆರಿಗೆ ಹಿಂದಿದೆ ಹರಸಾಹಸ

ಡಿಜಿಟಲ್ ಕನ್ನಡ ಟೀಮ್:

ಫಿಲೆಡೆಲ್ಫಿಯಾ ಮೃಗಾಲಯದಲ್ಲಿರುವ ವಿನಾಶದ ಅಂಚಿನಲ್ಲಿರುವ ವೆಸ್ಟ್ರನ್ ಲೊಲ್ಯಾಂಡ್ ಪ್ರಭೇದದ ಗೊರಿಲ್ಲಾವೊಂದಕ್ಕೆ ಕಳೆದ ವಾರ ಮಗುವಾಗಿದೆ. ಈ ಒಂದು ಸಂತಸದ ಸುದ್ದಿಯ ಹಿಂದೆ ಒಂದು ಹರಸಾಹಸದ ಪ್ರಯತ್ನವಿದೆ. ಸ್ವಾಭಾವಿಕ ಹೆರಿಗೆಯಾಗದೇ ಸಮಸ್ಯೆಗೆ ಸಿಲುಕಿದ್ದ ಗೊರಿಲ್ಲಾಗೆ ಈ ಹೆರಿಗೆ ಮಾಡಿಸಿದ್ದು, ಮನುಷ್ಯರಿಗೆ ಚಿಕಿತ್ಸೆ ನೀಡುವ ವೈದ್ಯರು ಎಂಬುದು ವಿಶೇಷ.

17 ವರ್ಷದ ಕಿರಾ ಎಂಬ ಹೆಣ್ಣು ಗೊರಿಲ್ಲಾಗೆ ಕಳೆದ ಗುರುವಾರವೇ ಪ್ರಸವಕ್ಕೆ ಸಮಯವಾಗಿತ್ತು. ಸಾಮಾನ್ಯವಾಗಿ ಗೊರಿಲ್ಲಾಗಳ ಪ್ರಸವ ಪ್ರಕ್ರಿಯೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಆದರೆ ತುಂಬಾ ಸಮಯವಾದರೂ ಕಿರಾ ಹೆರಿಗೆ ಆಗಲೇ ಇಲ್ಲ. ಈ ಹಂತದಲ್ಲಿ ಕಿರಾ ಸಮಸ್ಯೆಯಿಂದ ಬಳಲುತ್ತಿರುವುದನ್ನು ಅರಿತ ಮೃಗಾಲಯದ ಸಿಬ್ಬಂದಿ ತಕ್ಷಣವೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಕರೆ ಮಾಡಿ ಸಹಾಯ ಕೋರಿದರು. ತಕ್ಷಣವೇ ವೈದ್ಯರ ತಂಡವೊಂದು ಮೃಗಾಲಯದತ್ತ ಧಾವಿಸಿತು. ಈ ವೈದ್ಯರ ತಂಡಕ್ಕೆ ಮನುಷ್ಯರಿಗೆ ಚಿಕಿತ್ಸೆ ನೀಡುವ ಪರಿಣಿತಿ ಇತ್ತೇ ಹೊರತು ಪ್ರಾಣಿಗಳ ಬಗ್ಗೆ ಅಲ್ಲ. ಆದರೂ ತಮ್ಮ ಅನುಭವ ಹಾಗೂ ಸಮಯಪ್ರಜ್ಞೆಯಿಂದ ವೈದ್ಯರು ಒಂದುವರೆ ತಾಸು ಕಿರಾ ಗೊರಿಲ್ಲಾಗೆ ಹೆರಿಗೆ ಮಾಡಿದ್ದು ಗಮನಾರ್ಹ.

 ಈ ವೈದ್ಯರ ಕಾರ್ಯ ಯಶಸ್ವಿಯಾಗಿದ್ದು ಕಿರಾ ಆರೋಗ್ಯವಾದ ಗಂಡು ಗೊರಿಲ್ಲಾಗೆ ಜನನ ನೀಡಿತು. ಕಿರಾಗೆ ಇದು ಮೊದಲ ಹೆರಿಗೆಯಾಗಿದ್ದು, ಈಕೆ ಸುಮಾರು ಒಂದು ದಿನ ಪ್ರಜ್ಞೆ ಕಳೆದುಕೊಂಡಿದ್ದಳು. ಶನಿವಾರ ಚೇತರಿಸಿಕೊಂಡ ಕಿರಾ ತನ್ನ ಮರಿಯನ್ನು ಸೇರಿತು. ‘ಮೃಗಾಲಯದಲ್ಲಿ ಸಾಕಷ್ಟು ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ ಅಂತಿಮವಾಗಿ ಎಲ್ಲವು ಸುಖಾಂತ್ಯದಲ್ಲಿ ಬಗೆಹರಿಯಿತು.’ ಎಂದು ವೈದ್ಯರ ತಂಡದ ಮುಖ್ಯಸ್ಥರು ಸಂತಸಪಟ್ಟರು.

ವಿನಾಶದಂಚಿನಲ್ಲಿರುವ ಈ ಪ್ರಭೇದದ ಮತ್ತೊಂದು ಗೊರಿಲ್ಲಾ ಕಳೆದ ವರ್ಷ ಆಗಸ್ಟ್ ನಲ್ಲಿ ಇದೇ ಮೃಗಾಲಯದಲ್ಲಿ ಅಮಾನಿ ಎಂಬ ಹೆಣ್ಣು ಗೊರಿಲ್ಲಾ ಜನನವಾಗಿತ್ತು. ಈಗ ಮತ್ತೊಂದು ಸದಸ್ಯರ ಸೇರ್ಪಡೆಯಿಂದ ಮೃಗಾಲಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

Leave a Reply