ಸತ್ತ ಉಗ್ರರಿಗೆ ಬೆಂಬಲಿಗರಿಂದ ಸಿಕ್ತು ಗನ್ ಸೆಲ್ಯೂಟ್, ಆದ್ರೆ ಹುತಾತ್ಮ ಪೊಲೀಸರ ಅಂತ್ಯಸಂಸ್ಕಾರಕ್ಕೆ ಬರಲಿಲ್ಲ ರಾಜಕೀಯ ನಾಯಕರು

ಡಿಜಿಟಲ್ ಕನ್ನಡ ಟೀಮ್:

ಕಣಿವೆ ರಾಜ್ಯದ ವಿವಿಧ ಪ್ರದೇಶಗಳಲ್ಲಿನ ಬೇರೆ ಬೇರೆ ಹಿಂಸಾಚಾರ ಪ್ರಕರಣಗಳಲ್ಲಿ ಒಟ್ಟು 14 ಮಂದಿ ಬಲಿಯಾಗಿದ್ದಾರೆ. ಆ ಪೈಕಿ ಮೂವರು ಉಗ್ರರು, ಇಬ್ಬರು ನಾಗರೀಕರು, ಎಂಟು ಮಂದಿ ಪೊಲೀಸರು ಹಾಗೂ ಓರ್ವ ಯೋಧ. ಇಲ್ಲಿ ನಮ್ಮ ಮುಂದೆ ಕಾಣುತ್ತಿರುವ ವ್ಯತ್ಯಾಸ ಏನೆಂದರೆ, ಸತ್ತ ಉಗ್ರರಿಗೆ ಅವರ ಬೆಂಬಲಿಗರು ಬಂದೂಕಿನ ಸೆಲ್ಯೂಟ್ ಮೂಲಕ ಅಂತ್ಯ ಕ್ರಿಯೆ ನಡೆದರೆ. ಆದರೆ ದೇಶಕ್ಕಾಗಿ ಪ್ರಾಣ ಬಿಟ್ಟ ಪೊಲೀಸರ ಅಂತ್ಯಸಂಸ್ಕಾರದ ವೇಳೆ ಯಾವೊಬ್ಬ ರಾಜಕೀಯ ನಾಯಕನೂ ಉಪಸ್ಥಿತರಾಗದಿರುವುದು ಶೋಚನೀಯ ಸಂಗತಿ.

ಎಲ್ಲೆಲ್ಲಿ ಏನೇನಾಯ್ತು..?

ನಿನ್ನೆ ಕಾಶ್ಮೀರದ ಕಿಲ್ಗಾಮ್ ಜಿಲ್ಲೆಯ ಅರ್ವಾನಿ ಜಿಲ್ಲೆಯಲ್ಲಿ ನಡೆದ ಸಿಆರ್ ಪಿಎಫ್ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್ ಉಗ್ರರನ್ನು ಸದೆಬಡೆಯಲಾಗಿತ್ತು. ಮಲಿಕ್ ಮೊಹಲ್ಲಾ ಪ್ರದೇಶದಲ್ಲಿ ದಳಿ ನಡೆಸಿದ ಸೇನೆ ಜಮ್ಮು ಕಾಶ್ಮೀರದಲ್ಲಿ ಎಲ್ಇಟಿಯ ಕಮಾಂಡರ್ ಜುನೈದ್ ಮಟ್ಟು ನನ್ನು ಹೊಡೆದುರುಳಿಸಿದ್ದರು. ಕೇವಲ 19 ವರ್ಷದ ಮಟ್ಟು ಕಣಿವೆ ರಾಜ್ಯದಲ್ಲಿ ಭಾರತೀಯ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಪ್ರಮುಖ 12 ಉಗ್ರರ ಪೈಕಿ ಒಬ್ಬನಾಗಿದ್ದ. ಈತ ಹೊಸ ತಲೆಮಾರಿನ ಉಗ್ರನಾಗಿದ್ದು, ಈತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಬದಲಿಗೆ ಲಷ್ಕರ್ ಸಂಘಟನೆಗೆ ಸೇರಿಕೊಂಡಿದ್ದ. ಮಟ್ಟು ಜತೆಗೆ ನಾಸಿರ್ ವಾನಿ ಹಾಗೂ ಅದಿಲ್ ಮುಷ್ತಾಕ್ ಮಿರ್ ಎಂಬಾ ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಈ ಮೂವರು ಉಗ್ರರ ದೇಹವನ್ನು ವಶಪಡಿಸಿಕೊಳ್ಳುವ ಸಲುವಾಗಿ ಈ ಉಗ್ರರ ಬೆಂಬಲಿಗರು ಸೇನೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ನಾಗರೀಕರು ಹಾಗೂ ಭದ್ರತಾ ಪಡೆಯ ನಡುವೆ ಘರ್ಷಣೆ ಏರ್ಪಟ್ಟಿತು. ಈ ಹಂತದಲ್ಲಿ ಸೇನೆ ಗುಂಡು ಹಾರಿಸಬೇಕಾಯಿತು. ಈ ಹಂತದಲ್ಲಿ 22 ವರ್ಷದ ಮೊಹಮದ್ ಅಶ್ರಫ್ ಖಾರ್ ಮತ್ತು 14 ವರ್ಷದ ಅಶನ್ ದಾರ್ ಎಂಬ ನಾಗರೀಕರು ಮೃತಪಟ್ಟರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೆ ತರಲಾಯಿತು.

ಉಗ್ರ ಮಟ್ಟು ಹತ್ಯೆಗೆ ಪ್ರತಿಕಾರವಾಗಿ ಎಲ್ಇಟಿ ಸಂಘಟನೆ ಅಚಲಬಾದ್ ಪ್ರದೇಶದಲ್ಲಿ ದಾಳಿ ನಡೆಸಿತು. ಪೊಲೀಸರ ಮೇಲೆ ನಡೆದ ಈ ದಾಳಿಯ ವೇಳೆ ಸಬ್ ಇನ್ಸ್ ಪೆಕ್ಟರ್ ಫಿರೋಜ್ ಅಹ್ಮದ್ ಸೇರಿದಂತೆ 8 ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟರು. ಇನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ಭಾರತೀಯ ಸೈನಿಕನೊಬ್ಬ ಮೃತಪಟ್ಟಿದ್ದಾನೆ. ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿರುವ ಗಡಿ ನಿಯಂತ್ರಣ ರೇಖೆ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ 5.15ರ ಸುಮಾರಿಗೆ ಪಾಕಿಸ್ತಾನ ಸೇನೆಯಿಂದ ಗುಂಡಿನ ದಾಳಿ ನಡೆಯಿತು. ಈ ವೇಳೆ ಭಾರತೀಯ ಯೋಧ ಹತನಾಗಿದ್ದ.

ನಾವು ಎಡವುತ್ತಿರುವುದೆಲ್ಲಿ?

ನಾವು ಈ ಮೂರು ಪ್ರಕರಣಗಳನ್ನು ಒಟ್ಟಾರೆ ನೋಡಿದರೆ ನಮ್ಮ ಮುಂದೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ, ಕಣಿವೆ ರಾಜ್ಯದಲ್ಲಿ ಸತ್ತ ಉಗ್ರರಿಗೆ ಸಿಗುತ್ತಿರುವ ಮರ್ಯಾದೆ ದೇಶಕ್ಕಾಗಿ ಪ್ರಾಣ ಬಿಟ್ಟ ಪೋಲೀಸರು ಹಾಗೂ ಸೈನಿಕರಿಗೆ ಸಿಗದಿರುವುದು. ಭದ್ರತಾ ಪಡೆಯ ಗುಂಡಿಗೆ ಸತ್ತ ಜುನೈದ್ ಮಟ್ಟು ಹಾಗೂ ಮತ್ತಿಬ್ಬರು ಉಗ್ರರಿಗೆ ಖುದ್ವಾನಿ ಪ್ರದೇಶದಲ್ಲಿ ಆತನ ಬೆಂಬಲಿಗರಿಂದ ಗನ್ ಸೆಲ್ಯೂಟ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ಅವರಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.

ಇನ್ನು ಉಗ್ರರ ದಾಳಿಗೆ ಸತ್ತ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತಾದರೂ ಈ ಪೊಲೀಸ್ ಅಧಿಕಾರಿಗಳು ಅಂತ್ಯಕ್ರಿಯೆ ವೇಳೆ ಬಿಜೆಪಿಯಿಂದ ಹಿಡಿದು ಪಿಡಿಪಿವರೆಗೂ ಯಾವುದೇ ಪಕ್ಷದ ನಾಯಕರು ಉಪಸ್ಥಿತರಿರಲಿಲ್ಲ. ನಮ್ಮ ದೇಶಕ್ಕಾಗಿ ಪ್ರಾಣ ಬಿಟ್ಟ ಪೊಲೀಸರ ಅಂತ್ಯ ಸಂಸ್ಕಾರದ ವೇಳೆ ನಮ್ಮ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

Leave a Reply