ರಾಹುಲ್, ಯಡಿಯೂರಪ್ಪ ಇಬ್ಬರಿಗೂ ರೈತರು ನೆಪಮಾತ್ರ!

ರಾಜಕೀಯ ಮಾಡೋಕೆ ರೈತ ಆದರೇನು? ಅವನು ಮಾಡಿಕೊಂಡಿರುವ ಸಾಲ ಆದರೇನು? ಅದನ್ನು ತೀರಿಸಲಾಗದೆ ವಿಷ ಕುಡಿದೋ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರವಾದರೇನು? ಒಟ್ಟಿನಲ್ಲಿ ರಾಜಕೀಯ ಮಾಡೋಕೆ ಒಂದು ವಿಷಯ ಬೇಕು. ವಿಷ ಕಕ್ಕುತ್ತಾ ರಾಜಕೀಯ ಮಾಡಬೇಕು. ಇದಕ್ಕೆ ಆ ಪಕ್ಷ, ಈ ಪಕ್ಷ ಅಂತೇನೂ ಬೇಧ-ಭಾವ ಇಲ್ಲ. ಅವರವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದುಕಿರೋ ರೈತರನ್ನು ಸಾಯಿಸುತ್ತಾರೆ. ಒಂದೊಮ್ಮೆ ಸತ್ತಿದ್ದರೆ ಮತ್ತೊಮ್ಮೆ ಸಾಯಿಸುತ್ತಾರೆ. ಒಟ್ಟಿನಲ್ಲಿ ರಾಜಕೀಯ ನಡೆಯಬೇಕು ಅಷ್ಟೇ.

ಐವರು ರೈತರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಬೇಕು ಎನ್ನುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಹಿಡಿದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರದ ಮೂಗು ಹಿಡಿದಾದರೂ ರೈತರ ಸಾಲ ಮನ್ನಾ ಮಾಡಿಸುತ್ತೇನೆ ಎಂದು ಬೊಬ್ಬಿರಿಯುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸರಕಾರ ನೆರವು ನೀಡದೆ ರೈತರ ಸಾಲ ಮನ್ನಾ ಅಸಾಧ್ಯ ಎಂದು ಪಟ್ಟು ಹಿಡಿದು ಕುಳಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರವರೆಗೆ ಎಲ್ಲರೂ ಮಾಡುತ್ತಿರುವುದು ಇದೇ ರಾಜಕೀಯವನ್ನೇ. ವಾದ, ಪ್ರತಿವಾದ, ತರ್ಕ, ಕುತರ್ಕ ಏನೇ ಇರಬಹುದು ಪ್ರತಿಯೊಬ್ಬರ ನಿಲುವಿನಲ್ಲೂ ಢಾಳಾಗಿ ಕಾಣುವುದು ಬರೀ ರಾಜಕೀಯವೇ. ಇವರಿಗೆಲ್ಲ ರೈತರ ಸಾವು-ನೋವು ಮತರಾಜಕೀಯ ಅಸ್ತ್ರಗಳಾಗಿವೆಯೇ ಹೊರತು ಅವರ ಬಗ್ಗೆ ನೈಜ ಕಾಳಜಿ, ಕಕ್ಕುಲತೆ, ಮಮಕಾರ ಇಲ್ಲವೇ ಇಲ್ಲ. ಏತಿ ಎನ್ನುವವನ ಮರ್ಮವೂ ಮತ ರಾಜಕೀಯವೇ. ಪ್ರೇತಿ ಎನ್ನುವವನ ಮೂಲ ಮಂತ್ರವೂ ಅದೇ. ಹೀಗಾಗಿ ರೈತರು ಅವರಿಗೊಂದು ರಾಜಕೀಯ ಬೊಂಬೆ ಮಾತ್ರ.

ಮಧ್ಯಪ್ರದೇಶದಲ್ಲಿ ಪೊಲೀಸರ ಗೋಲಿಬಾರ್‌ಗೆ ಐವರು ರೈತರು ಬಲಿಯಾಗಿರುವುದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕರಳು ಹಿಂಡಿದೆ. ಧಾರಾಕಾರ ಕಣ್ಣೀರು ತಂದಿದೆ. ಶ್ರೀಮಂತ ಉದ್ಯಮಿಗಳ 1.50 ಲಕ್ಷ ಕೋಟಿ ರುಪಾಯಿ ಸಾಲ ಮನ್ನಾ ಮಾಡುವಲ್ಲಿ ತೋರುವ ಮುತುವರ್ಜಿಯನ್ನು ಕೇಂದ್ರ ಸರಕಾರ ಬಡ ರೈತರ ಸಾಲದ ವಿಚಾರದಲ್ಲಿ ಪ್ರದರ್ಶಿಸುತ್ತಿಲ್ಲ. ಅವರಿಗೆ ಬರೀ ಗುಂಡಿನ ಉಡುಗೊರೆ ಕೊಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಡಿನ ಜನರ ಹೊಟ್ಟೆಗಳನ್ನು ಪೊರೆಯುತ್ತಿರುವ ರೈತರಿಗೆ ದೇಶದ ಯಾವುದೇ ಭಾಗದಲ್ಲೂ ಅನ್ಯಾಯ ಆಗಕೂಡದು. ಮಧ್ಯಪ್ರದೇಶದಲ್ಲಿ ರೈತರನ್ನು ಗುಂಡಿಕ್ಕಿ ಕೊಂದಿರುವುದು ಅಕ್ಷಮ್ಯ. ಕೇಂದ್ರ ಹಾಗೂ ರಾಜ್ಯ ಸರಕಾರ ಎರಡೂ ಇದರ ಹೊಣೆ ಹೊರಬೇಕು. ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೆ ಅಮಾಯಕ ಜೀವಗಳನ್ನು ಉಳಿಸಬಹುದಿತ್ತು. ಈಗ ಎಷ್ಟೇ ಕೋಟಿ, ಲಕ್ಷ ರುಪಾಯಿ ಪರಿಹಾರ ಕೊಟ್ಟರೂ ಹೋದ ಜೀವಗಳು ಮರಳುವುದಿಲ್ಲ. ಹಣದಿಂದ ನ್ಯಾಯ ಖರೀದಿಸಲಾಗಲಿ, ಅನ್ಯಾಯ ಸರಿಪಡಿಸಲಾಗಲಿ ಸಾಧ್ಯವಿಲ್ಲ. ಆದರೆ ರಾಹುಲ್ ಗಾಂಧಿ ಅವರಿಗೆ ಇದ್ದಕ್ಕಿದ್ದಂತೆ ರೈತರ ಬಗ್ಗೆ ಕಾಳಜಿ ಅವಿರ್ಭವಿಸಿರುವುದು, ಅವರ ಸಾವು-ನೋವು ದುಃಖ ತಂದಿರುವುದು ಸೋಜಿಗದ ಸಂಗತಿ. ಕಾಂಗ್ರೆ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲ ಮಳೆಗೆ ಕಂಬದ ದೀಪದ ಸುತ್ತ ಉದುರಿ ಬೀಳುವ ರೆಕ್ಕೆಹುಳುಗಳಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆಗದ ಒಡಲುರಿ ಇದೀಗ ರಾಹುಲ್ ಗಾಂಧಿ ಅವರಿಗೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಆಳ್ವಿಕೆಯಲ್ಲಿರುವ ಮಧ್ಯಪ್ರದೇಶ ರೈತರ ಸಂಕಷ್ಟದಿಂದ ಆಗಿದೆ. ಆಗಲೇ ಹೇಳಿದಂತೆ ದೇಶದ ಯಾವುದೇ ಭಾಗದಲ್ಲಿ ಆಗಲಿ, ಯಾವುದೇ ರಾಜ್ಯದಲ್ಲಿಯೇ ಆಗಲಿ ರೈತರ ನೋವು ನೋವೆ. ಆದರೆ ಪಕ್ಷ ರಾಜಕಾರಣದ ಆಧಾರದ ಮೇಲೆ ರೈತರ ಸಾವಿನಲ್ಲಿ ರಾಜಕೀಯ ಮಾಡುತ್ತಾ ರಾಹುಲ್ ಗಾಂಧಿ ಅವರು ದೇಶಾದ್ಯಂತ ಕಳೆದು ಹೋಗಿರುವ ಕಾಂಗ್ರೆಸ್ ಮತಗಳನ್ನು ಹುಡುಕಲು ಯತ್ನಿಸುತ್ತಿರುವುದು ಮಾತ್ರ ಅಪಹಾಸ್ಯದ ಜತೆಜತೆಗೆ ಅನುಕಂಪ ತರುವ ಸಂಗತಿ.

ನಿಜ, ಕಾಂಗ್ರೆಸ್ ಅಧಿಕಾರದಲ್ಲಿರುವ ದೇಶದ ಬಹುದೊಡ್ಡ ರಾಜ್ಯ ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 2573 ಮಂದಿ ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಮಂದಿ ಸಾವಿಗೆ ಶರಣಾಗಿದ್ದಾರೆ. ಮೊದಲಿಗೆ ರಾಜ್ಯ ಸರಕಾರ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ. ಕೇಂದ್ರದ ಮಾಜಿ ಸಚಿವ, ಇದೀಗ ಕಾಂಗ್ರೆಸ್ ತೊರೆದಿರುವ ಎಸ್.ಎಂ. ಕೃಷ್ಣ ತವರು ಜಿಲ್ಲೆ ಮಂಡ್ಯಕ್ಕೆ ಭೇಟಿ ಕೊಟ್ಟು ಸಂತ್ರಸ್ತ ರೈತರ ಕುಟುಂಬಗಳನ್ನು ಭೇಟಿ ಮಾಡಿದ ನಂತರ ರಾಜ್ಯ ಸರಕಾರಕ್ಕೆ ಜ್ಞಾನೋದಯವಾಗಿತ್ತು. ಆಗ ಮಂಡ್ಯ ಮತ್ತು ಗದಗ ಜಿಲ್ಲೆಗೆ ‘ಫ್ಲೈಯಿಂಗ್ ವಿಸಿಟ್’ ಕೊಟ್ಟು, ಕೆಲ ಕುಟುಂಬಗಳಿಗೆ ಒಂದಷ್ಟು ಪರಿಹಾರ ವಿತರಿಸಿ ಮರಳಿದ ರಾಹುಲ್ ಗಾಂಧಿ ಅವರು ಸಾಲ ಮನ್ನಾ ಬಗ್ಗೆ ಮಾತ್ರ ಚಕಾರ ಎತ್ತಿರಲಿಲ್ಲ. ಕರ್ನಾಟಕದಲ್ಲಿ ಅವರದೇ ಪಕ್ಷದ ಸರಕಾರವಿತ್ತು. ರೈತರ ಸಾಲ ಮನ್ನಾ ಮಾಡಿ ಎಂದು ಹೇಳಬಹುದಿತ್ತು. ಈಗ ಮಧ್ಯಪ್ರದೇಶ ರೈತರ ಬಗ್ಗೆ ತೋರುತ್ತಿರುವ ಅಸ್ಥೆಯನ್ನು ಆಗಲೂ ತೋರಬಹುದಿತ್ತು. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬಹುದಿತ್ತು. ದಿಲ್ಲಿಯ ಜಂತರ್-ಮಂತರ್ ಮುಂದೆ ಉಪವಾಸ ಮಾಡಬಹುದಿತ್ತು. ಉಹುಂ, ಉಸಿರೇ ಎತ್ತಲಿಲ್ಲ. ಪಾಪ, ಸಿದ್ದರಾಮಯ್ಯನವರ ಸರಕಾರಕ್ಕೆ ತೊಂದರೆ ಆಗುತ್ತದೆ ಎಂಬ ಕನಿಕರ ಆಗ ಕೆಲಸ ಮಾಡಿತ್ತು ಎಂದು ಕಾಣುತ್ತದೆ. ಆದರೆ ಮಧ್ಯಪ್ರದೇಶದಲ್ಲಿ ಎದುರಾಳಿ ಬಿಜೆಪಿ ಸರಕಾರವಿದೆ. ಹೀಗಾಗಿ ಅಲ್ಲಿ ಮಾತ್ರ ಸಾಲ ಮನ್ನಾ ಮಾಡಿಸಬೇಕೆಂಬ ಕಳಕಳಿ ನೆತ್ತಿ ಒತ್ತುತ್ತಿದೆ. ರಾಜಕೀಯ ಊರೂರು ತಿರುಗಿಸುತ್ತಿದೆ.

ರಾಹುಲ್ ಗಾಂಧಿ ಮಧ್ಯಪ್ರದೇಶ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿರುವುದು ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ತಲೆ ಬಿಸಿ ಮಾಡಿದೆ. ಕೇಂದ್ರ ಸರಕಾರ ಕೊಟ್ಟರೆ ಮಾತ್ರ ಸಾಲ ಮನ್ನಾ ಮಾಡುತ್ತೇವೆ ಅಂತ ಹೇಳುತ್ತಾ ಬಂದಿರುವ ಮುಖ್ಯಮಂತ್ರಿಯವರಿಗೆ ರಾಹುಲ್ ಹೇಳಿಕೆ ಒಂದು ರೀತಿ ಬಿಸಿತುಪ್ಪ. ನಿಮ್ಮದೇ ಪಕ್ಷದ ನಾಯಕರು ಅಲ್ಲಿ ಸಾಲ ಮನ್ನಾಕ್ಕೆ ಪಟ್ಟು ಹಿಡಿದು ಕೂತಿರುವಾಗ ಇಲ್ಲೇಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಅವರು ಏನೇ ಉತ್ತರ ಕೊಟ್ಟರೂ ನೆಪವಾಗುತ್ತದೆ. ಯಡಿಯೂರಪ್ಪ ಅವರು ಹೋದಲ್ಲಿ, ಬಂದಲ್ಲಿ ರೈತರ ಸಾಲ ಮನ್ನಾ ಮಾಡಿ ಅಂತ ರಾಜ್ಯ ಸರಕಾರವನ್ನು ಪಟ್ಟು ಹಿಡಿದು ಕೂತಿದ್ದಾರೆ. ಯಡಿಯೂರಪ್ಪ ಅವರು ಇಲ್ಲಿ ಹಾಕುತ್ತಿರುವ ಒತ್ತಡಕ್ಕಿಂತ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದಲ್ಲಿ ಹಾಕುತ್ತಿರುವ ಒತ್ತಡ ಸಿದ್ದರಾಮಯ್ಯನವರನ್ನು ಅಡಕತ್ತರಿಯಲ್ಲಿ ಸಿಕ್ಕಿಸಿಟ್ಟಿದೆ. ಒತ್ತಡ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಮಾಡಬೇಕಾಗಿ ಬರಬಹುದು. ಆ ದಿನ ಚುನಾವಣೆಗೆ ಹತ್ತಿರ ಇರಬಹುದು. ಚುನಾವಣೆ ಹತ್ತಿರ ಇಟ್ಟುಕೊಂಡು ಸಾಲ ಮನ್ನಾ ಮಾಡಿದರೆ ಮತರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಲೆಕ್ಕಾಚಾರ ಇರಬಹುದು. ಆದರೆ ಅದಕ್ಕಿಂತಲೂ ಮಿಗಿಲಾಗಿ ಯಡಿಯೂರಪ್ಪನವರು ಇದರ ಲಾಭ ಪಡೆದುಕೊಳ್ಳಬಹುದು ಎಂಬ ಆತಂಕವಿದೆ. ನಾನು ಸಾಲ ಮನ್ನಾಕ್ಕೆ ಪಟ್ಟು ಹಿಡಿದಿದ್ದನ್ನೇ ರಾಹುಲ್ ಗಾಂಧಿ ಕೂಡ ಅನುಸರಿಸಿದರು. ಇದರಿಂದಾಗಿ ಕರ್ನಾಟಕದಲ್ಲೂ ಸಾಲ ಮನ್ನಾ ಆಗುವಂತಾಯಿತು. ಇದು ತಮ್ಮ ಹೋರಾಟಕ್ಕೆ ಸಂದ ಫಲ ಎಂದು ಯಡಿಯೂರಪ್ಪನವರು ಪರಿಸ್ಥಿತಿಯ ಲಾಭವನ್ನು ಬಿಜೆಪಿ ಕಡೆಗೆ ತಿರುಗಿಸಿಕೊಳ್ಳಬಹುದು ಎಂಬ ಆತಂಕ ಕಾಂಗ್ರೆಸ್ಸಿನದು. ಇಲ್ಲಿ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂಬುದಕ್ಕಿಂತ ಅದರಿಂದಾಗುವ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರವೇ ಪ್ರಮುಖವಾಗಿದೆ. ರಾಜಕೀಯಕ್ಕಿರುವ ಶಕ್ತಿಯೇ ಅಂಥದ್ದು.

ಇನ್ನು ಯಡಿಯೂರಪ್ಪನವರ ವಿಚಾರ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ, ಯಡಿಯೂರಪ್ಪನವರು ಉಪಮುಖ್ಯಮಂತ್ರಿ. ಕುಮಾರಸ್ವಾಮಿ ಅಧಿಕಾರ ಹಸ್ತಾಂತರ ವಿಶ್ವಾಸದ್ರೋಹದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಚುನಾವಣೆ ಪ್ರಣಾಳಿಕೆಯಲ್ಲಿ ರೈತರ ಸಾಲ ಮನ್ನಾ ಬಗ್ಗೆ ಹೇಳಿಕೊಂಡಿದ್ದ ಯಡಿಯೂರಪ್ಪನವರು ಸಿಎಂ ಆಗುತ್ತಿದ್ದಂತೆ ಉಲ್ಟಾ ಹೊಡೆದರು. ಅವರ ಅವಧಿಯಲ್ಲಿ ಸಾಲ ಮನ್ನಾ ಆಗುವುದಿರಲಿ, ಹಾವೇರಿ ರಸಗೊಬ್ಬರ, ಭಿತ್ತನೆ ಬೀಜ ಪೂರೈಕೆಗೆ ಒತ್ತಾಯಿಸಿ ಚಳವಳಿನಿರತ ರೈತರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದರು. ಯಡಿಯೂರಪ್ಪನವರಿಗೆ ರೈತ ವಿರೋಧಿ ಎಂಬ ಹಣೆಪಟ್ಟಿ ಬಂತು. ಅವರು ಸಿಎಂ ಆಗಿರುವವರೆಗೂ ಕೃಷಿ ಸಾಲ ಮನ್ನಾ ಆಗಲಿಲ್ಲ. ಅವರ ನಂತರ ಸಿಎಂ ಪಟ್ಟಕ್ಕೆ ಬಂದ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಅದು ಅನುಷ್ಠಾನಕ್ಕೆ ಬಂತು. ಈಗ ಐವರು ರೈತರು ಗುಂಡಿಗೆ ಬಲಿಯಾದ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರವಿದೆ. ಕೇಂದ್ರದಲ್ಲೂ ಅದೇ ಸರಕಾರ. ಮಧ್ಯಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ಆದರೆ ಕರ್ನಾಟಕದಲ್ಲಿ ಯಡಿಯೂರಪ್ಪ ಸಾಲ ಮನ್ನಾಕ್ಕೆ ಪಟ್ಟು ಹಿಡಿದು ಕೂತಿದ್ದಾರೆ. ಇಲ್ಲಿ ಮೆರೆಯುತ್ತಿರುವುದೂ ಮತ್ತದೇ ಗೋಸುಂಬೆ ರಾಜಕೀಯ. ರಾಹುಲ್ ಗಾಂಧಿ ಮತ್ತು ಯಡಿಯೂರಪ್ಪ ಇಬ್ಬರೂ ಅದಕ್ಕೆ ಸಾಕ್ಷಿಯಾಗಿದ್ದಾರೆ. ಪಕ್ಷಗಳು ಮಾತ್ರ ಬೇರೆ-ಬೇರೆ ಅಷ್ಟೇ.

ಹೌದು, ರೈತರ ಸಮಸ್ಯೆಗಳಿಗೆ ಶಾಶ್ವತ, ತಾರ್ಕಿಕ ಪರಿಹಾರ ಹುಡುಕುವಲ್ಲಿ ರಾಜಕೀಯ ಪಕ್ಷಗಳು ಎಡವಿವೆ. ಸಾಲ ಮನ್ನಾ ಶಾಶ್ವತ ಪರಿಹಾರವಲ್ಲ ಎಂಬುದು ನಿಜ. ಕೃಷಿ ಸಾಲ ಎನ್ನುವುದು ಶಾಶ್ವತವಾಗಿ ಇರುತ್ತದೆ. ಹಾಗೆಂದು ಎಲ್ಲ ಬಾರಿಯೂ ಸಾಲ ಮನ್ನಾ ಮಾಡುವುದು ಸಾಧ್ಯವಿಲ್ಲ. ಅದು ಕೇಂದ್ರ ಹಾಗೂ ರಾಜ್ಯ ಎರಡೂ ಸರಕಾರಗಳ ಬೊಕ್ಕಸದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆರ್ಥಿಕ ಸ್ಥಿತಿ ಹದಗೆಡಿಸುತ್ತದೆ. ಆದರೆ ಈ ಸತ್ಯವನ್ನು ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ನಾನಾ ರಾಜಕೀಯ ಪಕ್ಷಗಳು ಸೋತಿವೆ. ಏಕೆಂದರೆ ಸಮಸ್ಯೆಗೊಂದು ಪರಿಹಾರ ಸಿಕ್ಕರೆ ರಾಜಕೀಯ ಮಾಡಲು ಆಗುವುದಿಲ್ಲವಲ್ಲ. ಹಿಂದೆ ಒಂದೆರಡೆಕೆರೆ ಜಮೀನಿದ್ದ ರೈತ ಸಾಹುಕಾರ ಎನ್ನಿಸಿಕೊಳ್ಳುತ್ತಿದ್ದ. ತನ್ನ ಕುಟುಂಬಕ್ಕಾಗುವಷ್ಟು ಬೆಳೆದುಂಡು, ಅನ್ಯರಿಗೂ ಹಂಚುತ್ತಿದ್ದ. ಆದರೆ ಈಗ ಹತ್ತೆಕೆರೆ ಜಮೀನಿದ್ದವ ಅದನ್ನು ತೆಕ್ಕಲು ಬಿಟ್ಟು ಕೂಲಿ ಮಾಡುತ್ತಿದ್ದಾನೆ. ಸುಧಾರಿತ, ಅತ್ಯಾಧುನಿಕ ಬೇಸಾಯ ಪದ್ಧತಿ ಅಳವಡಿಕೆ ಕೊರತೆ, ಬೆಳೆಗೆ ವೈಜ್ಞಾನಿಕ ದರ ನಿಗದಿ ವ್ಯವಸ್ಥೆ ಇಲ್ಲದಿರುವುದು, ಮಧ್ಯವರ್ತಿಗಳ ಹಾವಳಿ, ಅಸಮರ್ಪಕ ಮಾರುಕಟ್ಟೆ ಸೌಲಭ್ಯ, ಮಧ್ಯವರ್ತಿಗಳ ಹಾವಳಿ, ನಗರ-ಪಟ್ಟಣ ಪ್ರದೇಶಗಳ ಆಕರ್ಷಣೆ ಹಳ್ಳಿಗರ ವಲಸೆ ಹೆಚ್ಚಿಸಿದೆ. ಹಿಂದೆ ದೇಶದ ಶೇಕಡಾ 85 ರಷ್ಟು ಮಂದಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅದೀಗ ಶೇಕಡಾ 65 ಕ್ಕೆ ಕುಸಿದಿದೆ. ಕೃಷಿ ಮಾಡಿ ಉದ್ಧಾರ ಆದವರು ಇಲ್ಲ ಎನ್ನುವ ಪರಿಸ್ಥಿತಿಯಲ್ಲಿ ರೈತಾಪಿ ವರ್ಗಕ್ಕೆ ಬಲ ತುಂಬುವ ಕೆಲಸ ಆಗಬೇಕಿದೆ ಎಂಬುದು ಸರಿ. ಆದರೆ ಅದಕ್ಕೊಂದು ನೀತಿ-ನಿಯಮ ಇರಬೇಕು. ಒಮ್ಮೆ ಸಾಲ ಮನ್ನಾ ಸವಲತ್ತು ಪಡೆದ ರೈತರಿಗೆ ಮತ್ತೆಂದಿಗೂ ಆ ಅವಕಾಶ ಇಲ್ಲ ಎಂಬ ನಿಯಮ ಜಾರಿಗೆ ತರಬಹುದು. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದವರಿಗೆ ಇಂತಿಷ್ಟು ಎಂದು ಸಬ್ಸಿಡಿ ನೀಡಬಹುದು. ಪ್ರೋತ್ಸಾಹ ಧನ ನೀಡಬಹುದು. ಇದು ಅನ್ಯ ರೈತರಲ್ಲೂ ಸಾಲ ಮರುಪಾವತಿ ಶಿಸ್ತು ತರುತ್ತದೆ. ಸಾಲ ಮನ್ನಾಕ್ಕೆ ಬೇಡಿಕೆ ಇಡುವುದೂ ತಪ್ಪುತ್ತದೆ. ಕೃಷಿಯೂ ಉಳಿಯುತ್ತದೆ, ರೈತನೂ ಬದುಕುತ್ತಾನೆ.

ಈಗ ಸಿದ್ದರಾಮಯ್ಯನವರ ಸರಕಾರ ಬಿಜೆಪಿ ಸಾಲ ಮನ್ನಾ ಬೇಡಿಕೆಯನ್ನು ಅದರ ಬುಡಕ್ಕೇ ತಂದಿಡಬಹುದು. ಕೇಂದ್ರ ಸರಕಾರ ಶೇಕಡಾ 50ರಷ್ಟು ಭರಿಸಿದರೆ, ಉಳಿದಿದ್ದನ್ನು ತಾನು ಭರಿಸುವುದಾಗಿ ಹೇಳುವ ಬದಲು ಅದಕ್ಕೆ ಪರ್ಯಾಯ ತಂತ್ರ ರೂಪಿಸಬಹುದು. ರಾಜ್ಯದಲ್ಲಿ ಈಗ ಸುಮಾರು 52 ಸಾವಿರ ಕೋಟಿ ರುಪಾಯಿ ಕೃಷಿ ಸಾಲ ಇದೆ. ಅದರಲ್ಲಿ ಸಹಕಾರಿ ಸಂಸ್ಥೆಗಳಿಂದ ಪಡೆದಿರುವುದು 14,300 ಕೋಟಿ ರುಪಾಯಿ. ಉಳಿದದ್ದು ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದಿರುವುದು. ರಾಜ್ಯ ಸರಕಾರ ಸಹಕಾರಿ ಸಂಸ್ಥೆಗಳಿಂದ ಪಡೆದ ಸಾಲ ಬಾಬ್ತು 14,300 ಕೋಟಿ ರುಪಾಯಿ ಮನ್ನಾ ಮಾಡಿ, ವಾಣಿಜ್ಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಹೊಣೆಯನ್ನು ಕೇಂದ್ರ ಸರಕಾರದ ತಲೆಗೆ ಕಟ್ಟಬಹುದು. ಆಗ ರಾಜ್ಯ ಸರಕಾರ ಸಾಲ ಮನ್ನಾ ಮಾಡಿದಂತೆಯೂ ಆಯಿತು. ಕೇಂದ್ರವನ್ನು ಅಡಕತ್ತರಿಯಲ್ಲಿ ಸಿಕ್ಕಿಸಿದಂತೆಯೂ ಆಯಿತು. ಕೇಂದ್ರ ಸರಕಾರ ಸಾಲ ಮನ್ನಾ ಮಾಡದಿದ್ದರೆ ಅದರ ಪ್ರತಿನಿಧಿಗಳಾದ ರಾಜ್ಯದ 17 ಮಂದಿ ಬಿಜೆಪಿ ಎಂಪಿಗಳನ್ನು ರೈತರು ಹಾದಿಬೀದಿಯಲ್ಲಿ ನಿಲ್ಲಿಸಿ ಪ್ರಶ್ನಿಸುತ್ತಾರೆ. ರಾಜ್ಯ ಸರಕಾರ ಮಾಡಿದೆ. ಕೇಂದ್ರ ಸರಕಾರದಿಂದ ನೀವ್ಯಾಕೆ ಮಾಡಿಸುತ್ತಿಲ್ಲ ಎಂದು. ಯಡಿಯೂರಪ್ಪನವರ ಬೇಡಿಕೆ ಅವರಿಗೇ ತಿರುಗುಬಾಣವಾಗುತ್ತದೆ. ಕೈಯಲ್ಲೇ ಇರುವ ಈ ಸರಳ, ಸುಲಭ ಮಾರ್ಗವನ್ನು ಅನುಸರಿಸುವ ಬದಲು ಸಿದ್ದರಾಮಯ್ಯನವರ ಸರಕಾರ ಕೇಂದ್ರ ಸರಕಾರದತ್ತ ಬೊಟ್ಟು ತೋರಿಸುತ್ತಾ ಕಾಲ ಸವೆಸುತ್ತಿರುವುದರ ಹಿಂದೆ ಮತ್ತದೇ ರಾಜಕೀಯವೇ ಕಾಣಿಸುತ್ತದೆ. ಸರಕಾರದ ನಾನಾ ಭಾಗ್ಯಗಳು, ಸವಲತ್ತುಗಳ ಹಿಂದೆ ಅಹಿಂದ ಮತರಾಜಕೀಯ ಮನೆಮಾಡಿದ್ದು, ಕೃಷಿ ಸಾಲ ಮನ್ನಾ ಈ ವ್ಯಾಪ್ತಿಗೆ ಬಾರದ ಕಾರಣ ಸರಕಾರ ಉತ್ಸಾಹ ತೋರುತ್ತಿಲ್ಲ ಎಂಬ ಆಪಾದನೆ ಇದೆ. ಇದನ್ನು ಸುಳ್ಳು ಮಾಡುವ ಹೊಣೆ ಕೂಡ ರಾಜ್ಯ ಸರಕಾರದ್ದೇ.

ಲಗೋರಿ : ಅಸ್ತ್ರ ಪಕ್ಕಕ್ಕಿಟ್ಟು ಪೊರಕೆ ಹುಡುಕುವುದು ಸಮರ ಕಲೆಯಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply