ಶಾಂಘೈ ಸಹಕಾರ ಸಭೆಯಲ್ಲಿ ಭಾರತಕ್ಕೆ ಕೊಟ್ಟ ಮರ್ಯಾದೆಯನ್ನು ಚೀನಾವು ಪಾಕಿಸ್ತಾನಕ್ಕೆ ಕೊಡದಿದ್ದದ್ದು ಏಕೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್

ಮೊನ್ನೆಯ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳನ್ನು ಚೀನಾವು ಹೊಸ ಸದಸ್ಯರನ್ನಾಗಿ ಸೇರಿಸಿಕೊಂಡಿದ್ದು ಗೊತ್ತಲ್ಲವೇ? ಅಲ್ಲಿ ಮೋದಿ ಹೇಳಿದ್ದೇನು ಎಂಬುದರ ವರದಿಯನ್ನೂ ಇಲ್ಲಿಯೇ ಓದಿದ್ದಿರಿ.

ಇಲ್ಲಿಯೂ ಪಾಕಿಸ್ತಾನಕ್ಕೆ ಪರಮಮಿತ್ರ ಚೀನಾದಿಂದಲೇ ಇರಿಸುಮುರಿಸೊಂದು ಎದುರಾಯಿತು. ಸದಸ್ಯ ರಾಷ್ಟ್ರಗಳೆಲ್ಲ ಒಟ್ಟಿಗೆ ಕುಳಿತು ಸಭೆ ಮಾಡಿದ್ದು ಒಂದೆಡೆಯಾದರೆ, ಈ ಸಂದರ್ಭದಲ್ಲೇ ದ್ವಿಪಕ್ಷೀಯ ಮಾತುಕತೆಗಳೂ ಆದವು. ಚೀನಾ ಅಧ್ಯಕ್ಷ ಜಿನ್ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಮಾತುಕತೆಯೂ ಇದರಲ್ಲೊಂದು. ಆದರೆ ಇದೇ ಭಾಗ್ಯ ಪಾಕಿಸ್ತಾನಕ್ಕೆ ಿರಲಿಲ್ಲ. ಅರ್ಥಾತ್ ಜಿನ್ಪಿಂಗ್ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಜತೆ ಮಾತುಕತೆಗೆ ಕೂರಲಿಲ್ಲ.

ಇದರರ್ಥ ಚೀನಾವೇನೊ ತನ್ನ ಪಾಕಿಸ್ತಾನ ಸ್ನೇಹಿ ನೀತಿಯನ್ನು ಬದಲಿಸಿಬಿಟ್ಟಿದೆ ಅಂತಲ್ಲ. ಆದರೆ ಪಾಕಿಸ್ತಾನವನ್ನು ಸಂದರ್ಭ ಬಂದಾಗ ಎಲ್ಲಿಡಬೇಕೋ ಅಲ್ಲಿಯೇ ಇಡುತ್ತದೆ ಚೀನಾ ಎಂಬ ಸೂಚನೆಯೊಂದು ಹೊರಬಿದ್ದಂತಾಗಿದೆ.

ಇಷ್ಟಕ್ಕೂ ಆ ಸಭೆಯಲ್ಲಿ ಚೀನಾವು ಪಾಕಿಸ್ತಾನದ ಬಗ್ಗೆ ತುಸು ಕಠಿಣ ಎಂಬಂಥ ನಿಲುವು ತಳೆದಿದ್ದೇಕೆ? ಏಕೆಂದರೆ ತಿಂಗಳ ಹಿಂದೆ ಬಲೊಚಿಸ್ತಾನದ ಕ್ವೆಟ್ಟಾದಲ್ಲಿ ಇಬ್ಬರು ಚೀನಿ ನಾಗರಿಕರನ್ನು ಅಪಹರಿಸಲಾಗಿತ್ತು. ಈ ಕೃತ್ಯದ ಹೊಣೆ ಹೊತ್ತಿದ್ದು ಐಎಸ್ಐಎಸ್. ಶಾಂಘೈ ಸಭೆ ನಡೆಯುವ ಸಂದರ್ಭದಲ್ಲೇ ಈ ಎರಡು ನಾಗರಿಕರನ್ನು ಕೊಲ್ಲಲಾಗಿದೆ ಎಂಬ ಸುದ್ದಿ ಬಂತು. ಇದು ಚೀನಾಕ್ಕೆ ವಿಷಾದ ಮತ್ತು ಕ್ರೋಧವನ್ನು ಒಜಮೂಡಿಸಿತು. ಚೀನಾದ ಮಹತ್ವಾಕಾಂಕ್ಷಿ ಕಾರಿಡಾರ್ ಶುರುವಾಗುವುದು ಬಲೊಚಿಸ್ತಾನದಿಂದ. ಆದರೆ ಬಲೊಚಿ ರಾಷ್ಟ್ರವಾದಿಗಳು ಇದನ್ನು ಖಂಡತುಂಡ ವಿರೋಧಿಸಿ ಅಡ್ಡಿ ಉಂಟುಮಾಡುತ್ತಿದ್ದಾರೆ. ಇದೇ ವೇಳೆ ಐಎಸ್ಐಎಸ್ ನಿಂದ ಈ ಕೃತ್ಯವೂ ನಡೆದಿದೆ.

ತನ್ನ ವಿಸ್ತರಣೆ ಯೋಜನೆಯಲ್ಲಿ ಭಾಗಿಯಾಗಿರುವ ಪಾಕಿಸ್ತಾನ ತನ್ನವರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಮಾತ್ರ ವಿಫಲವಾಗುತ್ತಿದೆ ಎಂಬ ಕೋಪ ಚೀನಾದ್ದು. ಭವಿಷ್ಯದಲ್ಲಿ ಪಾಕಿಸ್ತಾನದ ಅಸಾಮರ್ಥ್ಯ ಜಾಹೀರಾಗುತ್ತ ಹೋದಂತೆಲ್ಲ ಚೀನಾದ ಹತಾಶೆ ಮತ್ತು ಕೋಪ ಇನ್ನಷ್ಟು ಪ್ರಜ್ವಲಿಸಬಹುದೆಂಬ ಸೂಚನೆಯನ್ನೂ ನೀಡುತ್ತಿದೆ ಈ ವಿದ್ಯಮಾನ.

Leave a Reply