ವೆಸ್ಟ್ ಇಂಡೀಸ್ ಸರಣಿವರೆಗೂ ಟೀಂ ಇಂಡಿಯಾ ಕೋಚ್ ಆಗಿ ಕುಂಬ್ಳೆ ಮುಂದುವರಿಕೆ, ‘ಅಡ್ಜಸ್ಟ್ ಮಾಡ್ಕೊಂಡ್ಹೋಗಿ’ ಎಂದು ಕೊಹ್ಲಿಗೆ ಕಿವಿಮಾತು

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ಕುರಿತಾಗಿ ಕಳೆದ ಹದಿನೈದು ದಿನಗಳಿಂದ ಎದ್ದಿದ್ದ ಹಲವು ಗೊಂದಲಗಳಿಗೆ ಈಗ ತಾತ್ಕಾಲಿಕ ತೆರೆ ಬಿದ್ದಿದೆ. ವೆಸ್ಟ್ ಇಂಡೀಸ್ ಸರಣಿಗೂ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸಬೇಕು ಎಂದು ಸಲಹಾ ಸಮಿತಿ ನಿರ್ಧರಿಸಿದ್ದು, ‘ಕುಂಬ್ಳೆ ಜತೆ ಹೊಂದುಕೊಂಡು ಹೋಗಿ’ ಎಂದು ಬಿಸಿಸಿಐ ಕೊಹ್ಲಿ ಸೇರಿದಂತೆ ಇತರೆ ಆಟಗಾರರಿಗೆ ಸಲಹೆ ನೀಡಿದೆ.

ಅನಿಲ್ ಕುಂಬ್ಳೆ ಅವರು 2016ರ ಜೂನ್ ನಲ್ಲಿ ಒಂದು ವರ್ಷದ ಅವಧಿಗೆ ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದರು. ಅವರ ಅವಧಿ ಇದೇ ತಿಂಗಳು 22ಕ್ಕೆ ಅಂತ್ಯವಾಗುತ್ತಿತ್ತು. ಆದರೆ ಜೂನ್ 23ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಹೀಗಾಗಿ ಸದ್ಯಕ್ಕೆ ಕೋಚ್ ಬದಲಾವಣೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಕೋಚ್ ನೇಮಕದ ಕುರಿತಾಗಿ ಗುರುವಾರ ರಾತ್ರಿ ಸಭೆ ನಡೆಸಿದ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್, ಕುಂಬ್ಳೆ ಅವರನ್ನು ಈ ಸರಣಿಗೂ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿತು. ‘ಸದ್ಯ ಟೀಂ ಇಂಡಿಯಾ ಆಟಗಾರರು ಮತ್ತು ಕೋಚ್ ಕುಂಬ್ಳೆ ನಡುವಣ ಸಮಸ್ಯೆ ಬಗೆಹರಿಯಲು ಸ್ವಲ್ಪ ಕಾಲಾವಕಾಶದ ಅಗತ್ಯವಿದೆ’ ಎಂಬ ಅಭಿಪ್ರಾಯಕ್ಕೆ ಬಂದಿತ್ತು. ಈ ಸಮಿತಿ ಸದಸ್ಯರು ಸಭೆ ನಡೆಸುವ ಮುನ್ನ ಕೊಹ್ಲಿ ಹಾಗೂ ಕುಂಬ್ಳೆ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು, ಕೊನೆಗೆ ಕುಂಬ್ಳೆ ಪರವಾಗಿ ನಿಲ್ಲಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಕುಂಬ್ಳೆ ಹೊರತಾಗಿ ಆ ಜಾಗವನ್ನು ತುಂಬಲು ನೀಡಲಾಗಿದ್ದ ಅರ್ಜಿ ಆಹ್ವಾನದ ವೇಳೆ ಆಸ್ಟ್ರೇಲಿಯಾದ ಟಾಮ್ ಮೂಡಿ ಹಾಗೂ ಭಾರತದ ವಿರೇಂದ್ರ ಸೆಹ್ವಾಗ್ ಪ್ರಮುಖ ಸ್ಪರ್ಧಿಗಳಾಗಿದ್ದರು. ಆದರೆ ಸೆಹ್ವಾಗ್ ಕೇವಲ 2 ಸಾಲುಗಳ ಅರ್ಜಿಯನ್ನು ಕಳುಹಿಸಿದ್ದು, ಬಿಸಿಸಿಐಗೆ ಅಸಮಾಧಾನ ತಂದಿತ್ತು. ಹೀಗಾಗಿ ಬಿಸಿಸಿಐ ಮುಂದೆ ಉಳಿಯುತ್ತಿದ್ದ ಪ್ರಮುಖ ಅಭ್ಯರ್ಥಿ ಎಂದರೆ ಅದು ಟಾಮ್ ಮೂಡಿ. ಸದ್ಯ ಬೇರೊಬ್ಬ ಕೋಚ್ ಅನ್ನು ಆಯ್ಕೆ ಮಾಡುವ ಬದಲು ಕುಂಬ್ಳೆ ಅವರನ್ನೇ ಮುಂದುವರಿಸುವುದು ಉತ್ತಮ ಎಂದು ಭಾವಿಸಿರುವ ಸಲಹಾ ಸಮಿತಿ ಈ ನಿರ್ಧಾರ ಕೈಗೊಂಡಿದೆ.

ಈ ಮಧ್ಯೆ ಈಗಾಗಲೇ ಅರ್ಜಿ ಸಲ್ಲಿಸಿರುವವರ ಕಥೆ ಏನು ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುಕೊಳ್ಳುತ್ತದೆ. ಸದ್ಯ ಟೀಂ ಇಂಡಿಯಾ ಜೂನ್ 20ರಂದು ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಲಿದ್ದು, ಜುಲೈ 10ರಂದು ಮರಳಲಿದೆ. ಜೂನ್ 26ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಕುಂಬ್ಳೆ ವಿಚಾರ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಇತರೆ ಅರ್ಜಿದಾರರ ಸಂದರ್ಶನವನ್ನು ಮುಂದೂಡಲಾಗಿದೆ.

Leave a Reply