ಜಾಗತಿಕ ಭಯೋತ್ಪಾದಕ ಪಟ್ಟಿಗೆ ಭಟ್ಕಳ ಮೂಲದ ಇಸ್ಲಾಮಿಕ್ ಸ್ಟೇಟ್ ಉಗ್ರ ಮೊಹಮದ್ ಶಾಫಿ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಮೂಲದ ಮೊಹಮದ್ ಶಾಫಿ ಅರ್ಮರ್ ಹಾಗೂ ಮತ್ತಿಬ್ಬರು ಉಗ್ರರನ್ನು ಅಮೆರಿಕ ಭದ್ರತಾ ಅಧಿಕಾರಿಗಳು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡಿದೆ.

ಮೊಹಮದ್ ಶಾಫಿ ಅರ್ಮರ್ ಭಟ್ಕಳ ಮೂಲದವನಾಗಿದ್ದು, ಈತ ಮೊದಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಸದಸ್ಯನಾಗಿದ್ದ. 2015ರಲ್ಲಿ ಈತನ ಸಹೋದರ ಸುಲ್ತಾನ್ ಅರ್ಮರ್ ಸತ್ತ ನಂತರ ಮೊಹಮದ್ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಯುವಕರನ್ನು ನೇಮಿಸುವ ಭಾರತೀಯ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಈತ ಈವರೆಗೂ ಸುಮಾರು 35ಕ್ಕೂ ಹೆಚ್ಚು ಭಾರತೀಯ ಯುವಕರನ್ನು ಈ ಉಗ್ರ ಸಂಘಟನೆಗೆ ಸೇರಿಸಿದ್ದಾನೆ ಎಂಬುದು ಭಾರತೀಯ ಭದ್ರತಾ ಸಿಬ್ಬಂದಿಗಳು ನೀಡಿರುವ ಮಾಹಿತಿ.

ಅರ್ಮರ್ ಜತೆಗೆ ಒಸಾಮಾ ಅಹ್ಮದ್ ಅತ್ತರ್ ಮತ್ತು ಮೊಹಮದ್ ಇಸಾ ಯೂಸಿಫ್ ಸಕಾರ್ ಅಲ್ ಬಿನಾಲಿ ಎಂಬ ಉಗ್ರರು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮಾಡುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅವರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಅಮೆರಿಕ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

‘ಅರ್ಮರ್, ವಿದೇಶಿ ಭಯೋತ್ಪಾದನಾ ಸಂಸ್ಥೆ ಹಾಗೂ ಐಎಸ್ ನಂತಹ ಜಾಗತಿಕ ಉಗ್ರ ಸಂಘಟನೆಗಳಿಗೆ ಗಳಿಗೆ ಯುವಕರನ್ನು ನೇಮಿಸುತ್ತಿರುವ ಭಾರತದ ಮುಖ್ಯಸ್ಥ. ಈತನಿಂದ ಉಗ್ರ ಸಂಘಟನೆಗಳಿಗೆ ನೇಮಕವಾಗಿರುವವರು ಈಗಾಗಲೇ ಭಾರತದ ಅನೇಕ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರ ಸರಬರಾಜು, ಉಗ್ರರಿಗೆ ತರಬೇತಿ ನೀಡಬಹುದಾದ ಸ್ಥಳಗಳ ಹುಡುಕಾಟದಂತಹ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಅತ್ತರ್ ಬೆಲ್ಜಿಯಂ ಪ್ರಜೆಯಾಗಿದ್ದು, 2015ರ ಪ್ಯಾರೀಸ್ ದಾಳಿ, 2016 ಮಾರ್ಚ್ ನಲ್ಲಿ ಬ್ರುಸೆಲ್ಸ್ ದಾಳಿಯ ನೇತೃತ್ವ ವಹಿಸಿದ್ದ. ಇನ್ನು ಬಿನಾಲ್ 2014ರಲ್ಲಿ ಬಹ್ರೈನ್ ಬಿಟ್ಟು ಬಂದು ಬಹ್ರೈನ್ ನ ಭದ್ರತಾ ಪಡೆಯಲ್ಲಿರುವ ಸದಸ್ಯರಿಗೆ ಐಎಸ್ ಉಗ್ರ ಸಂಘಟನೆ ಸೇರುವಂತೆ ವಿಡಿಯೋ ಸಂದೇಶಗಳ ಮೂಲಕ ಪ್ರೇರೇಪಿಸುತ್ತಿದ್ದ’ ಎಂದು ಅಮೆರಿಕ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply