ಗೂರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯದ ಹೋರಾಟವನ್ನು ತೀವ್ರಗೊಳಿಸಿರುವ ಅಂಶ ಯಾವುದು ಗೊತ್ತೇ?

ಡಿಜಿಟಲ್ ಕನ್ನಡ ಟೀಮ್:

ಪಶ್ಚಿಮ ಬಂಗಾಳದ ಭಾಗವಾಗಿರುವ ಡಾರ್ಜಿಲಿಂಗ್ ಪ್ರಾಂತ್ಯದಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ಬೇಕು ಎಂಬ ಆಗ್ರಹ ಇವತ್ತಿನದಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಇದು ತಾರಕಕ್ಕೇರಿದೆ. ಅಲ್ಲಿ ಯಾವ ವಹಿವಾಟುಗಳು, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಾಗದಮಟ್ಟಿಗೆ ಪ್ರತಿಭಟನೆ ಬಿರುಸುಗೊಂಡಿದೆ.

ಪ್ರಾರಂಭದಿಂದಲೂ ಜಿಜೆಎಂ ಜತೆ ಬಿಜೆಪಿ ಮೈತ್ರಿ ಇರುವುದು ಹಾಗೂ ಬಿಜೆಪಿಯು ಶತಾಯಗತಾಯ ಮಮತಾ ಬ್ಯಾನರ್ಜಿಯವರನ್ನು ಮಣಿಸುವುದಕ್ಕೆ ನೋಡುತ್ತಿರುವುದು ತಿಳಿದಿರುವ ಸಂಗತಿ. ಹೀಗೊಂದು ರಾಜಕೀಯ ಆಯಾಮವನ್ನು ಇಲ್ಲಿ ನೋಡಬಹುದಾದರೂ ಈ ಮಟ್ಟಿಗೆ ಪ್ರತಿಭಟನೆ ಬಿರುಸುಗೊಳ್ಳುವುದಕ್ಕೆ ಕಾರಣವಾಗಿರುವುದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಾ ನೀತಿ.

ಹೌದು, ಕಳೆದ ತಿಂಗಳು ‘ರಾಜ್ಯದ ಎಲ್ಲಾ ಪ್ರದೇಶಗಳ ಶಾಲೆಗಳಲ್ಲೂ ಬೆಂಗಾಲಿ ಭಾಷೆ ಕಡ್ಡಾಯವಾಗಿ ಕಲಿಸಬೇಕು’ ಎಂದು ಮಮತಾ ಅವರು ಘೋಷಿಸಿದ್ದರು. ಈ ನಿರ್ಧಾರದ ಮೂಲಕ ನಮ್ಮ ಮೇಲೆ ಬಲವಂತವಾಗಿ ಬೆಂಗಾಲಿ ಭಾಷೆ ಹೇರಲಾಗುತ್ತಿದೆ ಎಂದು ಇಲ್ಲಿನ ಗೂರ್ಖಾ ಜನರು ವಿರೋಧಿಸುತ್ತಿದ್ದಾರೆ. ಅದರ ಜತೆಗೆ ಗೂರ್ಖಾಲ್ಯಾಂಡ್ ಪ್ರತ್ಯೇಕತೆಗೂ ಬೇಡಿಕೆ ಇಟ್ಟಿದ್ದಾರೆ. ಗೂರ್ಖಾಲ್ಯಾಂಡ್ ಗಾಗಿ ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಪರಿಸ್ಥಿತಿ ಹದಗೆಟ್ಟಿದೆ.

ಪಶ್ಚಿಮ ಬಂಗಾಳದ ಗುಡ್ಡಗಾಡು ಪ್ರದೇಶವಾಗಿರುವ ಡಾರ್ಜೆಲಿಂಗ್ ನಲ್ಲಿ ನೇಪಾಳಿ ಭಾಷೆಗೆ ಮಾನ್ಯತೆ ನೀಡಬೇಕೆಂಬುದು ಹಲವು ದಶಕಗಳ ಬೇಡಿಕೆಗಳಲ್ಲಿ ಒಂದು. ಇತ್ತೀಚೆಗೆ ಇಲ್ಲಿನ ಮಿರಿಕ್ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಈ ಬೇಡಿಕೆಗೆ ಒಪ್ಪಿಗೆ ನೀಡುವುದರ ಜತೆಗೆ ಪಶ್ಚಿಮ ಬಂಗಾಳ ಲೋಕಸೇವಾ ಆಯೋಗ ಪರೀಕ್ಷೆಯಲ್ಲಿಯೂ ನೇಪಾಳಿ ಭಾಷೆಗೆ ಅವಕಾಶ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಈಗ ಬೆಂಗಾಲಿ ಭಾಷೆಯನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕು ಎಂಬ ನಿರ್ಧಾರ ಈಗ ಗೂರ್ಖಾಲ್ಯಾಂಡ್ ಐಡೆಂಟಿಟಿ ಪ್ರಶ್ನೆಯನ್ನು ಮತ್ತೆ ಪ್ರಖರವಾಗಿಸಿದೆ.

ಇತ್ತೀಚಿನ ದಿನಗಳಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ಈ ಪ್ರದೇಶದಲ್ಲಿ ತನ್ನ ಬೇರು ಬಿಡುತ್ತಿರುವ ಸಂದರ್ಭದಲ್ಲಿ ಸರ್ಕಾರದ ಈ ನಿರ್ಧಾರ ಪ್ರಕಟಿಸಿರುವುದು ಗೂರ್ಖಾ ಜನ್ಮುಖಿ ಮೋರ್ಚಾದ ಪ್ರಸ್ತುತತೆಯನ್ನು ಹೆಚ್ಚಿಸಿದೆ.

ಡಾರ್ಜೆಲಿಂಗ್ ಪ್ರದೇಶಗಳ ಶಾಲೆಗಳಲ್ಲಿ ಬಂಗಾಲಿ ಭಾಷೆಯನ್ನು ಕಲಿಸಲಾಗುತ್ತಿದೆ. ಇದು ಪಶ್ಚಿಮ ಬಂಗಾಳ ಸರ್ಕಾರ ಗೂರ್ಖಾ ಜನರ ಮೇಲೆ ಪ್ರಾಬಲ್ಯ ಸಾಧಿಸುವ ಒಂದು ಪ್ರಯತ್ನವಾಗಿ ಬಿಂಬಿತವಾಗುತ್ತಿದೆ. ಸಹಜವಾಗಿ ಈ ಜನರನ್ನು ಆಕ್ರೋಶಿತರನ್ನಾಗಿ ಮಾಡಿದೆ. 1949 ರಲ್ಲಿ ಈ ಪ್ರದೇಶದಲ್ಲಿ ಎಷ್ಟು ಮಂದಿ ನೇಪಾಳಿ ಭಾಷೆ ಮಾತನಾಡುತ್ತಾರೆ ಎಂಬ ಜನಗಣತಿ ಮಾಡಲಾಗಿತ್ತು. ಆಗ ನೇಪಾಳಿ ಮಾತೃಭಾಷಿಗರ ಸಂಖ್ಯೆ ಕೇವಲ 49 ಸಾವಿರವಿತ್ತು. ಇನ್ನು ಇದೇ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿರು ತಂಮಂಗ್ಸ್, ಲೆಪಚ್ಚಾಸ್ ಎಂಬ ಬುಡಕಟ್ಟು ಜನರು ತಮ್ಮದೇ ಆದ ಭಾಷೆಯನ್ನು ಹೊಂದಿದ್ದರು. ಆದರೆ ಈ ಬುಡಕಟ್ಟು ಜನರ ನಡುವೆ ನೇಪಾಳಿ ಭಾಷೆ ಸಂವಹನ ಸೇತುವೆಯಾಗಿತ್ತು. ಈ ಅಂಶವನ್ನು ಆಗ ಪರಿಗಣಿಸದೇ ನೇಪಾಳಿ ಮಾತೃಭಾಷಿಗರು ಅಲ್ಪ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣ ಕೊಟ್ಟು ಪ್ರತ್ಯೇಕ ಗೂರ್ಖಾಲ್ಯಾಂಡ್ ಅವಶ್ಯಕತೆ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಯಿತು. ಆ ಸಮಯದಿಂದ ಇಲ್ಲಿಯವರೆಗೂ ವಿವಿಧ ಸಂದರ್ಭಗಳಲ್ಲಿ ಈ ಭಾಷಾ ರಾಜಕೀಯ ಪದೇ ಪದೇ ಸದ್ದು ಮಾಡುತ್ತಲೇ ಬರುತ್ತಿದೆ.

Leave a Reply