ನಿಮಗಿದು ತಿಳಿದಿರಲಿ: ಭಾರತಮೂಲವನ್ನು ಮುಚ್ಚಿಟ್ಟು ಮಿನುಗುತ್ತಿರುವ ಚೀನಾ ಬೌದ್ಧದೇಗುಲ ಶಾವೊಲಿನ್

ಡಿಜಿಟಲ್ ಕನ್ನಡ ವಿಶೇಷ

ಶಾವೊಲಿನ್ ಬೌದ್ಧ ದೇವಾಲಯ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಸೊಗ್ಶಾನ್ ಪರ್ವತದಲ್ಲಿರುವ ಈ ದೇವಾಲಯ 1500 ವರ್ಷಗಳ ಇತಿಹಾಸವನ್ನು ಹೊಂದಿರುವಂಥದ್ದು. ಚೀನಾ ಸಮರಕಲೆ ಕುಂಗ್ ಫೂ ತವರು ಅಂತ ಈ ಬೌದ್ಧ ಶ್ರದ್ಧಾಕೇಂದ್ರ ಗುರುತಿಸಿಕೊಂಡಿರುವುದು ವಿಶೇಷ. ಚಾನ್ ಅಥವಾ ಜಡೆನ್ ಬುದ್ಧಿಸಂ ಪ್ರಸಾರ ಕೇಂದ್ರವಿದು.

ಜಾಗತಿಕ ಪರಂಪರೆಯ ತಾಣ ಎಂದು ಗುರುತಿಸಲ್ಪಟ್ಟಿರುವ ಇಲ್ಲಿಗೆ ವಿಶ್ವ ಪ್ರವಾಸಿಗಳ ಧೌಡು ದೊಡ್ಡದು. ಸಿಇಒ ಸನ್ಯಾಸಿ ಅಂತಲೇ ಗುರುತಿಸಿಕೊಂಡಿರುವ ಶಿ ಯಾಂಗ್ಸ್ಕಿನ್, ಈ ಬೌದ್ಧ ಶ್ರದ್ಧಾಕೇಂದ್ರವನ್ನು ಆದಾಯದ ನೆಲೆಯನ್ನಾಗಿಸಿರುವುದು ಮಾತ್ರ ಕೌತುಕದ್ದು. ಸನ್ಯಾಸಿಗಳ ಕುಂಗ್ ಫೂ ಸಮರಕಲೆ ಪ್ರದರ್ಶನವೇ ಇಲ್ಲಿನ ಮುಖ್ಯ ಆಕರ್ಷಣೆ. ಇದನ್ನು ನೋಡಲೆಂದು ಪ್ರವಾಸಿಗಳು ಟಿಕೆಟ್ ಖರೀದಿಸುತ್ತಾರೆ. ಧ್ವನಿ-ಬೆಳಕು ಪ್ರದರ್ಶನ, ನೂರಾರು ಕಲಾವಿದರೆಲ್ಲ ಸೇರಿಕೊಂಡು ಜೆನ್ ಬುದ್ಧಿಸಂ ಕತೆಯನ್ನು ವೇದಿಕೆಯಲ್ಲಿ ಸಾದರಪಡಿಸುವುದು… ಇವೆಲ್ಲವೂ ಪ್ರತ್ಯೇಕ ಪ್ರವೇಶ ದರ ಬಯಸುವ ಕಾರ್ಯಕ್ರಮಗಳು. ಶ್ರದ್ಧಾಕೇಂದ್ರವೊಂದನ್ನು ಕೇವಲ ಪೂಜಾಸ್ಥಳವೆಂದಲ್ಲದೇ ಆರ್ಥಿಕ ಚಟುವಟಿಕೆಯ ಕೇಂದ್ರವಾಗಿ, ಅದೇ ಸಮಯದಲ್ಲಿ ತಮ್ಮ ಬಲ ಮತ್ತು ಸಂದೇಶಗಳನ್ನು ತಲುಪಿಸುವ ಸಾಂಸ್ಕೃತಿಕ ವೇದಿಕೆಯಾಗಿಯೂ ಹೇಗೆ ರೂಪಿಸಿಕೊಳ್ಳಬಹುದೆಂಬುದಕ್ಕೆ ಶಾವೊಲಿನ್ ದೇವಾಲಯ ಒಂದು ಉದಾಹರಣೆ.

ಶಾವೊಲಿನ್ ದೇವಾಲಯವನ್ನು ಜಾಗತಿಕವಾಗಿ ಅದ್ಭುತವಾಗಿಯೇ ಬ್ರಾಂಡಿಂಗ್ ಮಾಡಿರುವ ಚೀನಾ, ಅತಿ ಪ್ರಾಚೀನ ದೇವಾಲಯದ ಉಗಮದ ಬಗ್ಗೆ ಇರುವ ಜನಪದೀಯ ಕತೆಗಳನ್ನು ಮಾತ್ರ ಬಹು ಜತನದಿಂದ ಮುಚ್ಚಿಟ್ಟಿದೆ.

ಏಕೆಂದರೆ ಅದು ಭಾರತದ ಕೊಂಡಿಯನ್ನು ಹೇಳುತ್ತದೆ!

ಚಕ್ರವರ್ತಿ ಕ್ಸಿಯೊವೆನ್ ಮೂಲತಃ ಈ ಬೌದ್ಧ ದೇಗುಲವನ್ನು ಕಟ್ಟಿಸಿದ್ದು ಬುಧಭದ್ರ ಎಂಬ ಭಾರತೀಯ ಅಲೆಮಾರಿ ಸನ್ಯಾಸಿಗೆ. ಈತನೇ ಕುಂಗ್ ಫೂ ಸಮರಕಲೆಗೂ ಅಡಿಪಾಯ ಹಾಕಿದ. ನಂತರ ಪ್ರಜನತಾರಾ ಎಂಬ ಗುರುವಿನ ಆಗ್ರಹದಂತೆ ಬೋಧಿಧರ್ಮ ಎಂಬ ಬೌದ್ಧ ಸನ್ಯಾಸಿ ಅಲ್ಲಿಗೆ ಹೋಗಿ ದೇವಾಲಯದ ಕಾರ್ಯಗಳಿಗೆ ದಿಕ್ಸೂಚಿಯಾದ. ಇವತ್ತಿನ ತಮಿಳುನಾಡು ಇಲ್ಲವೇ ಕೇರಳವೇ ಬೋಧಿಧರ್ಮನ ಮೂಲವಾಗಿದ್ದಿರಬಹುದೆಂಬ ಊಹೆ ಇದೆ.

Leave a Reply