ಕಣಿವೆಯಲ್ಲಿ ಉಗ್ರರನ್ನು ಸೇರದಿದ್ದರೆ ಯುವಕರು ಜೀವಿಸೋದೆ ಕಷ್ಟ, ಕಾಶ್ಮೀರದಲ್ಲಿ ಶರಣಾಗತ ಶಂಕಿತ ಉಗ್ರ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗಷ್ಟೇ ಭಾರತೀಯ ಯೋಧರಿಂದ ಹತನಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಖ್ಯಸ್ಥ ಸಬ್ಸಾರ್ ಬಟ್ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ ಶಂಕಿತ ಉಗ್ರ ಡ್ಯಾನಿಶ್ ಅಹ್ಮದ್, ಪೊಲೀಸರ ಮುಂದೆ ಶರಣಾಗಿದ್ದಾನೆ.

ವರದಿಗಳ ಪ್ರಕಾರ ಡ್ಯಾನಿಸ್ 2016ರ ಹಂದ್ವಾರದಲ್ಲಿ ನಡೆದ ಗಲಭೆ ವೇಳೆ ಈತ ಕಲ್ಲುತೂರಾಟದಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗಿದೆ. ಇನ್ನು ಸಬ್ಸಾರ್ ಬಟ್ ಅಂತ್ಯಕ್ರಿಯೆಯ ವಿಡಿಯೋ ಹಾಗೂ ಫೋಟೊದಲ್ಲಿ ಈತ ಪ್ರಮುಖವಾಗಿ ಕಾಣಿಸಿಕೊಂಡಿದ್ದಾನೆ. ಪೊಲೀಸರ ತನಿಖೆಯಲ್ಲಿ ಡ್ಯಾನಿಶ್ ಹಂದ್ವಾರದ ಕುಲಂಗಾಮ್ ಪ್ರದೇಶದ ನಿವಾಸಿಯಾಗಿದ್ದು, ಡೆಹ್ರಾಡೂನಿನ ಡೂನ್ ಕೃಷಿ ಹಾಗೂ ವಿಜ್ಞಾನ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎಸ್ಸಿ ಓದುತ್ತಿದ್ದಾನೆ.

ಪೊಲೀಸರಿಗೆ ಶರಣಾಗಿರುವ ಈತ ಕಣಿವೆ ರಾಜ್ಯದ ಯುವಕರು ಉಗ್ರರ ಜತೆ ಕೈ ಜೋಡಿಸುತ್ತಿರುವುದೇಕೆ ಎಂಬ ಆತಂಕಕಾರಿ ಅಂಶವನ್ನು ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಡ್ಯಾನಿಶ್ ಪೊಲೀಸರ ಮುಂದೆ ಹೇಳಿರುವ ಪ್ರಮುಖ ಅಂಶಗಳು ಹೀಗಿವೆ…

‘ಉಗ್ರರ ಪ್ರಭಾವವಿರುವ ಪ್ರದೇಶಗಳಲ್ಲಿನ ಯುವಕರು ಪದೇ ಪದೇ ಉಗ್ರರಿಂದ ಬೆದರಿಕೆಗಳನ್ನು ಪಡೆಯುತ್ತಲೇ ಇರುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲಾಗದೇ ಅನೇಕ ಯುವಕರು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ. ಹೀಗೆ ಒತ್ತಡಕ್ಕೆ ಮಣಿದು ಉಗ್ರರ ಗುಂಪಿಗೆ ಸೇರುವ ಯುವಕರು ಕೆಲವೇ ದಿನಗಳಲ್ಲಿ ಭ್ರಮನಿರಸನಾಗುತ್ತಾರೆ. ಆದರೆ, ಅಲ್ಲಿಂದ ಹೊರಗೆ ಬರಲು ಅವರಿಗೆ ಸಾಧ್ಯವಾಗುವುದಿಲ್ಲ.

ಈ ಪ್ರದೇಶದಲ್ಲಿ ಉಗ್ರರು ಜನರನ್ನು ಹಿಂಸೆ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಇದೇವೇಳೆ ಉಗ್ರರ ಜತೆ ಸೇರಿದರೆ ಆತನನ್ನು ಹೀರೋನಂತೆ ಬಿಂಬಿಸಲಾಗುತ್ತದೆ. ಇದರಿಂದ ಕೆಲವು ಯುವಕರು ಸುಲಭವಾಗಿ ಹುಡುಗಿಯರ ಸ್ನೇಹ ಸಂಪಾದಿಸಬಹುದು ಎಂಬ ಕಾರಣಕ್ಕೆ ಉಗ್ರರ ಜತೆ ಕೈ ಜೋಡಿಸುತ್ತಾರೆ. ಈ ಪ್ರದೇಶಗಳಲ್ಲಿ ಉಗ್ರರು ಸ್ಥಳೀಯ ನಾಯಕರಿಂದ ಹಣ ಪಡೆದು ಹಳ್ಳಿಗಳಲ್ಲಿ ಉದ್ಭವಿಸುವ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಅಲ್ಲದೆ ಅವರಿಗೆ ರಕ್ಷಣೆ ನೀಡುತ್ತಾರೆ. ಈ ಉಗ್ರರಿಗೆ ಪಾಕಿಸ್ತಾನಕ್ಕೆ ನಿರಂತರವಾಗಿ ಹಣ ರವಾನೆಯಾಗುತ್ತಿದೆ.’

Leave a Reply