ಮಧ್ಯಪ್ರದೇಶ ಹಿಂಸಾಚಾರ: ಬಿಜೆಪಿಯ ಕೃಷಿ ನೀತಿ ವೈಫಲ್ಯದ ಜತೆಯಲ್ಲೇ ಹಿಂಸೆಯ ಕಿಚ್ಚು ಹೊತ್ತಿಸಿದ ಮತ್ತೊಂದು ಮಾದಕ ಮುಖ ಯಾವುದು?

ಡಿಜಿಟಲ್ ಕನ್ನಡ ಟೀಮ್

ಶನಿವಾರದ ಹೊತ್ತಿಗೆ ಮಧ್ಯಪ್ರದೇಶದ ಮಂದ್ಸೌರ್ ರೈತ ಪ್ರತಿಭಟನೆ ಸೃಷ್ಟಿಸಿದ್ದ ಹಿಂಸಾಚಾರ ತುಸು ತಹಬಂದಿಗೆ ಬಂದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣರು ಉಪವಾಸ ಆಚರಿಸಿ ಶಾಂತಿಗೆ ಮನವಿ ಮಾಡಿಕೊಂಡಿದ್ದಾರೆ.

ಪೊಲೀಸ್ ಗೋಲಿಬಾರಿನಲ್ಲಿ ಐವರ ಪ್ರಾಣವನ್ನು ಬಲಿ ತೆಗೆದುಕೊಂಡ ಈ ವಿದ್ಯಮಾನವು ಆಡಳಿತಾರೂಢ ಬಿಜೆಪಿಯ ವೈಫಲ್ಯಕ್ಕೆ ಉದಾಹರಣೆಯಂತೂ ಹೌದೇ ಹೌದು. ಸಮಸ್ಯೆ ಶುರುವಾದಾಗಲೇ ಪ್ರತಿಭಟನಾ ನಿರತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಆಲಿಸುವ ಕೆಲಸವನ್ನು ಚೌಹಾಣ್ ಸರ್ಕಾರ ಮಾಡಲಿಲ್ಲ. ನಂತರ ನಡೆದ ಗೋಲಿಬಾರ್, ಕಾಂಗ್ರೆಸ್ ಅವಧಿಯಲ್ಲಿ ಆಗಿರಲಿಲ್ಲವೇ ಎಂಬ ಬಿಜೆಪಿ ಬೆಂಬಲಿಗರ ಸಮರ್ಥನೆಗಳು ಇವೆಲ್ಲ ಬಿಜೆಪಿಯನ್ನು ಖಳನ ಸ್ಥಾನದಲ್ಲೇ ನಿಲ್ಲಿಸಿವೆ.

ಇಷ್ಟಾಗಿಯೂ ಮಂದ್ಸೈರ್ ನಲ್ಲಿ ಪ್ರತಿಭಟನೆ ಹಿಂಸಾತ್ಮಕವಾಗಿ ಹಬ್ಬುವಷ್ಟರಮಟ್ಟಿಗಿನ ಹಿಂದಿರುವ ಕಿಚ್ಚೇನು ಎಂಬುದನ್ನು ಪ್ರಶ್ನಿಸಲೇಬೇಕಾಗುತ್ತದೆ. ರಸ್ತೆಗೆ ಹಾಲು ಚೆಲ್ಲಿದ್ದು, ಈರುಳ್ಳಿ-ಟೊಮೆಟೊ ಚೆಲ್ಲಿದ್ದು ಎಲ್ಲ ಚಿತ್ರಣಗಳು ಹಾಗಿರಲಿ… ಕೇಳಬೇಕಿರುವ ಪ್ರಶ್ನೆ ಇಷ್ಟಕ್ಕೂ ಮಂದ್ಸೌರ್ ಯಾವ ಬೆಳೆಗೆ ಪ್ರಸಿದ್ಧಿ ಅಂತ.

ಪಾಪಿ ಎಂಬ ಮಾದಕ ಪದಾರ್ಥ ಬೆಳೆಯುವ ಪ್ರಮುಖ ಪ್ರದೇಶವಿದು. ಇದನ್ನು ಬೆಳೆದು ನಿಯಂತ್ರಿತ ರೀತಿಯಲ್ಲಿ ಮಾರುವುದಕ್ಕೆ ಈ ಹಿಂದೆ ವ್ಯಾಪಕ ಅವಕಾಶವಿತ್ತು. ವೈದ್ಯಕೀಯ ಉಪಯೋಗಕ್ಕೆ ಬೇಕಾಗುತ್ತದೆ ಎಂಬ ಕಾರಣದಿಂದ ಇಂಥದೊಂದು ವಿನಾಯತಿ ನೀಡಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಪಾಪಿಯ ಮಾರಾಟದ ಮೇಲೆ ಕಟ್ಟುನಿಟ್ಟು ನಿಯಮಗಳನ್ನು ಹೇರಲಾಯಿತು. ಪರವಾನಗಿ ಉಪಯೋಗಿಸಿಕೊಂಡು ಅಕ್ರಮ ಉಪಭೋಗಕ್ಕೇ ಇದನ್ನು ಹೆಚ್ಚಾಗಿ ಮಾರಲು ಹೊರಟಿದ್ದನ್ನು ನಿಯಂತ್ರಿಸುವುದಕ್ಕೆ ತೆಗೆದುಕೊಂಡ ಕ್ರಮಗಳಿಂದ ಅನೇಕ ಬೆಳೆಗಾರರು ಕೆಲಸ ಕಳೆದುಕೊಂಡರು. ಮಂದ್ಸೌರ್-ನೀಮುಚ್ ಭಾಗದಲ್ಲಿ ಈ ಕುರಿತ ಆಕ್ರೋಶ ಹಲದಿನಗಳಿಂದ ಇತ್ತು.

ಇದರ ಜತೆಗೆ ವಿದ್ಯುತ್ ವ್ಯವಸ್ಥೆ ಹದಗೆಟ್ಟಿದ್ದು, ರೈತರು ಡಿಸೇಲ್ ಪಂಪ್ ಅವಲಂಬಿಸುವಂತಾಯಿತು. ಇದರಿಂದ ವೆಚ್ಚ ಹೆಚ್ಚುತ್ತ ಹೋಯಿತು. ಜತೆಗೆ ಮಾರುಕಟ್ಟೆಯಲ್ಲಿ ಸಹ ಬೇರೆ ಬೆಳೆಗಳಿಗೂ ಸೂಕ್ತ ಬೆಲೆ ಸಿಗದ ವಾತಾವರಣದಿಂದ, ಪಾಪಿ ಲಾಭ ಕಳೆದುಕೊಂಡಿದ್ದರ ಆಕ್ರೋಶ ಮತ್ತಷ್ಟು ಹೆಚ್ಚುವಂತಾಯಿತು. ಹೀಗೆ ಬಿಕ್ಕಟ್ಟು ಬೀದಿಯ ಆಕ್ರೋಶವಾಗುತ್ತಿದ್ದಂತೆ ಬಿಜೆಪಿ ಸರ್ಕಾರವು ಅದನ್ನು ಪರಿಹರಿಸುವುದರಲ್ಲೂ ನಿಧಾನಗತಿ ತೋರಿದ್ದರಿಂದ ವಾಹನಗಳಿಗೆ ಬೆಂಕಿ ಹಚ್ಚುವ, ಹಿಂಸಾಚಾರಕ್ಕಿಳಿಯುವ, ಎಟಿಎಂ ಕೇಂದ್ರಗಳಿಗೆ ಬೆಂಕಿ ಇಡುವ ವಿಧ್ವಂಸ ಮನೋಭಾವ ಸ್ಫೋಟಗೊಂಡಿದೆ. ಸಹಜವಾಗಿಯೇ ಇಂಥ ಸಂದರ್ಭಗಳಲ್ಲಿ ರಾಜಕೀಯ ಬೆಳೆ ತೆಗೆಯುವ ಪ್ರಯತ್ನಗಳಾಗುವುದರಿಂದ ಪರಿಸ್ಥಿತಿ ಇನ್ನಿಲ್ಲದಂತೆ ವಿಷಮಗೊಂಡಿದೆ.

Leave a Reply