ತನ್ನ ಮೇಲಿನ ಉಗ್ರ ದಾಳಿಗೆ ಸೌದಿಯೇ ಕಾರಣ ಎಂದಿದೆ ಇರಾನ್, ಮುಸ್ಲಿಂ ರಾಷ್ಟ್ರಗಳ ನಡುವೆ ತಾರಕಕ್ಕೇರಲಿದೆಯೇ ಜಗಳ?

ಡಿಜಿಟಲ್ ಕನ್ನಡ ಟೀಮ್:

ಇಸ್ಲಾಂ ರಾಷ್ಟ್ರಗಳ ಮೇಲಿನ ಉಗ್ರರ ದಾಳಿ ಮುಂದುವರಿದಿದೆ. ನಿನ್ನೆ ಬೆಳಗ್ಗೆ ಇರಾನಿನ ಸಂಸತ್ ಕಟ್ಟಡದ ಮೇಲೆ ಉಗ್ರರ ದಾಳಿ ನಡೆದಿದ್ದು, ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಾದ ಅತಿ ದೊಡ್ಡ ದಾಳಿ ಎಂದು ಹೇಳಲಾಗುತ್ತಿದೆ.

ಈ ದಾಳಿಯಲ್ಲಿ ಕನಿಷ್ಟ 12 ಮಂದಿ ಸತ್ತಿದ್ದು, 46 ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ. ಈ ದಾಳಿಯನ್ನು ಖಂಡಿಸಿರುವ ಇರಾನ್, ಈ ಉಗ್ರ ಕೃತ್ಯದ ಹಿಂದೆ ಸೌದಿ ಅರೆಬಿಯಾದ ಕೈವಾಡವಿದೆ ಎಂಬ ಗಂಭೀರ ಆರೋಪ ಮಾಡಿದೆ. ಇತ್ತೀಚೆಗಷ್ಟೇ ಗಲ್ಫ್ ರಾಷ್ಟ್ರಗಳು ಕತಾರ್ ದೇಶವನ್ನು ತಮ್ಮ ಒಕ್ಕೂಟದಿಂದ ದೂರವಿಡಲು ನಿರ್ಧರಿಸಿರುವ ಬೆನ್ನಲ್ಲೇ, ಈಗ ಇರಾನ್ ಹಾಗೂ ಸೌದಿ ನಡುವೆ ಎದ್ದಿರುವ ಭಿನ್ನಾಭಿಪ್ರಾಯ ಅರಬ್ ರಾಷ್ಟ್ರಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಖಚಿತಪಡಿಸಿದೆ.

ನಿನ್ನೆ ಶಸ್ತ್ರಸಜ್ಜಿತ ಉಗ್ರರು ಬೆಳಗ್ಗೆ 10.30ರ ಸುಮಾರಿಗೆ ಇರಾನ್ ಸಂಸತ್ ಕಟ್ಟಡದ ಮೇಲೆ ಗುಂಡಿನ ದಾಳಿ ಮಾಡಿದ್ದರು. ಈ ಉಗ್ರರ ಗುಂಪಿನಲ್ಲಿ ಕೆಲವರು ಮಹಿಳೆಯರ ವೇಷಧರಿಸಿದ್ದರು. ದಾಳಿಯಲ್ಲಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಯಿತು. ಈ ವೇಳೆ ಕೆಲವರನ್ನು ಅಪಹರಿಸುವ ಪ್ರಯತ್ನ ನಡೆಯಿತು. ಆದರೆ ಕೂಡಲೇ ಎಚ್ಚೆತ್ತ ಇರಾನಿನ ಪ್ಯಾರಾಮಿಲಿಟರಿ ಪಡೆಯಾದ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ಸ್ ಗ್ರೂಪ್ ತಕ್ಷಣವೇ ಪ್ರತಿ ದಾಳಿ ನಡೆಸಿತು. ಮಧ್ಯಾಹ್ನದವರೆಗೂ ನಡೆದ ಕಾರ್ಯಾಚರಣೆಯಲ್ಲಿ ಆರು ಉಗ್ರರನ್ನು ಹತ್ಯೆ ಮಾಡಲಾಯಿತು. ಈ ಕಾರ್ಯಾಚರಣೆ ಸಂದರ್ಭದಲ್ಲಿ 11 ಮಂದಿ ಸಂಸತ್ ಕಟ್ಟಡದ ಬಳಿ ಸತ್ತರೆ, ಒಬ್ಬ ವ್ಯಕ್ತಿ 1979ರ ಕ್ರಾಂತಿಯ ನೇತೃತ್ವ ವಹಿಸಿದ್ದ ಅಯತೊಲ್ಲಾ ರುಹೊಲ್ಲಾ ಖೊಮೆನಿ ಅವರ ಸಮಾದಿ ಬಳಿ ಮೃತಪಟ್ಟಿದ್ದಾನೆ. ಈ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ಐವರು ಶಂಕಿತರನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ಕಳೆದ ಕೆಲವು ವಾರಗಳಿಂದ ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಉಗ್ರ ದಾಳಿಯ ಹೊಣೆಯನ್ನು ಸುನ್ನಿ ತೀವ್ರವಾದಿಗಳ ಸಂಘಟನೆ ಹೊತ್ತುಕೊಂಡಿದೆ. ಈ ನಡುವೆ ಪ್ಯಾರಾ ಮಿಲಿಟರಿ ಪಡೆಯ ಮುಖ್ಯಸ್ಥ ಡೆಪ್ಯೂಟಿ ಕಮಾಂಡರ್ ಜೆನರಲ್ ಹುಸೈನ್ ಸಲಾಮಿ, ಈ ದಾಳಿಯ ಹಿಂದೆ ಸೌದಿ ಅರೆಬಿಯಾ ಹಾಗೂ ಅಮೆರಿಕದ ಕೈವಾಡವಿದೆ ಎಂದು ನೇರ ಆರೋಪ ಮಾಡಿದ್ದಾರೆ.

ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೌದಿ ಅರೆಬಿಯಾ ಭೇಟಿ ಮಾಡಿದ ನಂತರ ಈ ರಾಷ್ಟ್ರಗಳ ನಡುವಣ ಹಲವು ಬೆಳವಣಿಗೆಗಳು ತೀವ್ರವಾಗುತ್ತಿವೆ. ಈ ಪ್ರದೇಶದಲ್ಲಿ ಇರಾನ್ ಹಾಗೂ ಸೌದಿ ಅರೆಬಿಯಾ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಇರಾನ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಕತಾರ್ ದೇಶವನ್ನು ಸೌದಿ ನೇತೃತ್ವದ ಇತರೆ ಗಲ್ಫ್ ರಾಷ್ಟ್ರಗಳು ತಮ್ಮ ಒಕ್ಕೂಟದಿಂದ ದೂರವಿಡಲು ಮುಂದಾಗಿವೆ. ಇದರ ಬೆನ್ನಲ್ಲೇ ಇರಾನ್ ಮೇಲೆ ನಡೆದಿರುವ ಈ ದಾಳಿ ಹಾಗೂ ಈ ಕೃತ್ಯದ ಹಿಂದೆ ಸೌದಿಯ ಕೈವಾಡವಿದೆ ಎಂಬ ಆರೋಪ ಗಮನ ಸೆಳೆದಿದೆ. ಮುಂದಿನ ದಿನಗಳಲ್ಲಿ ಈ ಮುಸ್ಲಿಂ ರಾಷ್ಟ್ರಗಳ ನಡುವಣ ಬಿರುಕು ಮತ್ತಷ್ಟು ದೊಡ್ಡದಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Leave a Reply