ಸೀರೆ ಹೊದಿಸಲಿರುವ ಗೂಗಲ್… ಸಾಂಸ್ಕೃತಿಕ ಎಳೆಗಳನ್ನು ಹಿಡಿದು ಸಮುದಾಯವನ್ನು ಪ್ರಭಾವಿಸುವ ಸೂತ್ರ!

ಡಿಜಿಟಲ್ ಕನ್ನಡ ಟೀಮ್:

ಸೀರೆ ಭಾರತೀಯ ಸಂಸ್ಕೃತಿಯ ಉಡುಪು. ಸೀರೆ ಬಗೆ ಹಾಗೂ ಅವುಗಳನ್ನು ಉಡುವ ವಿಧಾನಗಳಲ್ಲೂ ಅನೇಕ ವಿಧಗಳಿವೆ. ಈ ಪ್ರತಿಯೊಂದು ವಿಧವು ನಮ್ಮ ದೇಶದ ವಿವಿಧ ಪ್ರದೇಶಗಳ ಸಂಸ್ಕೃತಿಯ ಪ್ರತೀಕವಾಗಿವೆ. ಈಗ ನಮ್ಮ ದೇಶದ ವಿವಿಧ ಸಂಸ್ಕೃತಿಗಳನ್ನೆಲ್ಲಾ ಒಂದೆಡೆ ಸೇರಿಸುವ ಪ್ರಯತ್ನಕ್ಕೆ ಮುಂದಾಗಿದೆ ಗೂಗಲ್!

ಸದ್ಯ ಗೂಗಲ್ ಸಂಸ್ಥೆ ‘ಗೂಗಲ್ ಆರ್ಟ್ಸ್ ಅಂಡ್ ಕಲ್ಚರ್ಸ್’ ಎಂಬ ಕಾರ್ಯಕ್ರಮದ ಮೂಲಕ ವಿಶ್ವದ ಮೂಲೆ ಮೂಲೆಗಳಿಂದ ಸಾಂಸ್ಕೃತಿಕ ಉಡುಗೆಗಳ ಆನ್ ಲೈನ್ ವಸ್ತು ಪ್ರದರ್ಶನಕ್ಕೆ ಮುಂದಾಗಿದೆ. ಅದರ ಭಾಗವಾಗಿ ಭಾರತದ ವಿವಿಧ ಬಗೆಯ ಸೀರೆಗಳ ಪ್ರದರ್ಶನವೂ ನಡೆಯಲಿದೆ. ಇದರಲ್ಲಿ ಭಾರತದ 15 ರಾಜ್ಯಗಳ 60 ಬಗೆಯ ಸೀರೆಗಳು ಪ್ರದರ್ಶನವಾಗುತ್ತಿವೆ.

ಆ ಪೈಕಿ ಕರ್ನಾಟಕದ ಮೈಸೂರು ಸಿಲ್ಕ್ ಸೀರೆಯಿಂದ ಹಿಡಿದು, ಮಧ್ಯ ಪ್ರದೇಶದ ಭಾಗ್ ಪ್ರಿಂಟ್ ಸೀರೆ, ಆಂಧ್ರ ಪ್ರದೇಶದ ತೆಲಿಯಾ ರುಮಾಲ್ ಸೀರೆ, ಒಡಿಶಾದ ಸಕ್ತಪರ್ ಸೀರೆ, ಗುಜರಾತಿನ ಪಾರ್ಸಿ ಗಾರ ಸೀರೆ, ಉತ್ತರ ಪ್ರದೇಶದ ಬನಾರಸಿ ಸೀರೆ ಹೀಗೆ ಪ್ರಮುಖ ಸೀರೆಗಳು ಪ್ರದರ್ಶನವಾಗಲಿವೆ. ಇನ್ನು ಈ ಸ್ಥಳೀಯವಾಗಿ ನೇಯಲ್ಪಟ್ಟ ಸೀರೆಗಳನ್ನು ವಸ್ತು ಪ್ರದರ್ಶನದಲ್ಲಿ ಬಳಸಲಾಗುತ್ತಿರುವುದು ವಿಶೇಷ.

ಅಂದಹಾಗೆ ಈ ಸೀರೆಗಳ ಜತೆಗೆ ಅವುಗಳನ್ನು ಯಾವ ಯಾವ ವಿನ್ಯಾಸದಲ್ಲಿ ತೊಡಬಹುದು ಎನ್ನುವುದನ್ನು ಪ್ರದರ್ಶಿಸಲಾಗುವುದು. ಇದೇ ವರ್ಷಾಂತ್ಯದಲ್ಲಿ ಈ ಸೀರೆಗಳನ್ನು ಹೇಗೆ ತೊಡಬೇಕು ಎಂದು ತೋರಿಸಿಕೊಡುವ ವಿಡಿಯೋ ಅನ್ನು ಸಹ ಗೂಗಲ್ ಪ್ರಕಟಿಸಲಿದೆ.

ಒಂದು ಶಾಶ್ವತ ಮಾಹಿತಿಯಾಗಿ ಉಳಿದುಕೊಳ್ಳಲಿರುವ ಗೂಗಲ್ ನ ಈ ಪ್ರಯತ್ನ, ಸಾಂಸ್ಕೃತಿಕ ಶಕ್ತಿಯನ್ನು ಬಳಸಿಕೊಂಡು ಹೇಗೆಲ್ಲ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳನ್ನು ಪ್ರಭಾವಿಸಬಹುದು ಎಂಬುದಕ್ಕೆ ಒಂದು ಮಾದರಿ.

Leave a Reply