ಶಾಂಘೈ ಸಭೆಯಲ್ಲಿ ಮೋದಿ ಪಾಕಿಸ್ತಾನ ಮತ್ತು ಚೀನಾಗಳೆರಡನ್ನೂ ಪರೋಕ್ಷವಾಗಿ ಗುರಿ ಮಾಡಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್

ಶಾಂಘೈ ಸಹಕಾರ ಒಕ್ಕೂಟ (ಎಸ್ ಸಿ ಒ) ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಭಾಗವಹಿಸುವ ಅವಕಾಶ. ಪಾಕಿಸ್ತಾನಕ್ಕೂ ಸಹ. ಈವರೆಗೆ ಅದು ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಪೇಕಿಸ್ತಾನ್ ಇವುಗಳ ಒಕ್ಕೂಟವಾಗಿತ್ತದು.

ಶಾಂಘೈ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತುಗಳಲ್ಲಿ ಧನ್ಯವಾದ ಹೇಳಿದರು. ಆದರೆ ಸದಸ್ಯ ರಾಷ್ಟ್ರಗಳಿಂದಲೇ ಉದ್ಭವವಾಗುತ್ತಿರುವ ಕೆಲವು ಸಮಸ್ಯೆಗಳನ್ನು ಚರ್ಚಿಸುವುದಕ್ಕೆ ಯಾವುದೇ ಮುಲಾಜು ತೋರಲಿಲ್ಲ.

ಉಗ್ರವಾದ ನಿಯಂತ್ರಣವನ್ನೇ ಮಾತಿನ ಮುಖ್ಯ ತಿರುಳಾಗಿಸಿದರು ನರೇಂದ್ರ ಮೋದಿ. ತೀವ್ರವಾದ, ಉಗ್ರವಾದಿಗಳ ನೇಮಕ, ಹಣಕಾಸು ಒದಗಿಸುವಿಕೆ ಇವೆಲ್ಲವನ್ನೂ ತಡೆಯುವುದಕ್ಕೆ ನಾವೆಲ್ಲ ಏಕೀಕೃತ ಪ್ರಯತ್ನವನ್ನು ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಮಗೆ ಯಾವುದರಲ್ಲೂ ಸಫಲತೆ ಸಿಗುವುದಿಲ್ಲ ಎಂದರು ಮೋದಿ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಉಪಸ್ಥಿತಿಯಲ್ಲಿ ಮೋದಿ ಹೇಳಿದ್ದು ಯಾರಿಗೆಂಬುದನ್ನು ವಿವರಿಸಬೇಕಿಲ್ಲ.

ಇನ್ನು ಚೀನಾವನ್ನು ಉದ್ದೇಶಿಸಿ ಹೇಳಿರುವ ಪರೋಕ್ಷ ಮಾತು- ‘ಜಗತ್ತನ್ನು ಬೆಸೆಯಬೇಕು, ಉತ್ತಮ ಸಂಪರ್ಕ ವ್ಯವಸ್ಥೆ ಆಗಬೇಕು. ಆದರೆ ಈ ನಿಟ್ಟಿನಲ್ಲಿ ಯಾರದ್ದೇ ಸಾರ್ವಭೌಮತೆಗೆ ಹಾಗೂ ಭೌಗೋಳಿಕ ಸಮಗ್ರತೆಗೆ ಧಕ್ಕೆ ತರುವಂತಿರಬಾರದು.’

ಒಬಿಒಆರ್ ಹಾಗೂ ಆರ್ಥಿಕ ಕಾರಿಡಾರ್ ಹೆಸರಲ್ಲಿ ಚೀನಾ ಜಗತ್ತನ್ನು ಬೆಸೆಯುವ ಮಾತನಾಡುತ್ತಿದೆ. ಆದರೆ ಇದರಲ್ಲಿ ಪಾರದರ್ಶಕತೆ ಕಡಿಮೆ ಿದೆ ಎಂದು ಆಕ್ಷೇಪಿಸಿ ಭಾರತ ಇದರಲ್ಲಿ ಪಾಲ್ಗೊಂಡಿರಲಿಲ್ಲ. ಅಲ್ಲದೇ ಚೀನಾ-ಪಾಕಿಸ್ತಾನದ ಆರ್ಥಿಕ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವುದರಿಂದ ಭಾರತ ಅದನ್ನು ತನ್ನ ಭೌಗೋಳಿಕ ಸಮಗ್ರತೆಗೆ ಒದಗಿರುವ ಆತಂಕ ಎಂದೇ ಪರಿಗಣಿಸಿದೆ. ಈ ಹಿನ್ನೆಲೆಗಳಲ್ಲಿ ಪ್ರಧಾನಿಯ ಶಾಂಘೈ ಸಭೆಯ ಮಾತುಗಳು ಚೀನಾದ ನಡೆಗಳಿಗೆ ಮತ್ತೊಮ್ಮೆ ಆಕ್ಷೇಪಗಳನ್ನು ಇಟ್ಟಂತಾಗಿದೆ.

Leave a Reply