ಬ್ರಿಟನ್ ಹಂಗಿನರಮನೆ: ಯಾರು ಅಧಿಕಾರ ಹಿಡಿದ್ರೆ ಏನಾಗುತ್ತೆ? ನೀವು ತಿಳಿಯಬೇಕಿರುವ ಚುನಾವಣಾ ಫಲಿತಾಂಶ

ಡಿಜಿಟಲ್ ಕನ್ನಡ ಟೀಮ್

ಇಂಗ್ಲೆಂಡ್ ನಲ್ಲಿ ಎರಡು ಪ್ರಮುಖ ಬಣಗಳಾದ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳಲ್ಲಿ ಯಾವೊಂದೂ ಬಹುಮತ ಪಡೆಯುವ ಸ್ಥಿತಿ ಇಲ್ಲವಾದ್ದರಿಂದ ಮತ್ತೊಬ್ಬರ ರಾಜಕೀಯ ಹಂಗು ಬೇಕೇ ಬೇಕಾಗಿದೆ.

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಪರ ಭಾರಿ ಜನಬೆಂಬಲವಿದೆ ಎಂದೇ ಅಭಿಪ್ರಾಯ ರೂಪುಗೊಂಡಿತ್ತು. ಇದನ್ನು ನಂಬಿಯೇ ಮೇ ಅವಧಿಗೂ ಮುನ್ನ ಚುನಾವಣೆಗೆ ಹೋದರು. ಆದರೆ ಲೆಕ್ಕಾಚಾರ ಉದುರಿಹೋಗಿದೆ.

ಈಗಿನ ಲೆಕ್ಕ

ಥೆರೇಸಾ ಮೇ ಅವರ ಕನ್ಸರ್ವೇಟಿವ್ ಪಕ್ಷ 312 ಸ್ಥಾನಗಳನ್ನು ಪಡೆದಿದೆ. ಇದು ಈ ಹಿಂದಿನ 13 ಸ್ಥಾನಗಳನ್ನು ಕಳೆದುಕೊಂಡಂತೆ. 31 ಸ್ಥಾನಗಳನ್ನು ಹೊಸದಾಗಿ ಗಳಿಸಿಕೊಂಡಿರುವ ಲೇಬರ್ ಪಕ್ಷ 260 ಸ್ಥಾನ ಗಳಿಸಿದೆ. ಸ್ಕಾಟಿಶ್ ನ್ಯಾಷನಲ್ ಪಾರ್ಟಿ 35 ಹಾಗೂ ಲಿಬರಲ್ ಡೆಮಾಕ್ರಟ್ 12 ಸ್ಥಾನಗಳನ್ನು ಗಳಿಸಿವೆ.

ಥೆರೇಸಾ ಮೇ ನಿರ್ಗಮಿಸಬೇಕಾ?

ಈ ಪ್ರಶ್ನೆಗೆ ಉತ್ತರವಿನ್ನೂ ಸ್ಪಷ್ಟವಿಲ್ಲ. ಲೇಬರ್ ಪಕ್ಷಕ್ಕೆ ಸಹ ಬಹುಮತ ಇಲ್ಲದಿರುವುದರಿಂದ ಥೆರೇಸಾ ಮತ್ತೆ ಸರ್ಕಾರ ರಚಿಸುವ ಅವಕಾಶವಿದ್ದರೂ ‘ಸ್ಥಿರ ಹಾಗೂ ನಿರ್ಣಾಯಕ ನಾಯಕತ್ವ’ ಎಂಬ ಚುನಾವಣಾ ಘೋಷಣೆಯನ್ನು ಈಗಿನ ದುರ್ಬಲ ಸ್ಥಾನದಲ್ಲಿ ಕೊಡುವುದು ಕಷ್ಟದ ಮಾತು.

ಲೇಬರ್ ಪಕ್ಷದ ಹೀರೋ ಜೆರೆಮಿ ಕಾರ್ಬಿನ್

ಪ್ರಧಾನಿ ಪಟ್ಟದ ಮೇಲೆ ಕೂರುವಷ್ಟು ಸ್ಥಾನ ಬರದಿದ್ದರೂ ಬ್ರಿಟನ್ ರಾಜಕಾರಣದಲ್ಲಿ ಲೇಬರ್ ಪಕ್ಷವನ್ನು ಪುನರುಜ್ಜೀವಿಸಿ ಸೈದ್ಧಾಂತಿಕವಾಗಿ ವಿರೋಧಿ ಬಲವೊಂದನ್ನು ಎದ್ದುನಿಲ್ಲಿಸಿರುವ ಖ್ಯಾತಿ ಜೆರೆಮಿಗೆ.

ಹಾಗಂತ ಜೆರೆಮಿ ಕಾರ್ಬಿನ್ ನಿಲುವುಗಳು ಬ್ರಿಟನ್ ಅನ್ನು ಬಲಪಡಿಸುತ್ತವೆಯೇ? ಹಾಗಂತ ಬ್ರಿಟನ್ನಿಗರು ನಂಬಿ ಸ್ವಲ್ಪಮಟ್ಟಿಗೆ ಹಾರೈಸಿರಬಹುದಾಗಲೀ, ದೇಶದ ಹೊರಗಿನ ವಿಶ್ಲೇಷಕರಿಗೆ ಕೆಲವು ಆಘಾತಗಳಿವೆ.

– ಕಾರ್ಬಿನ್ ರದ್ದು ಪ್ಯಾಲಸ್ತೀನ್ ಪರ ನಿಲುವು. ಹಮಾಸ್ ಸಂಘಟನೆಯನ್ನು ಉಗ್ರರೆಂದು ಗುರುತಿಸುವುದು ತಪ್ಪು ಎಂಬ ಪ್ರತಿಪಾದನೆ. ತಮ್ಮ ವೃತ್ತಿ ಪ್ರಾರಂಭದಲ್ಲಿ ಕಾರ್ಬಿನ್, ಐರಿಶ್ ರಿಪಬ್ಲಿಕನ್ ಆರ್ಮಿ ಎಂಬ ತೀವ್ರವಾದಿ ಗುಂಪನ್ನೂ ಸಹಾನೂಭೂತಿಯಿಂದ ಕಂಡು ವಿವಾದ ಮಾಡಿದ್ದರು.

– ನ್ಯಾಟೊ ಪಡೆಯಿಂದ ಬ್ರಿಟನ್ ಹಿಂತೆಗೆಯಬೇಕಿಲ್ಲವಾದರೂ ಅದರ ಪ್ರಾಮುಖ್ಯ ಕಡಿಮೆಯಾಗಬೇಕೆಂಬ ನಿಲುವು.

– ಡೊನಾಲ್ಡ್ ಟ್ರಂಪ್ ಒಬ್ಬ ವಿಘಟನಕಾರಿ ನಾಯಕ ಎಂಬ ಬಹಿರಂಗ ನಿಲುವು.

– ಕ್ಯೂಬಾದ ಕ್ಯಾಸ್ಟ್ರೊ ಆಡಳಿತ, ವೆನೆಜುವೆಲಾದ ಸಮಾಜವಾದಿ ಆಡಳಿತಗಳ ಬೆಂಬಲಿಗ.

ಒಟ್ಟಿನಲ್ಲಿ ಬ್ರಿಟನ್ ಆಡಳಿತ ಚುಕ್ಕಾಣಿಯನ್ನು ಥೆರೇಸಾ ಮೇ ಮುಂದುವರಿಸಿದರೂ ಬ್ರಿಟನ್ ರಾಜಕಾರಣ ಒಂದು ನಿರ್ದಿಷ್ಟ ನಿಲುವಿನಲ್ಲಿ ಹೋಗುವುದನ್ನು ನಿರೀಕ್ಷಿಸಲಾಗದು.

Leave a Reply