ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಪೊಲೀಸ್ ವಶ, ರೈತ ಪ್ರತಿಭಟನೆಯಲ್ಲಿ ನಿಜಕ್ಕೂ ರಾಜಕಾರಣ ಯಾರದ್ದು? ನೀವು ತಿಳಿಯಬೇಕಿರುವ 4 ಸಂಗತಿಗಳು

ಡಿಜಿಟಲ್ ಕನ್ನಡ ಟೀಮ್

ಮಧ್ಯಪ್ರದೇಶದ ಮಂಡ್ಸೌರ್ ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೋಲಿಬಾರ್ ಆಗಿ 5 ಮಂದಿ ಮೃತರಾಗಿರುವುದರ ಹಿನ್ನೆಲೆಯಲ್ಲಿ ಗುರುವಾರ ರಾಹುಲ್ ಗಾಂಧಿ ಅವರು ನೀಮುಚ್ ಗೆ ಆಗಮಿಸಿದರು. ಆದರೆ ನಿಷೇಧಾಜ್ಞೆ ಇದ್ದ ಕಾರಣ ಅವರನ್ನು ಮಾರ್ಗಮಧ್ಯದಲ್ಲೇ ಪೊಲೀಸ್ ವಶಕ್ಕೆ ಪಡೆದು ತಡೆಯಲಾಯಿತು. ಸಹಜವಾಗಿಯೇ ಇದು ವಾಗ್ವಾದಗಳಿಗೆ ಕಾರಣವಾಗಿದೆ.

ಉದ್ವಿಗ್ನ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ರಾಜಕಾರಣ ಮಾಡುವುದಕ್ಕೆ ಬಂದಿದ್ದಾರೆ ಎನ್ನುವುದು ಬಿಜೆಪಿ ಆರೋಪವಾದರೆ, ‘ನಾನು ರೈತರ ಜತೆ ಮಾತನಾಡುವುದಕ್ಕಷ್ಟೇ ಇಲ್ಲಿಗೆ ಬಂದೆ. ಆರೆಸ್ಸೆಸ್/ಬಿಜೆಪಿ ವಿಚಾರಧಾರೆಗೆ ಸೇರಿದವ ನಾನಲ್ಲವಾದ್ದರಿಂದ ನನ್ನನ್ನು ತಡೆಯಲಾಗಿದೆ’ ಎನ್ನುವುದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯೆ.

ಇಲ್ಲಿ ಎಲ್ಲರದ್ದೂ ರಾಜಕೀಯ ಆರೋಪದ ಮಾತುಗಳೇ. ಹಾಗಾದರೆ ನಾವು ತಿಳಿದಿರಬೇಕಾದದ್ದೇನನ್ನು?

  • ಮಂಡ್ಸೌರ್ ಪ್ರತಿಭಟನೆ ಗಲಭೆಯ ರೂಪ ಪಡೆದುಕೊಂಡಿದೆ ಎಂಬುದಂತೂ ನಿಜ. ಮದ್ಯದಂಗಡಿಗಳನ್ನು ಲೂಟಿ ಮಾಡಲಾಗಿದೆ. ಎಟಿಎಂ ಲೂಚಿ ಮಾಡುವುದಕ್ಕೆ ಸಾಧ್ಯವಾಗದಿದ್ದಾಗ ಅದಕ್ಕೆ ಬೆಂಕಿ ಹಚ್ಚಲಾಗಿದೆ. ಅಂದರೆ ರೈತ ಪ್ರತಿಭಟನೆಯ ಒಳಗೆ ಗೂಂಡಾ ಅಂಶಗಳೂ ತೂರಿಕೊಂಡಿರುವುದು ಸ್ಪಷ್ಟ. ಹೀಗಿರುವಾಗ ರಾಹುಲ್ ಗಾಂಧಿ ಪರಿಸ್ಥಿತಿ ಶಾಂತವಾಗುವವರೆಗೆ ತುಸು ಕಾಯಬೇಕಿತ್ತು ಎಂಬುದು ಅಪೇಕ್ಷಣೀಯವೇ. ಆದರೆ ರಾಹುಲ್ ಗಾಂಧಿ ರೈತರ ಬಗ್ಗೆ ಮಾತನಾಡುವುದೇ ಕ್ಷುಲ್ಲಕ ರಾಜಕಾರಣ ಎಂಬಂತೆ ಬಿಜೆಪಿ ಮತ್ತದರ ಬೆಂಬಲಿಗರು ಟ್ವೀಟು ಕುಟ್ಟಿಕೊಂಡಿರುವುದು ಹಾಸ್ಯಾಸ್ಪದ. ಇಂಥ ಘಟನೆ ನಡೆದಾಗ ಪ್ರತಿಪಕ್ಷ ಸ್ಥಾನದಲ್ಲಿದ್ದರೆ ಬಿಜೆಪಿಯೂ ರೈತರನ್ನು ಮಾತನಾಡಿಸುವುದಕ್ಕೆ ಹೋಗಿಯೇ ಹೋಗುತ್ತಿತ್ತು.

  • ರಾಹುಲ್ ಗಾಂಧಿಯ ರಾಜಕೀಯ ವಿರೋಧಿಸುವ ಭರದಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರದ ವೈಫಲ್ಯವನ್ನು ಮರೆಯುವಂತಿಲ್ಲ. ಮೊದಲಿಗೆ, ರೈತರ ಸಾವು ಗೋಲಿಬಾರಿನಿಂದ ಆದದ್ದೇ ಅಲ್ಲ ಅಂತ ಸಮರ್ಥಿಸಿಕೊಳ್ಳುವುದಕ್ಕೆ ಹೆಣಗಾಡಿದ್ದು ದುರಂತ. ರೈತರ ಪ್ರತಿಭಟನೆಯಲ್ಲಿ ಗೂಂಡಾ ಅಂಶಗಳು ತೂರಿಕೊಂಡಿರುವುದು ಅನುಭವಕ್ಕೆ ಬರುತ್ತಿರುವ ವಿದ್ಯಮಾನವೇ ಆದರೂ ಇಡೀ ಪ್ರತಿಭಟನೆಯನ್ನೇ ರಾಜಕೀಯ ಪಿತೂರಿ ಎಂದು ಬಿಜೆಪಿ ತಿಪ್ಪೆ ಸಾರಿಸುವುದಕ್ಕೆ ಹೊರಟಿರುವುದೂ ಸಂವೇದನೆ ಕಳೆದುಕೊಂಡಿರುವುದರ ಪ್ರತೀಕ. ‘ಪ್ರತಿಭಟಿಸುತ್ತಿರುವವರು ರೈತರೇ ಆಗಿದ್ದರೆ ಹಾಗೆಲ್ಲ ಬೆಳೆದ ಬೆಳೆಯನ್ನು ರಸ್ತೆಗೆ ಚೆಲ್ಲುತ್ತಿದ್ದರೇ’ ಎಂದೆಲ್ಲ ಸಾಮಾಜಿಕ ತಾಣದಲ್ಲಿ ಬಿಜೆಪಿ ವಾದಕ್ಕಿಳಿದಿದೆ. ಬೆಳೆದಿರುವ ಈರುಳ್ಳಿ ಮತ್ತು ಟೊಮೆಟೊಗಳಿಗೆ ಕೆಜಿಗೆ ಒಂದು ರುಪಾಯಿ ಸಿಗುವ ದಯನೀಯ ಪರಿಸ್ಥಿತಿ ಬಂದಾಗ ಬೀದಿಗೆ ಚೆಲ್ಲದೇ ಇನ್ನೇನು ಬಿರಿಯಾನಿ ಮಾಡಿ ಹಂಚುತ್ತಾರೆಯೇ? ಅಲ್ಲಿನ ಹತಾಶೆ ಅರ್ಥ ಮಾಡಿಕೊಳ್ಳದೇ ಕೊಂಕು ನುಡಿದರೇನರ್ಥ? ಹೀಗೆ ಸಂವೇದನೆ ಕಳೆದುಕೊಂಡಿದ್ದರಿಂದಲೇ ರೈತ ಪ್ರತಿಭಟನೆ ಮುಂದುವರಿಯುತ್ತ ಹೋಗಿ ಒಂದು ಹಂತದಲ್ಲಿ ವಿಧ್ವಂಸಕ ಅಂಶಗಳು ಅದರಲ್ಲಿ ಸೇರಿಕೊಳ್ಳುವುದಕ್ಕೆ ಕಾರಣವಾಯಿತಷ್ಟೆ.
  • ನಿಜ. ಕೇವಲ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರವೇ ರೈತರ ಆತ್ಮಹತ್ಯೆಗಳಾಗಿದ್ದಲ್ಲ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ ಕೊಡಬೇಕಿತ್ತು ಎಂಬುದೂ ಒಪ್ಪಬೇಕಾದ ಅಂಶವೇ. ಇವ್ಯಾವುದೂ ಮಧ್ಯಪ್ರದೇಶ ಬಿಜೆಪಿ ಸರ್ಕಾರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಕಾರಣವಾಗುವುದಿಲ್ಲ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ರೈತರಿಗೆ ಸಮಸ್ಯೆಗಳಿರುವುದರಿಂದ ಪ್ರತಿಪಕ್ಷ ಸ್ಥಾನದಲ್ಲಿರುವ ಅವರು ಸುಮ್ಮನಿರಬೇಕು ಎಂಬ ವಾದ ಅರ್ಥವಿಲ್ಲದ್ದು. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೂ ರೈತರ ಮೇಲೆ ಗೋಲಿಬಾರ್ ಆಗಿತ್ತು. ಬಿಜೆಪಿಯು ಈಗ ಕಾಂಗ್ರೆಸ್ಸಿಗೆ ಅನ್ವಯಿಸುತ್ತಿರುವ ತರ್ಕದ ಪ್ರಕಾರ ನೋಡುವುದಾದರೆ, ಯಡಿಯೂರಪ್ಪನವರು ಇನ್ನೆಂದೂ ರೈತರ ಬಗ್ಗೆ ಮಾತನಾಡಲೇಬಾರದು.
  • ಬೇರೆ ಸರ್ಕಾರಗಳು ಸಾಲಮನ್ನಾ ಮಾಡಿದಾಗ ಅದನ್ನು ಬಿಟ್ಟಿಭಾಗ್ಯ, ಜನಪ್ರಿಯ ದಿವಾಳಿ ಮಾದರಿ ಎಂದೆಲ್ಲ ಹಳಿದುಕೊಂಡಿರುವ ಬಿಜೆಪಿ ಬೆಂಬಲಿಗರು, ಉತ್ತರಪ್ರದೇಶ ಮತ್ತು ಮಹಾರಾಷ್ಟ್ರಗಳ ಬಿಜೆಪಿ ಆಡಳಿತದಲ್ಲಿ ಆಗುತ್ತಿರುವ ಸಾಲಮನ್ನಾವನ್ನು ಸಾಧನೆಯೆಂದು ಬಣ್ಣಿಸಿಕೊಂಡಿದ್ದಾರೆ. ಇಂಥ ಜನಪ್ರಿಯ ಕ್ರಮಗಳು ತಪ್ಪೋ-ಸರಿಯೋ ಪ್ರಶ್ನೆ ಬೇರೆ. ಆದರೆ ಪಕ್ಕದ ರಾಜ್ಯಗಳ ಬಿಜೆಪಿ ಸರ್ಕಾರಗಳು ರೈತರಿಗೆ ಕರುಣಿಸುತ್ತಿರುವ ಭಾಗ್ಯ ತಮಗೂ ಸಿಗಲೆಂದು ಮಧ್ಯಪ್ರದೇಶದ ರೈತರು ಬೀದಿಗಿಳಿದರೆ ದೂಷಿಸಬೇಕಾದದ್ದು ಯಾರನ್ನು?

Leave a Reply