ಸೆಹ್ವಾಗ್ ನನ್ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದರು ಅಂತ ಆರ್ ಅಶ್ವಿನ್ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್:

ವೀರೆಂದ್ರ ಸೆಹ್ವಾಗ್ ಆಟಗಾರನಾಗಿ ನಿವೃತ್ತಿ ಹೊಂದಿದರೂ ಆಗಿದ್ದಾಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಟೀಂ ಇಂಡಿಯಾ ಕೋಚ್ ಆಕಾಂಕ್ಷಿಯಾಗಿರುವ ಸೆಹ್ವಾಗ್, ಒಂದು ಕಾಲದಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಯಾವ ಮಟ್ಟಿಗೆ ಕಾಡಿದ್ದರು ಎಂದರೆ ಅಶ್ವಿನ್ ಗೆ ‘ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಯೋಗ್ಯನೇ’ ಎಂಬ ಅನುಮಾನ ಕಾಡಿತ್ತಂತೆ.

ಟೀಂ ಇಂಡಿಯಾ ಅಭ್ಯಾಸದ ವೇಳೆ ನೆಟ್ಸ್ ನಲ್ಲಿ ಸೆಹ್ವಾಗ್ ತಮ್ಮ ಬೌಲಿಂಗ್ ಅನ್ನು ಲೀಲಾಜಾಲವಾಗಿ ದಂಡಿಸುತ್ತಿದ್ದದನ್ನು ಕಂಡು ಅಶ್ವಿನ್ ಮನದಲ್ಲಿ ಈ ಅನುಮಾನ ಹುಟ್ಟಿತ್ತು. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪರದಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸೆಹ್ವಾಗ್ ಹೇಗೆ ತಮ್ಮ ಮನೋಬಲ ಕುಗ್ಗಿಸಿದ್ದರು ಎಂಬುದರ ಬಗ್ಗೆ ಸ್ವತಃ ಆರ್.ಅಶ್ವಿನ್ ‘ವಾಟ್ ದ ಡಕ್ 2’ ಎಂಬ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಶ್ವಿನ್ ಅವರು ಸೆಹ್ವಾಗ್ ಅವರ ಜತೆಗಿನ ತಮ್ಮ ಅನುಭವವನ್ನು ವಿವರಿಸಿರೋದು ಹೀಗೆ…

‘ತಂಡದ ಅಭ್ಯಾಸದ ವೇಳೆ ಸೆಹ್ವಾಗ್ ಅವರಿಗೆ ಬೌಲಿಂಗ್ ಮಾಡುವುದು ಎಂದರೆ ನನಗೆ ದೊಡ್ಡ ಸವಾಲಾಗಿತ್ತು. ಅವರು ಎಂದಿಗೂ ನನ್ನ ಎಸೆತಗಳನ್ನು ಕಠಿಣ ಎಂದು ಭಾವಿಸುತ್ತಿರಲಿಲ್ಲ. ಒಮ್ಮೆ ನಾವು ಶ್ರೀಲಂಕಾ ಪ್ರವಾಸ ಕೈಗೊಂಡಿದ್ದೆವು. ಆಗ ದಂಬುಲಾದ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿರುವಾಗ ನಾನು ಸೆಹ್ವಾಗ್ ಅವರಿಗೆ ಬೌಲಿಂಗ್ ಮಾಡಲು ಆರಂಭಿಸಿದೆ. ಮೊದಲ ಎಸೆತವನ್ನು ಆಫ್ ಸ್ಟಂಪಿನ ಆಚೆಗೆ ಎಸೆದೆ. ಅದನ್ನು ಅವರು ಕಟ್ ಮಾಡಿದರು. ನಂತರ ಆಫ್ ಸ್ಟಂಪಿನ ಮೇಲೆ ಮಾಡಿದೆ ಅದನ್ನೂ ಕಟ್ ಮಾಡಿದರು. ನಂತರ ಮಧ್ಯದ ಸ್ಟಂಪ್ ಮೇಲೆ ಬೌಲಿಂಗ್ ಮಾಡಿದೆ ಆ ಎಸೆತವನ್ನು ಕಟ್ ಮಾಡಿದರು. ನಂತರ ಲೆಗ್ ಸ್ಟಂಪ್ ಮೇಲೆ ಮಾಡಿದೆ ಅದನ್ನು ಕಟ್ ಮಾಡಿದರು. ನಂತರದ ಎಸೆತವನ್ನು ಫುಲ್ ಲೆಂತ್ ನಲ್ಲಿ ಹಾಕಿದೆ. ಆಗ ಮುನ್ನುಗ್ಗಿದ ಸೆಹ್ವಾಗ್ ಚೆಂಡನ್ನು ಸಿಕ್ಸ್ ಗೆ ಕಳುಹಿಸಿದರು.

ಆ ಸಂದರ್ಭದಲ್ಲಿ ನನ್ನ ಮನಸ್ಸಿನಲ್ಲಿ ಎರಡು ಅಭಿಪ್ರಾಯ ಮೂಡಿತು. ಒಂದು ನಾನು ಉತ್ತಮ ಬೌಲರ್ ಅಲ್ಲ ಅಥವಾ ಸೆಹ್ವಾಗ್ ಅಸಮಾನ್ಯ ಆಟಗಾರನಾಗಿರಬೇಕು ಎಂದು. ನಾನು ನೆಟ್ಸ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೂ ಬೌಲಿಂಗ್ ಮಾಡುವಾಗ ಇಷ್ಟು ದೊಡ್ಡ ಸಮಸ್ಯೆ ಎದುರಿಸಿರಲಿಲ್ಲ. ಆದರೆ ಸೆಹ್ವಾಗ್ ಮಾತ್ರ ನನಗೆ ದೊಡ್ಡ ಸವಾಲಾಗಿ ಕಾಡುತ್ತಿದ್ದರು. ಸೆಹ್ವಾಗ್ ನನ್ನ ಎಸೆತವನ್ನು ಮನಬಂದಂತೆ ಚಚ್ಚುತ್ತಿರುವುದನ್ನು ಕಂಡು ನನ್ನಿಂದ ಸುಮ್ಮನಿರಲು ಸಾಧ್ಯವಾಗಲಿಲ್ಲ. ನೇರವಾಗಿ ಸೆಹ್ವಾಗ್ ಬಳಿಗೆ ಹೋಗಿ ನನ್ನ ಬೌಲಿಂಗ್ ನಲ್ಲಿ ಯಾವ ಅಂಶ ಸುಧಾರಿಸಿಕೊಳ್ಳಬೇಕಿದೆ ಎಂದು ನೇರವಾಗಿ ಕೇಳಿದೆ. ಆಗ ಅವರ ಉತ್ತರ ಭಿನ್ನವಾಗಿತ್ತು.

ನನ್ನ ಪಾಲಿಗೆ ಆಫ್ ಸ್ಪಿನ್ನರ್ ಗಳೆಂದರೆ ಬೌಲರ್ ಗಳೇ ಅಲ್ಲ. ಅವರಿಂದ ನನಗೆ ಯಾವುದೇ ಸಂದರ್ಭದಲ್ಲೂ ಸಮಸ್ಯೆ ಎದುರಾಗುವುದಿಲ್ಲ. ಹೀಗಾಗಿ ಆಫ್ ಸ್ಪಿನ್ನರ್ ಗಳ ಎಸೆತವನ್ನು ನಾನು ಆರಾಮಾಗಿ ಹೊಡೆಯುತ್ತೇನೆ ಎಂದರು. ನನ್ನ ಎಸೆತವನ್ನು ನೀವು ಸುಲಭವಾಗಿ ಕಟ್ ಮಾಡುತ್ತಿದ್ದಿರಿ ಎಂದು ಕೇಳಿದೆ. ಅದಕ್ಕೆ ಅವರು, ಹೌದು ನಾನು ಸ್ಪಿನ್ ಗೆ ವಿರುದ್ಧವಾಗಿ ಹೊಡೆಯುತ್ತೇನೆ. ಆಫ್ ಸ್ಪಿನ್ನರ್ ಗಳಿಗೆ ಆಫ್ ಸೈಡ್ ಹಾಗೂ ಲೆಗ್ ಸ್ಪಿನ್ನರ್ ಗಳಿಗೆ ಲೆಗ್ ಸೈಡ್ ಹೊಡೆಯುತ್ತೇನೆ ಎಂದರು. ಆಗ ಸರಿ ಎಂದು ಹೇಳಿ ಸುಮ್ಮನಾದೆ. ಮರುದಿನ ನೆಟ್ಸ್ ನಲ್ಲಿ ಸೆಹ್ವಾಗ್ ಅವರಿಗೆ ಬೌಲಿಂಗ್ ಮಾಡುವಾಗ ಹೊಸ ಎಸೆತಗಳನ್ನು ಪ್ರಯೋಗಿಸಿದೆ ಆಗಲೂ ಅವರು ವಿಭಿನ್ನ ಹೊಡೆತಗಳಿಂದ ನನಗೆ ಮತ್ತಷ್ಟು ಸವಾಲಾದರು. ನನ್ನನ್ನು ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿರುವ 10 ವರ್ಷದ ಹುಡುಗನಂತೆ ಭಾವಿಸಿ ನನ್ನ ಎಸೆತಗಳನ್ನು ಸುಲಭವಾಗಿ ಹೊಡೆಯುತ್ತಿದ್ದರು. ಇದರಿಂದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಲು ನನಗೆ ಸಾಮರ್ಥ್ಯವಿಲ್ಲವೇ ಎಂಬ ಅನುಮಾನ ಕಾಡಲಾರಂಭಿಸಿತು.

ಹೀಗೆ ಅನೇಕ ಬಾರಿ ನಾನು ನೆಟ್ಸ್ ನಲ್ಲಿ ಸೆಹ್ವಾಗ್ ಅವರಿಂದ ಹೊಡೆಸಿಕೊಂಡ ಮೇಲೆ ಅವರ ನ್ಯೂನತೆಯನ್ನು ಕಂಡುಕೊಂಡೆ. ಅದೇನೆಂದರೆ, ನಾನು ಉತ್ತಮ ಎಸೆತಗಳನ್ನು ಮಾಡಿದರೆ, ಸೆಹ್ವಾಗ್ ರಿಂದ ಬೌಂಡರಿ, ಸಿಕ್ಸರ್ ಹೊಡೆಸಿಕೊಳ್ಳುವುದು ಖಚಿತ. ಹೀಗಾಗಿ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಕೆಟ್ಟ ಎಸೆತಗಳನ್ನು ಮಾಡಬೇಕು ಎಂದು.

ಕಾರಣ, ಸೆಹ್ವಾಗ್ ಬೌಲರ್ ಚೆಂಡನ್ನು ಎಸೆಯುವ ಮುನ್ನ ಅವರಿಂದ ಅತ್ಯುತ್ತಮ ಎಸೆತವನ್ನು ನಿರೀಕ್ಷಿಸುತ್ತಿದ್ದರು. ಹೀಗಾಗಿ ನಾನು ಅವರ ಆಲೋಚನೆಗೆ ತಕ್ಕಂತೆ ಉತ್ತಮ ಎಸೆತ ಮಾಡಿದರೆ ಅವರು ದಂಡಿಸುತ್ತಿದ್ದರು. ನಾನು ಸೆಹ್ವಾಗ್ ಅವರಿಗೆ ಬೌಲಿಂಗ್ ಮಾಡುವ ಬದಲು, ಅವರ ಅಹಂಗೆ ಸವಾಲಾಗಿ ಬೌಲಿಂಗ್ ಮಾಡಬೇಕೆಂಬ ಅಂಶ ನನಗೆ ಅರಿವಾಯ್ತು. ಹೀಗಾಗಿ ಸೆಹ್ವಾಗ್ ಉತ್ತಮ ಎಸೆತವನ್ನು ನಿರೀಕ್ಷಿಸುತ್ತಿರುವಾಗ ಅವರ ಊಹೆಗೆ ನಿಲುಕದಂತೆ ಒಂದು ಕೆಟ್ಟ ಎಸೆತ ಮಾಡಿದರೆ ಅವರನ್ನು ನಿಯಂತ್ರಿಸಬಹುದು ಎಂಬುದನ್ನು ಅರಿತೆ. ಇದೇ ತಂತ್ರಗಾರಿಕೆಯನ್ನು ಹಲವು ಬಾರಿ ಐಪಿಎಲ್ ಪಂದ್ಯಗಳಲ್ಲೂ ಪ್ರಯೋಗಿಸಿದೆ. ಅದರ ಫಲವಾಗಿ ಅನೇಕ ಬಾರಿ ಅವರ ವಿಕೆಟ್ ಅನ್ನು ಪಡೆಯುವಲ್ಲಿ ಯಶಸ್ವಿಯಾದೆ.’

Leave a Reply