ಭಾರತದ ನಲಂದಾ ವಿವಿ ಕುಂಟಿಕೊಂಡಿರುವಾಗ ತನ್ನದೇ ಜಾಗತಿಕ ಬೌದ್ಧ ಶಿಕ್ಷಣ ಕೇಂದ್ರವನ್ನು ಎದ್ದುನಿಲ್ಲಿಸಿಬಿಟ್ಟಿದೆ ಚೀನಾ!

   

  ಡಿಜಿಟಲ್ ಕನ್ನಡ ವಿಶೇಷ

  ರಾಜತಾಂತ್ರಿಕತೆಯಲ್ಲಿ ಚೀನಾದಿಂದ ದೊಡ್ಡ ಹೊಡೆತವೊಂದನ್ನು ತಿಂದಿದೆ ಭಾರತ.

  2006ರಿಂದಲೇ ಭಾರತದ ಪರಂಪರೆಯ, ಜ್ಞಾನದ ಕುರುಹಾಗಿದ್ದ ನಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನ ಕಾರ್ಯ ಶುರುವಾಯಿತಷ್ಟೆ. ಶುರುವಾಗಿದ್ದು ಮಾತ್ರ, ಪ್ರಗತಿ ಕುಂಟುತ್ತಲೇ ಸಾಗಿತು. ಆದರೆ ಅಂಥ ಯೋಜನೆಯೇನನ್ನೂ ಘೋಷಿಸದೇ ನಲಂದಾ ಮಾದರಿಯ ಬೌದ್ಧ ಶಿಕ್ಷಣದ ವಿಶ್ವವಿದ್ಯಾಲಯವನ್ನು ಆರಂಭಿಸಿರುವ ಚೀನಾ, ‘ಬೌದ್ಧ ಡಿಪ್ಲೊಮಸಿ’ಯಲ್ಲಿ ತಾನೇ ಮುಂದಿದ್ದೇನೆ ಎಂಬರ್ಥದಲ್ಲಿ ಭಾರತಕ್ಕೆ ಬಿಸಿ ಮುಟ್ಟಿಸಿದೆ. ವಾರದ ಹಿಂದೆ ನನ್ಹಾಯ್ ಬುದ್ಧಿಸ್ಟ್ ಕಾಲೇಜಿಗೆ ಪ್ರವೇಶ ಆರಂಭ ಎಂದು ಘೋಷಿಸಿದೆ ಚೀನಾ.

  ಇತ್ತ ಅಬ್ದುಲ್ ಕಲಾಂ ಅವರ ಕನಸಾಗಿದ್ದ ನಲಂದಾ ವಿಶ್ವವಿದ್ಯಾಲಯವು ಅಮರ್ಥ್ಯ ಸೇನ್ ರಂಥ ಅಸಮರ್ಥ ಪ್ರಚಾರಪ್ರಿಯರ ಕೈಯಲ್ಲಿ ಸಿಲುಕಿ ನಲುಗಿಹೋಯಿತು. ಇದೀಗ ಆಡಳಿತ ಬದಲಾಗಿದ್ದರೂ ಯಾವ ವೈಭವದ ಕಲ್ಪನೆಯಿಂದ ನಲಂದಾವನ್ನು ಕಾಣಲಾಗಿತ್ತೋ ಅಂಥದ್ದೇನೂ ಆಗಲೇ ಇಲ್ಲ. 2014ರಲ್ಲಿ 14 ಮಂದಿ ವಿದ್ಯಾರ್ಥಿಗಳು ಹಾಗೂ 11 ಶಿಕ್ಷಕರೊಂದಿಗೆ ಕಾರ್ಯಾರಂಭ ಮಾಡಿತು ನಲಂದಾ.

  ಆದರೆ ಚೀನಾ ಇದೀಗ ಪ್ರಾರಂಭಿಸಿರುವ ಬೌದ್ಧ ವಿಶ್ವವಿದ್ಯಾಲಯವನ್ನು ನೋಡಿ. ಸೆಪ್ಟೆಂಬರಿನಲ್ಲಿ 220 ವಿದ್ಯಾರ್ಥಿಗಳ ಬಲದೊಂದಿಗೆ ಶೈಕ್ಷಣಿಕ ಯಾತ್ರೆ ಶುರು ಮಾಡಲಿದೆ. ಬುದ್ಧಿಸಂ, ಟಿಬೆಟ್ ಬುದ್ಧಿಸಂ, ಬೌದ್ಧ ವಾಸ್ತುಶಾಸ್ತ್ರ ವಿನ್ಯಾಸ ಮತ್ತು ಸಂಶೋಧನೆ ಇವೆಲ್ಲ ಅಧ್ಯಯನ ವಿಷಯಗಳಾಗಿವೆ. ಪಾಳಿ, ಟಿಬೆಟಿಯನ್ ಮತ್ತು ಚೀನಿ ಭಾಷೆಗಳು ಅಧ್ಯಯನಕ್ಕೆ ಲಭ್ಯ.

  ಸಮುದ್ರಕ್ಕಭಿಮುಖವಾಗಿ ನನ್ಹಾಯ್ ಬೆಟ್ಟದಲ್ಲಿ ಬರೋಬ್ಬರಿ 618.8 ಎಕರೆ ಜಾಗದಲ್ಲಿ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದೆ ಚೀನಾ. ಇದರ ಸಮುದ್ರ ತೀರವನ್ನು ‘ಬ್ರಹ್ಮ ಪವಿತ್ರ ಪ್ರದೇಶ’ ಎಂದು ಮರು ನಾಮಕರಣ ಮಾಡಲಾಗಿದೆ. ಇದು ಯೋಗ ವಾಶಿಷ್ಟ ಮತ್ತು ಮಹಾಯಾನ ಬುದ್ಧಿಸಂನಿಂದ ಪಡೆದಿರುವ ಪರಿಕಲ್ಪನೆ ಎನ್ನಲಾಗಿದೆ.

  ಸ್ವಾರಸ್ಯವೆಂದರೆ, ನಲಂದಾ ನಿರ್ಮಾಣದಲ್ಲಿ ಭಾರತವು ಸಲಹೆಗೆ ಪರಿಗಣಿಸಿದ ರಾಷ್ಟ್ರಗಳಲ್ಲಿ ಚೀನಾ ಸಹ ಇತ್ತು. ಬಹುಶಃ ಭಾರತ ನಲಂದಾ ನಿರ್ಮಾಣದಲ್ಲಿ ಕುಂಟಿಕೊಂಡಿರುವುದನ್ನು ಗಮನಿಸಿಯೇ ಚೀನಾ ಈ ಅವಧಿಯಲ್ಲಿ ತನ್ನದೇ ಬೌದ್ಧ ಶಿಕ್ಷಣ ಕೇಂದ್ರವೊಂದನ್ನು ಕಟ್ಟಿ ನಿಲ್ಲಿಸಿತೇನೋ. ಕಳೆದ ಮೇವರೆಗೂ ಈ ವಿಷಯವನ್ನು ರಹಸ್ಯವಾಗಿರಿಸಿದ್ದ ಚೀನಾ, ಇದೀಗ ಅಕಾಡೆಮಿಯ ಜಾಲತಾಣದ ಮೂಲಕ ಇದು ಜಗತ್ತಿನ ಬೌದ್ಧ ಶಿಕ್ಷಣದ ಕೇಂದ್ರವಾಗಲಿದೆ. ವಿಶ್ವದ ವಿದ್ಯಾರ್ಥಿಗಳೆಲ್ಲ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದು ಎನ್ನುತ್ತ ನಗೆ ಬೀರಿದೆ.

  Leave a Reply