ತಿಮಿಂಗಿಲಗಳು ಏಕಪ್ಪ ಇಷ್ಟು ದಪ್ಪ? ಅಮಿತ ಆಹಾರ ಭಕ್ಷಣೆಯೇ ಇಲ್ಲ ವಿಕಾಸದ ಕೀಲಿಕೈ ಚಳಕವೆ?

ಜೀವ ವಿಜ್ಞಾನಿಗಳು ಸದಾ ಹೇಳುವ ಮಾತೊಂದಿದೆ `ನೋಡಿ, ಪ್ರಪಂಚದಲ್ಲಿ ಮಹಾ ದೈತ್ಯ ಜೀವಿಗಳು ಬದುಕಲೂ ಅವಕಾಶವಿದೆ, ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರಿಯ, ವೈರಸ್ಸುಗಳು ಬದುಕಲು ನಿಸರ್ಗ ತಕ್ಕ ಪರಿಸರ ಒದಗಿಸಿದೆ. ಇದು ಸಾಮಾಜಿಕ ನ್ಯಾಯ ಅಲ್ಲವೆ?’ ನಾವು ಒಪ್ಪಲಿ ಬಿಡಲಿ, ಭೂಮಿಯಂತೂ ಅದನ್ನು ಅನುಸರಿಸುತ್ತ ಬಂದಿದೆ. ಒಂದುವೇಳೆ ಭೂಮಿಯನ್ನು ನಾವು ಸಮಾಜವಾದವನ್ನು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರೂ ಅದೇನೂ ನಮ್ಮನ್ನು ಕ್ಯಾರೇ ಎನ್ನುವುದಿಲ್ಲ. ಅದರ ಟೈಂ ಟೇಬಲ್ ಅದಕ್ಕೆ. ನಮ್ಮನ್ನೇನೂ ಅದು ಕೇಳಬೇಕಾಗಿಲ್ಲ. ಏಕೆಂದರೆ ನಾವು ಪ್ರಕೃತಿಯ ಒಂದು ಭಾಗವೇ.

ನೀವು ಒಮ್ಮೆ ಹೀಗೆ ಯೋಚಿಸಿ. ಒಂದುವೇಳೆ ತಿಮಿಂಗಿಲಗಳಿಗೆ ಭೂಮಿಯ ಮೇಲೆ ನಡೆದಾಡಲು ಅವಕಾಶವಿದ್ದಿದ್ದರೆ ಅವು ಎಷ್ಟು ಕಾಲ ಬಾಳುತ್ತಿದ್ದವು? ಅಷ್ಟೊಂದು ಭಾರವನ್ನು ಹೊರುವಂತಹ ಬಲಿಷ್ಠ ಕಾಲುಗಳನ್ನೇ ಅದೇ ನಿಸರ್ಗ ದಯಪಾಲಿಸಬೇಕಾಗಿತ್ತು. ಅಂಥ ಕಾಲು ಇತ್ತೆನ್ನೋಣ, ಆಗಲೂ ಅವು ನಮ್ಮ ನಿಮ್ಮಂತೆ ಸರಸರ ನಡೆದಾಡಲು ಆಗುತ್ತಿರಲಿಲ್ಲ. ಆಹಾರ ಹುಡುಕಲು ಸಾಗುವಾಗ ಅದರ ಭಾರವೇ ಅದಕ್ಕೆ ಶತ್ರುವಾಗುತ್ತಿತ್ತು. ಇನ್ನು ದೀರ್ಘ ಕಾಲ ಬದುಕುವ ಮಾತೆಲ್ಲಿ? ನಿಸರ್ಗ ಯಾವ ಪ್ರಾಣಿ, ಎಷ್ಟು ಗಾತ್ರವಿರಬೇಕು? ಹೇಗೆ ವಿಕಾಸವಾಗಬೇಕು? ತನ್ನ ಶತ್ರುಗಳನ್ನು ಹೇಗೆ ನಿಭಾಯಿಸಬೇಕು ಎಂಬುದಕ್ಕೆಲ್ಲ ಭರ್ಜರಿ ಸೂತ್ರ ಹಾಕಿಕಳಿಸಿದೆ. ಈಗ ಶಾಲಾ ಮಕ್ಕಳಿಗೂ ಗೊತ್ತು, ಭೂಮಿಯಲ್ಲಿ ಆನೆಯೇ ಮಹಾರಾಜ. ಸಮುದ್ರದಲ್ಲಿ ತಿಮಿಂಗಿಲಗಳಿಗೆ ಗಾತ್ರದಲ್ಲಿ ಸ್ಪರ್ಧೆ ನೀಡುವ ಇನ್ನೊಂದು ಜೀವಿ ಇಲ್ಲ. ಸಾಗರದಲ್ಲಿದ್ದರೂ ಅದೇ ಭೂಮಂಡಲದ ಚಕ್ರವರ್ತಿ.

ಈಗ ಅಸಲಿ ಪ್ರಶ್ನೆಗೆ ಬರೋಣ. ತಿಮಿಂಗಿಲಗಳೂ ಮೊದಲಿನಿಂದಲೂ ಹೀಗೆಯೇ ದೈತ್ಯಾಕಾರವಾಗಿದ್ದುವೆ ಅಥವಾ ಯಾವುದೋ ಹಂತದಲ್ಲಿ ತಿಮಿಂಗಿಲಗಳ ಗಾತ್ರದೊಡನೆ ನಿಸರ್ಗ ಆಟವಾಡಿದೆಯೆ? ಹಿಂದಿನ ಗಾತ್ರವನ್ನೆಲ್ಲ ಆಚೆಗಿಟ್ಟು ಭಾರಿ ಗಾತ್ರದ ತಿಮಿಂಗಿಲಗಳು ವಿಕಾಸವಾಗಲು ವಿಕಾಸವೆಂಬ ಸೂತ್ರ ಏನಾದರೂ ಕೈಚಳಕ ಮಾಡಿದೆಯೆ? ವಿಜ್ಞಾನಿಗಳು ಬಹು ದಿನಗಳಿಂದ ಗೊಂದಲಗೊಂಡಿದ್ದ ಪ್ರಶ್ನೆ ಇದು. ಇಪ್ಪತ್ತನೇ ಶತಮಾನ ಕಳೆದರೂ ಇದಕ್ಕೆ ಉತ್ತರವಿರಲಿಲ್ಲ. ಈಗ ದಿಢೀರೆಂದು ಉತ್ತರ ಫ್ಲಾಷ್ ಆಗಿದೆ. ಹಿಂದೆ ಅಂದರೆ ಸುಮಾರು ಮೂವತ್ತು ದಶಲಕ್ಷ ವರ್ಷಗಳ ಹಿಂದೆ ಸಾಗರದಲ್ಲಿ ಅದೇ ಟೀವಿಯಿಂದ ಈಜಾಡುತ್ತಿದ್ದ ತಿಮಿಂಗಿಲಗಳು ಹೆಚ್ಚೆಂದರೆ ಐದು ಮೀಟರ್ ಉದ್ದವಿದ್ದವು. ಇದನ್ನು ಹೇಗೆ ಹೇಳುತ್ತೀರಿ ಎಂದು ನೀವು ಪ್ರಶ್ನೆ ಹಾಕಿದರೆ ಅಮೆರಿಕದ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ವಿಜ್ಞಾನಿಗಳು ಒಂದಲ್ಲ ಅರವತ್ತಕ್ಕೂ ಮಿಕ್ಕಿ ತಿಮಿಂಗಿಲ ಪಳೆಯುಳಿಕೆಗಳನ್ನು ದೊಡ್ಡ ಹಾಲಿನ ತುಂಬ ಭರ್ತಿಮಾಡಿಟ್ಟಿದ್ದಾರೆ, ಅವನ್ನು ತೋರಿಸುತ್ತಾರೆ. ಅವುಗಳ ಬುರುಡೆಯನ್ನು ಎರಡೂ ಕೈಗಳಲ್ಲಿ ಹಿಡಿಯಬಹುದಾಗಿತ್ತು ಎಂದು ನಿಮ್ಮೆದುರಿಗೆ ಡೆಮೋ ಕೊಡುತ್ತಾರೆ.

ತಿಮಿಂಗಿಲಗಳು ದೈತ್ಯಾಕಾರ ಪಡೆದದ್ದು ಯಾವಾಗ? ಮೂವತ್ತು ಮಿಲಿಯನ್ ವರ್ಷಗಳ ಹಿಂದೆ ಸಾಧಾರಣ ಗಾತ್ರವಾಗಿದ್ದ ತಿಮಿಂಗಿಲಗಳು, ದೂರದಲ್ಲಿ ಎಲ್ಲೋ ಇದ್ದ ಕ್ರಿಲ್ ಗಳನ್ನು ಹುಡುಕಿಕೊಂಡು ದೂರ ದೂರ ಹೋಗಬೇಕಾಗಿತ್ತು. ಈ ಪೈಕಿ ಗಾತ್ರದಲ್ಲಿ ಹತ್ತು ಮೀಟರಿಗಿಂತ ಹೆಚ್ಚು ಇದ್ದ ತಿಮಿಂಗಿಲಗಳು ಯಶಸ್ಸು ಪಡೆದವು, ಉಳಿದವು ಸ್ಪರ್ಧೆ ತಾಳಲಾರದೆ ನಿಧಾನಗತಿಯಲ್ಲಿ ಮರೆಯಾದವು. ಹಲ್ಲು ಇಲ್ಲದ ಬಲೀನ್ ಗುಂಪಿಗೆ ಸೇರಿದ ತಿಮಿಂಗಿಲಗಳು ಯಶಸ್ವಿಯಾಗಿ ಬದುಕಲು ನಿಸರ್ಗ ಇನ್ನೊಂದು ತಂತ್ರಗಾರಿಕೆ ಕೊಟ್ಟಿತು. ಟನ್ನುಗಟ್ಟಳೆ ಕ್ರಿಲ್ ಗಳ ಸಮೇತ ನೀರನ್ನು ಹೀರಿಕೊಂಡು ಫಿಲ್ಟರ್ ಮಾಡಿ ನೀರನ್ನು ಮತ್ತೆ ಉಗಿದುಬಿಡುವುದು. ಹೀಗೆಯೇ ಬದುಕು ಸಾಗಿದ್ದಾಗ, ಇದ್ದಕ್ಕಿದ್ದಂತೆ ಹವಾಗುಣ ಬದಲಾಯಿತು, ಹಿಮನದಿಗಳು ಕರಗಿ, ಅದರಲ್ಲಿದ್ದ ಪೌಷ್ಟಿಕಾಂಶವೆಲ್ಲ ಸಾಗರ ಸೇರಿತು. ಇದರ ಜೊತೆಗೆ ಸಾಗರ ತಳದಿಂದ ಪೋಷಕಾಂಶವಿರುವ ತಣ್ಣೀರು ಉಬ್ಬಿಬಂತು, ತಿಮಿಂಗಿಲಗಳಿಗೆ ನಿತ್ಯ ಹಬ್ಬ. ಹೊಟ್ಟೆ ಉಬ್ಬಿಸುತ್ತ ಹೋದವು, ನೋಡನೋಡುತ್ತಲೇ ದೈತ್ಯಾಕಾರ ಪಡೆದವು. ಇದು ಸುಮಾರು ಮೂರರಿಂದ ನಾಲ್ಕು ಮಿಲಿಯನ್ ವರ್ಷಗಳ ಹಿಂದೆ ಆದ ಬದಲಾವಣೆ. ಅವಕ್ಕೆ ಗೊತ್ತಿಲ್ಲದೆ ಸಾಗರದ ಅತಿ ದೈತ್ಯ ಜೀವಿಗಳಾದವು ಎನ್ನುವುದು ಇತ್ತೀಚಿನ ಸಂಶೋಧನೆ.

ದೈತ್ಯ ತಿಮಿಂಗಿಲಗಳು ಮಾತ್ರ ಬಾಯಿಯನ್ನು ಬಹು ದೊಡ್ಡದಾಗಿ ತೆರೆಯಬಲ್ಲವು. ಅಂದರೆ ಅವಕ್ಕೆ ದೊಡ್ಡ ತಿನಿಸುಬೇಕು. ಇದರರ್ಥ ಶರೀರಕ್ಕೆ ಭಾರಿ ಶಕ್ತಿ ಸಂಚಯವೂ ಆಗುತ್ತದೆ. ನೀಲಿ ತಿಮಿಂಗಿಲಗಳ ಗಾತ್ರ ಸುಮಾರು 170 ಟನ್ನನ್ನೂ ಮೀರುತ್ತದೆ. ಉದ್ದ ಸಾಧಾರಣ 30 ಮೀಟರು. ಆಹಾರ ಹುಡುಕಿಕೊಂಡು ಸಾವಿರಾರು ಕಿಲೋ ಮೀಟರು ದೂರ ಸಮುದ್ರಯಾನ ಮಾಡಲು ತಾಕತ್ತು ಬೇಕಲ್ಲ, ಇವಕ್ಕಿದೆ. ಕೆಲವೇ ಲಕ್ಷ ವರ್ಷಗಳಲ್ಲಿ ಎಂಥ ಬಡ್ತಿ? ಹತ್ತು ಟನ್ನಿನಿಂದ 150 ಟನ್ನಿಗೂ ಮೀರಿ. ಸಾಗರದಲ್ಲಿ ಅಪರಿಮಿತ ಪ್ರಮಾಣದಲ್ಲಿ ಲಭ್ಯವಿದ್ದ ಆಹಾರವನ್ನು ಬಳಸಿಕೊಳ್ಳುವ ಚಾಕಚಕ್ಯತೆ ಪ್ರಾಣಿಗಳಿಗಿದ್ದರೆ ಹೀಗೆಯೇ ಅವು ದೈತ್ಯವಾಗಿ ಬೆಳೆಯುತ್ತವೆ. ಒಮ್ಮೆ ವಿಕಾಸದ ಹಂತದಲ್ಲಿ ಈ ಬದಲಾವಣೆಯಾಯಿತೆಂದರೆ ಮುಂದಿನ ಪೀಳಿಗೆಗೂ ಇದೇ ಬಳುವಳಿ. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಹೀಗೆಯೇ ಅವು ಮುಂದಿನ ಲಕ್ಷ ವರ್ಷಗಳಲ್ಲಿ ಎನ್ನೋಣ, ಹೀಗಿರುವುದಕ್ಕಿಂತ ದಢೂತಿಯಾಗಲು ಸಾಧ್ಯವೆ? ಸದ್ಯಕ್ಕೆ ಜೀವಿ ವಿಜ್ಞಾನಿಗಳ ಬಳಿ ಉತ್ತರವಿಲ್ಲ. ಆರೂವರೆ ಕೋಟಿ ವರ್ಷಗಳ ಹಿಂದೆ ಜೀವ ಜಗತ್ತನ್ನೆಲ್ಲ ನಡುಗಿಸಿದ್ದ ಟಿ-ರೆಕ್ಸ್ ಎಂಬ ಭಯಾನಕ ಡೈನೋಸಾರ್ ಕೂಡ 10ರಿಂದ 15 ಟನ್ನಿಗಿಂತ ಹೆಚ್ಚು ತೂಕವಿರಲಿಲ್ಲ. ಆದರೆ ಬ್ರಾಂಟೋಸಾರಸ್ ನಂತಹ ಡೈನೋಸಾರ್ ಗಳು ಐದು ಆನೆ ತೂಕ ಇದ್ದುದಂತೂ ನಿಜ.

ಈಗ ಸಾಗರದ ಉಷ್ಣತೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದೇವೆ. ಇದರ ಪರಿಣಾಮ, ಸಾಗರ ಜೀವಿಗಳಿಗಂತೂ ತಟ್ಟೇ ತಟ್ಟುತ್ತದೆ. ಬದಲಾಗುತ್ತಿರುವ ಈ ಅನಿರೀಕ್ಷಿತ ವಾತಾವರಣಕ್ಕೆ ತಿಮಿಂಗಿಲಗಳು ಹೇಗೆ ಪ್ರತಿಕ್ರಿಯಿಸಬಹುದು? ಬಹುಶಃ 30 ದಶಲಕ್ಷ ವರ್ಷಗಳ ಹಿಂದೆ ಹೇಗೆ ಸಾಧಾರಣ ಗಾತ್ರವಾಗಿದ್ದವೋ ಮತ್ತೆ ಅದೇ ಗಾತ್ರಕ್ಕೆ ಬರಬಹುದು. ಅಂದರೆ ವಿಕಾಸಕ್ಕೆ ನಾವು ಬ್ರೇಕ್ ಹಾಕುತ್ತಿದ್ದೇವೆಯೆ? ಈ ಅನುಮಾನ ಈಗ ವಿಜ್ಞಾನಿಗಳನ್ನು ಕಾಡುತ್ತಿದೆ.

Leave a Reply