ಜಿಎಸ್ಟಿ ಜಾರಿಯಲ್ಲಿ ಜೇಟ್ಲಿ ನಾಯಕನಾಗುತ್ತಿರುವುದು ಹೇಗೆ? ಅವತ್ತು ಕೃಷ್ಣಭೈರೇಗೌಡ, ಇವತ್ತು ಮನೀಷ್ ಸಿಸೋಡಿಯಾ ಗುಣಗಾನ!

ಡಿಜಿಟಲ್ ಕನ್ನಡ ಟೀಮ್:

ವಿತ್ತ ಸಚಿವ ಅರುಣ್ ಜೇಟ್ಲಿಯವರು ಜಿಎಸ್ಟಿ ಮಂಡಳಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕೊಂಡೊಯ್ಯುತ್ತಿದ್ದಾರೆ ಅಂತ ಕೆಲ ದಿನಗಳ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೃಷಿ ಸಚಿವ ಕೃಷ್ಣಭೈರೇಗೌಡರು ಹೇಳಿದ್ದರಷ್ಟೆ. ಆ ಭಾಷಣವನ್ನು ಡಿಜಿಟಲ್ ಕನ್ನಡ ವರದಿ ಮಾಡಿತ್ತು.

ಇದೀಗ ಇಂಥದೇ ಧಾಟಿಯಲ್ಲಿ ಜೇಟ್ಲಿಯವರನ್ನು ಹೊಗಳಿರುವುದು ದೇಹಲಿ ಆಪ್ ಸರ್ಕಾರದ ಸಚಿವ ಮನೀಷ್ ಸಿಸೋಡಿಯಾ.

ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನಡುವಣ ಕಾನೂನು ಸಮರದಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ, ದೆಹಲಿಯ ಹಣಕಾಸು ಸಚಿವ ಮನಿಶ್ ಸಿಸೋಡಿಯಾ ಜೇಟ್ಲಿ ಅವರ ಗುಣಗಾನ ಮಾಡುತ್ತಿದ್ದಾರೆ. ಅದು ಜಿಎಸ್ಟಿ ವಿಚಾರವಾಗಿ!

ಹೌದು, ಮನಿಶ್ ಸಿಸೋಡಿಯಾ ಅವರು ಅರುಣ್ ಜೇಟ್ಲಿ ಅವರ ನೇತೃತ್ವದ ಜಿಎಸ್ಟಿ ಸಮಿತಿಯ ಭಾಗವಾಗಿದ್ದು, ಸಮಿತಿಯಲ್ಲಿ ಅರುಣ್ ಜೇಟ್ಲಿ ಅವರ ಕಾರ್ಯ ಶೈಲಿಯ ಬಗ್ಗೆ ಮುಕ್ತವಾಗಿ ಹೊಗಳಿದ್ದಾರೆ. ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಸೋಡಿಯಾ, ಜೇಟ್ಲಿ ಅವರ ಕಾರ್ಯ ವೈಖರಿ ಹೊಗಳಿದ್ದು ಹೀಗೆ…

‘ಈವರೆಗೂ ನಡೆದಿರುವ ಜಿಎಸ್ಟಿ ಸಮಿತಿ ಸಭೆಗಳು ಅತ್ಯುತ್ತಮವಾಗಿ ಸಾಗಿವೆ. ಸಮಿತಿಯ ಮುಖ್ಯಸ್ಥರಾಗಿರುವ ಅರುಣ್ ಜೇಟ್ಲಿ, ಸಭೆಯಲ್ಲಿ ಎಲ್ಲರ ಮಾತನ್ನು ಆಲಿಸುವ ಗುಣ ತೋರಿದ್ದಾರೆ. ಅವರು ಹೊಸ ಆಲೋಚನೆಗಳಿಗೆ ಹೊಂದಿಕೊಳ್ಳುತ್ತಾರೆ. ಬೇರೆ ಸದಸ್ಯರ ಪ್ರಶ್ನೆಗೆ ಅವಕಾಶ ನೀಡುತ್ತಾರೆ. ಈವರೆಗೂ ಸಭೆಗಳು ನಡೆದಿರುವ ರೀತಿ ನನಗೆ ತೃಪ್ತಿ ತಂದಿದೆ. ನಾನು ಯಾವುದೇ ಒಂದು ವಿಚಾರ ಅಥವಾ ಪ್ರಶ್ನೆಯನ್ನು ಎತ್ತಿದರೂ ಅದಕ್ಕೆ ಅವರು ಮನ್ನಣೆ ನೀಡಿದ್ದಾರೆ. ಸಭೆಯಲ್ಲಿ ವಿರೋಧ ಪಕ್ಷದವರ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಿರುವುದು ಯಾವುದೇ ಸಮಸ್ಯೆ ಉದ್ಭವಿಸದಿರುವಂತೆ ನೋಡಿಕೊಂಡಿದೆ.’

ಕೇವಲ ಅರುಣ್ ಜೇಟ್ಲಿ ಮಾತ್ರವಲ್ಲದೆ, ಬಿಜೆಪಿ ಆಡಳಿತ ರಾಜ್ಯಗಳ ಹಣಕಾಸು ಸಚಿವರ ಬಗ್ಗೆಯೂ ಸಿಸೋಡಿಯಾ ಒಳ್ಳೆಯ ಮಾತುಗಳನ್ನಾಡಿದ್ದಾರೆ. ‘ಬಿಜೆಪಿ ಆಡಳಿತ ಅನೇಕ ರಾಜ್ಯಗಳಲ್ಲೂ ಅತ್ಯುತ್ತಮ ಹಣಕಾಸು ಸಚಿವರಿದ್ದಾರೆ. ಈ ಜಿಎಸ್ಟಿ ಸಭೆಗಳ ವೇಳೆ ಅವರು ಹೊಸ ಹೊಸ ಅತ್ಯುತ್ತಮ ಆಲೋಚನೆಗಳನ್ನು ನೀಡಿದ್ದಾರೆ’ ಎಂದರು.

ದೆಹಲಿಯ ಹೈಕೋರ್ಟಿನಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಜೇಟ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಿಸೋಡಿಯಾ ಅವರ ಈ ಮಾತುಗಳು ಸಾಕಷ್ಟು ಅಚ್ಚರಿ ಮೂಡಿಸಿವೆ.

Leave a Reply