ಯುರೋಪ್ ಒಕ್ಕೂಟ ರಾಷ್ಟ್ರಗಳಿಂದ ಚೀನಾಕ್ಕೆ ಬಿತ್ತು ಉಕ್ಕಿನ ಹೊಡೆತ!

ಡಿಜಿಟಲ್ ಕನ್ನಡ ಟೀಮ್:

ಸದ್ಯ ಯುರೋಪ್ ಒಕ್ಕೂಟ ರಾಷ್ಟ್ರಗಳ ನಿರ್ಧಾರವೊಂದು ಚೀನಾಗೆ ಮುಟ್ಟಿ ನೋಡುಕೊಳ್ಳುವಂತಹ ಪೆಟ್ಟು ಕೊಟ್ಟಿದೆ. ಅದೇನೆಂದರೆ, ಚೀನಾದಲ್ಲಿ ತಯಾರಾಗಿ ಯುರೋಪಿಗೆ ರಫ್ತಾಗುವ ಉಕ್ಕಿನ ಮೇಲೆ ಶೇ.35.9ರಷ್ಟು ತೆರಿಗೆ ಹಾಕಲು ಒಕ್ಕೂಟ ರಾಷ್ಟ್ರಗಳು ನಿರ್ಧರಿಸಿವೆ.

ಚೀನಾ ವಿಶ್ವದ ಅತಿ ದೊಡ್ಡ ಉಕ್ಕು ಉತ್ಪಾದಿಸುವ ರಾಷ್ಟ್ರ. ಚೀನಾದ ಪ್ರಬಲ ಸ್ಪರ್ಧೆಗೆ ನಲುಗಿರುವ ಯುರೋಪ್ ನ ಉಕ್ಕಿನ ಕೈಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಒಕ್ಕೂಟ ಈ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದೆ. ನಿನ್ನೆ ಸಭೆ ಸೇರಿದ್ದ ಯುರೋಪ್ ಒಕ್ಕೂಟದ 28 ರಾಷ್ಟ್ರಗಳು ಈ ಒಮ್ಮತದ ನಿರ್ಧಾರಕ್ಕೆ ಬಂದಿವೆ. ಈ ತೆರಿಗೆಯ ಏಟು ಚೀನಾ ಉಕ್ಕಿನ ಕೈಗಾರಿಕೆಗಳಿಗೆ ದೊಡ್ಡ ಮಟ್ಟದ ಹಿನ್ನಡೆಯುಂಟು ಮಾಡಿದೆ.

ಚೀನಾ ಅಧಿಕ ಪ್ರಮಾಣದಲ್ಲಿ ತನ್ನ ಉಕ್ಕಿನ ಉತ್ಪನ್ನಗಳನ್ನು ತಂದು ಯುರೋಪ್ ರಾಷ್ಟ್ರಗಳಲ್ಲಿ ಸುರಿಯುತ್ತಿದೆ. ಇದರಿಂದ ಸ್ಥಳೀಯ ಕೈಗಾರಿಕೆಗಳಿಗೆ ತೀವ್ರ ಪೆಟ್ಟು ಬಿದ್ದಿದೆ ಎಂಬ ಕಾರಣಕ್ಕೆ ಯುರೋಪ್ ಒಕ್ಕೂಟ ಚೀನಾ ಉಕ್ಕಿನ ಮೇಲೆ ತೆರಿಗೆಯ ಬರೆ ಎಳೆದಿದೆ. ಆದರೆ ಇದನ್ನು ನಿರಾಕರಿಸಿರುವ ಚೀನಾ, ಯುರೋಪ್ ಒಕ್ಕೂಟದ ಈ ನಿರ್ಧಾರವನ್ನು ಖಂಡಿಸಿದೆ.

‘ಚೀನಾದ ಉಕ್ಕಿನ ಕೈಗಾರಿಕೆಗಳನ್ನು ಹರಕೆಯ ಕುರಿಯನ್ನಾಗಿ ಮಾಡಲು ಯುರೋಪ್ ಒಕ್ಕೂಟ ಈ ತೆರಿಗೆ ನಿರ್ಧಾರ ಕೈಗೊಂಡಿದೆ. 2016ರಲ್ಲೇ ಚೀನಾದ ಉಕ್ಕಿನ ಉತ್ಪನ್ನಗಳು ಯುರೋಪ್ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಮರೆತಿವೆ. ಚೀನಾ ವಿಶ್ವದ ಅತಿ ದೊಡ್ಡ ಉಕ್ಕಿನ ಉದ್ಪಾದಕ ರಾಷ್ಟ್ರವಾಗಿದ್ದು, ಹೀಗಾಗಿ ನಮ್ಮ ಕೈಗಾರಿಕೆಗಳಿಗೆ ಬೆದರಿಕೆ ಹಾಕಲು ಹಾಗೂ ಅಡ್ಡಿಪಡಿಸಲು ಈ ತಂತ್ರವನ್ನು ಬಳಸಲಾಗುತ್ತಿದೆ. ಯುರೋಪ್ ಒಕ್ಕೂಟದ ಈ ನಿರ್ಧಾರ ವಾಸ್ತವಕ್ಕೆ ದೂರವಾಗಿದೆ’ ಎಂದು ಚೀನಾ ವಾಣಿಜ್ಯ ಸಚಿವಾಲಯದ ಅಧಿಕಾರಿ ವಾಂಗ್ ಹೆಜುನ್ ಪ್ರತಿಕ್ರಿಯಿಸಿದ್ದಾರೆ.

Leave a Reply