‘ಗೋಮಾಂಸಕ್ಕೆ ಮೆಕ್ಕಾ ಮದೀನಗಳಲ್ಲಿಲ್ಲ ಅವಕಾಶ, ಪ್ರವಾದಿ ಸಹ ಗೋಮಾಂಸ ಬೇಡ ಎಂದಿದ್ದರು’- ಆರೆಸ್ಸೆಸ್ ಇಂದ್ರೇಶರ ಹೊಸ ವಾದ

ಡಿಜಿಟಲ್ ಕನ್ನಡ ಟೀಮ್:

‘ಮುಸಲ್ಮಾನರ ಪವಿತ್ರ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾದಲ್ಲಿ ಗೋವು ಹತ್ಯೆ ಮತ್ತು ಗೋಮಾಂಸ ಭಕ್ಷಣೆಗೆ ಅವಕಾಶವಿಲ್ಲ. ಹೀಗಿರುವಾಗ ಕೆಲವರು ಈ ವಿಚಾರದಲ್ಲಿ ಮುಸಲ್ಮಾನರನ್ನು ಯಾಕೆ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹೀಗಾಗಿ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಗೋಮಾಂಸ ಸೇವನೆಯನ್ನು ಬಿಡಬೇಕು…’ ಈ ಒಂದು ಹೊಸ ವಾದವನ್ನು ಮಂಡಿಸಿರೋದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್.

ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಆರೆಸ್ಸೆಸ್ ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಇಂದ್ರೇಶ್ ಕುಮಾರ್ ತಮ್ಮ ಈ ವಾದ ಮಂಡಿಸಿದರು. ಅದೇ ವೇಳೆ ಮತ್ತೊಂದು ಇಫ್ತಾರ್ ಕೂಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಗುಂಪು ಇಂದ್ರೇಶ್ ಅವರ ಈ ಮಾತನ್ನು ವಿರೋಧಿಸಿದರು. ಅಲ್ಲದೆ, ‘ಇಂದ್ರೇಶ್ ಅವರು ಮುಸಲ್ಮಾನರು ಸಸ್ಯಹಾರಿಗಳಾಗಬೇಕು ಎಂಬ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ವಿಚಾರದ ಬಗ್ಗೆ ರೆಡಿಫ್ ಗೆ ನೀಡಿರುವ ಸಂದರ್ಶನದಲ್ಲಿ ಇಂದ್ರೇಶ್ ಕುಮಾರ್ ನೀಡಿರುವ ಹೇಳಿಕೆಯ ಸಾರಾಂಶ ಹೀಗಿದೆ…

‘ನಾನು ಸುಮಾರು 5 ಸಾವಿರ ಮುಸ್ಲಿಂ ಪಂಡಿತರನ್ನು ಭೇಟಿ ಮಾಡಿದ್ದೇನೆ. ಗೋವು ಮತ್ತು ಇಸ್ಲಾಂ ಕುರಿತು ಓದಿದ್ದೇನೆ. ಕುರಾನಿನಲ್ಲಿ ಎಲ್ಲಿಯೂ ಗೋಹತ್ಯೆ ಬಗ್ಗೆ ಪ್ರಸ್ತಾಪವಿಲ್ಲ. ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾ ಹಾಗೂ ಮದೀನಾಗಳಲ್ಲಿ ಗೋಹತ್ಯೆಗೆ ನಿಷೇಧವಿದೆ. ಗೋಮಾಂಸ ಮಾರಾಟಕ್ಕೆ ಅಲ್ಲಿ ಅನುಮತಿ ಸಹ ಇಲ್ಲ. ಸೌದಿ ಅರೆಬಿಯಾದಲ್ಲಿ ಮುಸಲ್ಮಾನರು ಬಕ್ರೀದ್ ಸಂದರ್ಭದಲ್ಲಿ ಕೇವಲ ಮೇಕೆಗಳನ್ನು ಕಡಿಯುತ್ತಾರೆ. ನಾನು ಗೋಹತ್ಯೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಹೊರತು ಮೇಕೆಗಳನ್ನು ಕಡಿಯುವ ಬಗ್ಗೆ ಅಲ್ಲ. ನನ್ನ ಪ್ರಶ್ನೆ ಕೇವಲ ಗೋಹತ್ಯೆ ವಿರುದ್ಧವೇ ಹೊರತು ಮೇಕೆಯ ಕುರಿತಾಗಿ ಅಲ್ಲ.

ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಗ್ರಂಥಗಳಲ್ಲಿ ಪ್ರವಾದಿ ಆ್ಯಡಮ್ ಅಥವಾ ಪ್ರವಾದಿ ಮೊಹಮದ್ ಅವರು ಗೋ ಮಾಂಸ ಸೇವನೆ ಮಾಡಿದ್ದರ ಬಗ್ಗೆಯಾಗಲಿ ಅಥವಾ ಗೋ ಹತ್ಯೆ ಮಾಡಿರುವ ಬಗ್ಗೆಯಾಗಲಿ ಉಲ್ಲೇಖವಿದೆಯೇ? ನೀವು ಹದಿತ್ (ಪ್ರವಾದಿ ಮೊಹಮದ್ ಅವರ ಸಂದೇಶಗಳು) ನಲ್ಲಿಯೂ ಪರಿಶೀಲಿಸಿ. ಪ್ರವಾದಿ ಮೊಹಮದ್ ಅವರಿಗೆ ಒಮ್ಮೆ ಗೋಮಾಂಸವನ್ನು ಸೇವನೆಗೆಂದು ನೀಡಿದಾಗ ಅವರು ಅದನ್ನು ನಿರಾಕರಿಸಿದ್ದರು. ಆಗ ಅವರು ಗೋಮಾಂಸ ಸೇವನೆ ಒಂದು ರೋಗವಿದ್ದಂತೆ. ಕೇವಲ ಹಸುವಿನ ಹಾಲು ಮತ್ತು ತುಪ್ಪವಷ್ಟೇ ಆರೋಗ್ಯಕರ ಎಂದು ಹೇಳಿದ್ದರು. ಮುಸಲ್ಮಾನರು ಗೋಮಾಂಸ ಸೇವನೆ ಯಾವಾಗ ಆರಂಭಿಸಿದರು. ಅವರ ಆಹಾರ ಪದ್ಧತಿಯಲ್ಲಿ ಗೋಮಾಂಸ ಸೇರಿಕೊಂಡಿದ್ದು ಹೇಗೆ ಎಂಬುದನ್ನು ಪತ್ತೆ ಹಚ್ಚುವುದು ನನ್ನ ಕೆಲಸವಲ್ಲ. ಮುಸಲ್ಮಾನರು ಪ್ರವಾದಿಗಳು ತೋರಿಸಿಕೊಟ್ಟ ಹಾದಿಯನ್ನು ಅನುಸರಿಸುತ್ತಾರೆ. ಹೀಗಾಗಿ ಪ್ರವಾದಿಗಳ ಹಾದಿಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಹೀಗೆ ಮುಸಲ್ಮಾನರ ಪವಿತ್ರ ಗ್ರಂಥ ಕುರಾನಿನಲ್ಲಿ ಗೋಹತ್ಯೆಯ ಉಲ್ಲೇಖವಿಲ್ಲ. ಜತೆಗೆ ಪವಿತ್ರ ಸ್ಥಳ ಮೆಕ್ಕಾ ಮದೀನಗಳಲ್ಲಿಯೂ ಗೋಹತ್ಯೆ ನಿಷೇಧವಿದ್ದರೂ ಈ ವಿಚಾರದಲ್ಲಿ ಕೆಲವರು ಮುಸಲ್ಮಾನರನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಇದಕ್ಕೆ ಕಾರಣವೇನು ಎಂಬುದು ನನಗೆ ಅರ್ಥವಾಗುತ್ತಿಲ್ಲ.’

Leave a Reply