ಲಂಕಾ ಮಾದರಿಯಲ್ಲಿ ಬಾಂಗ್ಲಾದೇಶವನ್ನು ಚೀನಾ ಸಾಲದ ಸುಳಿಯಲ್ಲಿ ಸಿಲುಕಿಸುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಏಷ್ಯಾದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿ ಇತರೆ ದೇಶಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವ ಚೀನಾ ಈಗ ಬಾಂಗ್ಲಾದೇಶವನ್ನು ಸಾಲದ ಸುಳಿಗೆ ನೂಕಲು ಎಲ್ಲಾ ಪ್ರಯತ್ನ ನಡೆಸುತ್ತಿದೆ. ಆರ್ಥಿಕ ನೆರವಿನ ಹೆಸರಿನಲ್ಲಿ ಬಾಂಗ್ಲಾದೇಶಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿರುವ ಚೀನಾ ಈಗ ಆ ಸಾಲವನ್ನು ವಾಣಿಜ್ಯ ಸಾಲವನ್ನಾಗಿ ಮಾರ್ಪಾಡು ಮಾಡಲು ನಿರ್ಧರಿಸಿದೆ. ಆ ಮೂಲಕ ಬಾಂಗ್ಲಾದೇಶ ಹೆಚ್ಚಿನ ಬಡ್ಡಿ ತೆರುವಂತಾಗಲಿದೆ.

ಈ ಹಿಂದೆ ಶ್ರೀಲಂಕಾ ದೇಶಕ್ಕೆ ಇದೇ ರೀತಿ ಮಾಡಿ ದ್ವೀಪರಾಷ್ಟ್ರವನ್ನು ತನ್ನ ಸಾಲಗಾರನನ್ನಾಗಿ ಮಾಡಿಕೊಂಡಿದೆ ಚೀನಾ. ಶ್ರೀಲಂಕಾದ ರಾಷ್ಟ್ರೀಯ ಸಾಲ 64.9 ಬಿಲಿಯನ್ ಅಮೆರಿಕನ್ ಡಾಲರ್ ಪೈಕಿ 8 ಬಿಲಿಯನ್ ನಷ್ಟು ಸಾಲ ಚೀನಾದ್ದೇ ಆಗಿದೆ. ಈಗ ಇದೇ ಮಾದರಿಯಲ್ಲಿ ಬಾಂಗ್ಲಾದೇಶವನ್ನು ಸಾಲದ ಸುಳಿಗೆ ನೂಕಲು ಚೀನಾ ಹೇಗೆಲ್ಲಾ ಪ್ರಯತ್ನಿಸುತ್ತಿದೆ ನೋಡೋಣ ಬನ್ನಿ.

ಕಳೆದ ವರ್ಷ ಢಾಕಾಗೆ ಭೇಟಿ ನೀಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, 34 ವಿವಿಧ ಯೋಜನೆಗಳಿಗಾಗಿ ಸುಮಾರು 25 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದಕ್ಕೆ ಮುಂದಾಗಿತ್ತು. ಈಗ ಈ ಹಣವನ್ನು ವಾಣಿಜ್ಯ ಸಾಲ (ಅತಿ ಹೆಚ್ಚಿನ ಬಡ್ಡಿ ದರ) ವನ್ನಾಗಿ ಪರಿವರ್ತಿಸಲು ಚೀನಾ ಮುಂದಾಗಿದೆ. ಚೀನಾದ ಈ ನಿರ್ಧಾರ ಬಾಂಗ್ಲಾದೇಶದ ಮೇಲೆ ದುಬಾರಿ ಸಾಲದ ಹೊರೆಯನ್ನು ಹೇರಿದಂತಾಗಲಿದೆ.  ಚೀನಾದ ಈ ನಿರ್ಧಾರಕ್ಕೆ ಬಾಂಗ್ಲಾದೇಶ ವಿರೋಧ ವ್ಯಕ್ತಪಡಿಸಿದೆ.

ಈ ಎಲ್ಲಾ 30 ಯೋಜನೆಗಳಿಗೂ ಅಧ್ಯಕ್ಷರು ತಮ್ಮ ಭೇಟಿಯ ಸಂದರ್ಭದಲ್ಲಿ ಒಪ್ಪಿಗೆ ನೀಡಿಲ್ಲ. ಎರಡು ದೇಶಗಳ ಸರ್ಕಾರದ ನಡುವಣ ಹೊಂದಾಣಿಕೆಯಿಂದ ಈ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗಿದೆ ಎಂದು ಚೀನಾ ರಾಗ ಬದಲಿಸಿದೆ. ಚೀನಾದ ಈ ವಾದವನ್ನು ನಿರಾಕರಿಸಿರುವ ಬಾಂಗ್ಲಾ, ಎರಡು ದೇಶಗಳ ಸರ್ಕಾರದ ಉನ್ನತ ನಾಯಕರು ಭೇಟಿಯಾಗಿ ಒಪ್ಪಂದ ಮಾಡಿಕೊಂಡ ಮೇಲೆ ಈ ಆರ್ಥಿಕ ನೆರವನ್ನು ವಾಣಿಜ್ಯ ಸಾಲವನ್ನಾಗಿ ಪರಿವರ್ತಿಸುವುದು ಸರಿಯಲ್ಲ ಎಂದಿದೆ.

Leave a Reply