ಗಾಂಧೀಜಿ ‘ಚತುರ ಬನಿಯಾ’ ಎಂಬ ಅಮಿತ್ ಶಾ ಹೇಳಿಕೆ ನಿಂದನೆ ಎಂದಾದರೆ ಸೆಕ್ಯುಲರುಗಳ ಗಾಂಧಿ ಶ್ಲಾಘನೆಯಲ್ಲೂ ಇದೆಯಲ್ಲ ಈ ಪದ?

ಡಿಜಿಟಲ್ ಕನ್ನಡ ಟೀಮ್

‘ಕಾಂಗ್ರೆಸ್ ಬ್ರಿಟಿಷ್ ವ್ಯಕ್ತಿಯಿಂದ ಸ್ಥಾಪಿತವಾದ ಕ್ಲಬ್ ಆಗಿತ್ತು. ನಂತರ ಅದು ಸ್ವಾತಂತ್ರ್ಯ ಚಳವಳಿಯ ಸಂಘಟನೆಯಾಯಿತು. ಬೇರೆ ಬೇರೆ ಸಿದ್ಧಾಂತ ಪ್ರತಿಪಾದಕರೆಲ್ಲ ಸ್ವಾತಂತ್ರ್ಯ ಹೋರಾಟದ ಒಂದು ಉದ್ದೇಶಕ್ಕಾಗಿ ಕಾಂಗ್ರೆಸ್ಸಿನ ಜತೆಯಾಗಿದ್ದರು. ಕಾಂಗ್ರೆಸ್ಸಿಗೆ ಅದರದ್ದೇ ಆದ ಸಿದ್ಧಾಂತವೇನೂ ಇಲ್ಲ. ಸ್ವಾತಂತ್ರ್ಯದ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ವಿಶೇಷ ವಾಹನವೊಂದರಂತೆ ಇತ್ತದು. ಇಂಥ ಕಾಂಗ್ರೆಸ್ ಭವಿಷ್ಯದಲ್ಲೇ ಏನಾಗಲಿದೆ ಎಂಬುದನ್ನು ಮೊದಲೇ ಅರಿತಿದ್ದ ಚತುರ ಬನಿಯಾ ಮಹಾತ್ಮ ಗಾಂಧಿ, ಸ್ವಾತಂತ್ರ್ಯ ಸಿಗುತ್ತಲೇ ಸಂಘಟನೆ ವಿಸರ್ಜನೆ ಆಗಲಿ ಎಂದು ಬಯಸಿದ್ದರು.’

ಇದು ಶನಿವಾರ ಅಮಿತ್ ಶಾ ರಾಯಪುರದಲ್ಲಿ ಆಡಿದ ಮಾತು. ಗಾಂಧಿಯವರನ್ನು ಚತುರ ಬನಿಯಾ ಎಂದು ವಿವರಿಸಿದ್ದು ಜಾತಿಸೂಚಕವಲ್ಲವೇ, ನಿಂದನೆಯಲ್ಲವೇ ಎಂಬುದೆಲ್ಲ ಈಗ ಎದ್ದಿರುವ ಪ್ರಶ್ನೆಗಳು. ಅಮಿತ್ ಶಾ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಖುದ್ದು ಗಾಂಧಿ ಸೇರಿದಂತೆ ಹಲವರು ಈ ಹಿಂದೆ ಈ ಬನಿಯಾ (ವೈಶ್ಯ) ಶಬ್ದವನ್ನು ಬಳಸಿದ್ದರೆಂಬುದು ಈಗಿನ ಮಂಥನದಿಂದ ಎದುರಿಗೆ ಬರುತ್ತಿದೆ.

ಮಹಾತ್ಮ ಗಾಂಧಿ: ಮುಸ್ಲಿಂ ಲೀಗ್ ಸಭೆಯಲ್ಲಿ ಮಾತನಾಡುತ್ತ ಗಾಂಧಿ ಹೇಳಿದ್ದರು- ನಾನೊಬ್ಬ ಬನಿಯಾ ಆದ್ದರಿಂದ ನನ್ನ ಆಸೆಗೆ ಮಿತಿ ಇಲ್ಲ. 21 ಕೋಟಿ ಭಾರತೀಯರ ಬದಲಿಗೆ 30 ಕೋಟಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವುದು ಮತ್ತು ಹಿಂದು-ಮುಸ್ಲಿಂ ಏಕತೆ ಸಾಧಿಸುವುದು ನನ್ನ ಪ್ರಯತ್ನವಾಗಿರುತ್ತದೆ.

ಮಹಮದ್ ಅಲಿ ಜಿನ್ನಾ ಸಹವರ್ತಿ ರಾಲಿಯಾ: ಬ್ರಾಹ್ಮಣ (ನೆಹರು) ಬನಿಯಾ (ಗಾಂಧಿ) ಸೇರಿಕೊಂಡು ಮುಸ್ಲಿಂ ರಾಷ್ಟ್ರವನ್ನು ಹಿಂದು ಅಡಿಯಾಳಾಗಿಸುವ ಸಂಚು ರೂಪಿಸಿದ್ದಾರೆ.

ಕಾಸಿಂ ರಜ್ವಿ (ಹೈದರಾಬಾದ್ ವಿಲೀನ ವಿರೋಧಿಸುತ್ತ): ಬ್ರಾಹ್ಮಣ ಅಥವಾ ಬನಿಯಾಗಳ ಆಡಳಿತ ನಮಗೆ ಬೇಕಿಲ್ಲ.

ರಾಮಚಂದ್ರ ಗುಹಾ (ಗಾಂಧಿ ಬಿಫೋರ್ ಇಂಡಿಯಾ ಪುಸ್ತಕದಲ್ಲಿ): ಬನಿಯಾ ಆಗಿದ್ದರೂ ಗಾಂಧೀಜಿ ತಮ್ಮ ಜಾತಿಯ ಮುಖ್ಯ ಲಕ್ಷಣಗಳಿಗಿಂತ ಬೇರೆ ವರ್ತನೆ ಹೊಂದಿದ್ದರು. ಬನಿಯಾಗಳು ಸಂಪ್ರದಾಯಸ್ಥರು. ಆದರೆ ಗಾಂಧೀಜಿ ಮುಸ್ಲಿಂ ಮತ್ತು ಕ್ರೈಸ್ತರ ಜತೆ ಬೆರೆಯುತ್ತಿದ್ದರು.

ತಮಾಷೆ ಎಂದರೆ ಗುಹಾ ಅವರಂಥ ಸೆಕ್ಯುಲರ್ ವಾದಿಗಳೇ ಇಂದು ಬನಿಯಾ ಹೇಳಿಕೆಯಲ್ಲಿ ನಿಂದನೆ ಹುಡುಕುತ್ತಿದ್ದಾರೆ. ಚತುರ ಬನಿಯಾ ಎಂಬ ಅಮಿತ್ ಶಾ ಶ್ಲಾಘನೆಗಿಂತ ಗುಹಾ ಅಂಥವರು ಗಾಂಧಿ ಶ್ಲಾಘಿಸುವ ನೆಪದಲ್ಲಿ ಸಮುದಾಯವೊಂದು ಯಾರೊಂದಿಗೂ ಬೆರೆಯದ ಕಟ್ಟರ್ ಮನಸ್ಥಿತಿಯದು ಎಂದು ಬರೆಯುವುದು ನಿಂದನೆಯಾಗದೇ.

ಈ ಬಗ್ಗೆ ಎಸ್ ಗುರುಮೂರ್ತಿಯವರು ಟ್ವೀಟ್ ಮಾಡಿದ್ದಾರೆ- ಗಾಂಧೀಜಿ ವರ್ಣಧರ್ಮದ ಪ್ರತಿಪಾದಕರಾಗಿದ್ದರು. ಹಾಗಾದರೆ ಕಾಂಗ್ರೆಸ್ಸಿನವರು ಗಾಂಧಿಯವರನ್ನು ವಿರೋಧಿಸುತ್ತಾರೆಯೇ?

Leave a Reply