1993ರ ಮುಂಬೈ ಸರಣಿ ಸ್ಫೋಟ: ಅಬು ಸಲೇಮ್ ಸೇರಿ ಆರು ಮಂದಿ ಅಪರಾಧಿ, ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಸುದೀರ್ಘ ಎರಡೂವರೆ ದಶಕಗಳಿಂದ ವಿಚಾರಣೆ ನಡೆಯುತ್ತಾ ಬಂದಿದ್ದ 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಎರಡನೇ ಹಂತದ ತೀರ್ಪು ಇಂದು ಪ್ರಕಟವಾಗಿದೆ. ಇಂದಿನ ತೀರ್ಪಿನಲ್ಲಿ ಭೂಗತ ಪಾತಕಿ ಅಬು ಸಲೇಮ್ ಹಾಗೂ ಮುಸ್ತಾಫಾ ದೊಸ್ಸಾ ಜತೆಗೆ ಇನ್ನು ನಾಲ್ವರನ್ನು ಅಪರಾಧಿ ಎಂದು ವಿಶೇಷ ಟಾಡಾ ನ್ಯಾಯಾಲಯ ತೀರ್ಪು ನೀಡಿದೆ.

1993ರ ಮಾರ್ಚ್ 12ರಂದು ಮುಂಬೈ ನಗರದಲ್ಲಿ ನಡೆಸಿದ ಸರಣಿ ಬಾಂಬ್ ದಾಳಿಯಲ್ಲಿ 257 ಮಂದಿ ಮೃತಪಟ್ಟರೆ, 713 ಮಂದಿ ಗಾಯಗೊಂಡಿದ್ದರು. ಈ ದಾಳಿಯ ಹಿಂದೆ ಭೂಗತ ಪಾತಕಿ ದಾವುದ್ ಇಬ್ರಾಹಿಂ, ಟೈಗರ್ ಮೆನನ್ ಹಾಗೂ ಯಾಕೂಬ್ ಮೆನನ್ ಸಹ ಸಂಚು ರೂಪಿಸಿದ್ದರು ಎಂಬ ಆರೋಪವಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ಪ್ರಕಟವಾಗಿದ್ದ ಮೊದಲ ಹಂತದ ತೀರ್ಪಿನಲ್ಲಿ 100 ಆರೋಪಿಗಳನ್ನು ಅಪರಾಧಿ ಎಂದು ನಿರ್ಧರಿಸಿ ಅದರಲ್ಲಿ 12 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆ ಪೈಕಿ ದಾವುದ್ ಇಬ್ರಾಹಿಂ ಸೇರಿದಂತೆ 27 ಮಂದಿ ತಲೆಮರೆಸಿಕೊಂಡಿದ್ದಾರೆ. ಉಳಿದವರಿಗೆ ವಿವಿಧ ಹಂತದಲ್ಲಿ ಹಲವು ವರ್ಷಗಳ ಶಿಕ್ಷೆ ವಿಧಿಸಿತ್ತು.

ಇಂದು ಟಾಟಾ ನ್ಯಾಯಾಲಯದಲ್ಲಿ ಎರಡನೇ ಹಂತದ ತೀರ್ಪು ಪ್ರಕಟವಾಗಿದ್ದು, 7 ಆರೋಪಿಗಳ ಪೈಕಿ 6 ಮಂದಿಯನ್ನು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದರೆ, ಓರ್ವನನ್ನು ನಿರಪರಾಧಿ ಎಂದು ಘೋಷಿಸಿದೆ.

ಅಬ್ದುಲ್ ಕ್ವಾಯಮ್ ಅವರನ್ನು ದೋಷಮುಕ್ತ ಎಂದು ನಿರ್ಧರಿಸಿದರೆ, ರಿಯಾಜ್ ಸಿದ್ದಿಕಿ ಟಾಡಾ ಆರೋಪದ ಅಡಿ ಅಪರಾಧಿಯಾಗಿದ್ದಾರೆ. ಇವರ ವಿರುದ್ಧದ ಇತರೆ ಆರೋಪಗಳು ವಜಾಗೊಂಡಿವೆ. ಭೂಗತಪಾತಕಿ ಅಬು ಸಲೇಮ್ ಸ್ಫೋಟಕ ಕಾಯ್ದೆ ಅಡಿ ಅಪರಾಧಿಯಾಗಿದ್ದು, ಟಾಡಾ ಕಾಯ್ದೆ ಅಡಿ ಈತನಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ. ಇನ್ನು ಮತ್ತೊಬ್ಬ ಆರೋಪಿ ಕರಿಮುಲ್ಲಾ ಖಾನ್ ಪಿತೂರಿ ಆರೋಪ ಸಾಬೀತಾಗಿದೆ. ಈತ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಮುಸ್ಲಲ್ಮಾನರ ವಿರುದ್ಧ ನಡೆದ ದಾಳಿಯ ವಿಚಾರವಾಗಿ ಅಲಿಬಾಗ್ ಹೊಟೇಲ್ ನಲ್ಲಿ ಟೈಗರ್ ಮೆನನ್ ಜತೆ ಸಭೆಯಲ್ಲಿ ಭಾಗವಹಿಸಿದ್ದರು ಎಂಬುದು ಸಾಬೀತಾಗಿದೆ. ಇನ್ನು ತಾಹೆರ್ ಮರ್ಚೆಂಟ್, ಫಿರೋಜ್ ಅಬ್ದುಲ್ ಖಾನ್ ಹಾಗೂ ಭೂಗತ ಪಾತಕಿ ಮುಸ್ತಾಫಾ ದೊಸ್ಸಾ ಸಹ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂಬುದು ಸಾಬೀತಾಗಿದೆ.

ಈ ಎಲ್ಲ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಜೂನ್ 19ರಂದು ಪ್ರಕಟಿಸಲಾಗುವುದು.

Leave a Reply