ಇತರೆ ಮೆಟ್ರೋಗಳಿಗಿಂತ ಕೊಚ್ಚಿ ಮೆಟ್ರೋ ಹೇಗೆ ಭಿನ್ನ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಕೊಚ್ಚಿ ಮೆಟ್ರೋ ರೈಲು ಮಾರ್ಗವನ್ನು ಇಂದು ಉದ್ಘಾಟಿಸಿದ್ದಾರೆ. ₹5181 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 13 ಕಿ.ಮೀ ಉದ್ದದ ಈ ಮೆಟ್ರೋ ಮಾರ್ಗ ಹಲವು ವಿಶೇಷತೆಗಳನ್ನು ಹೊಂದಿದ್ದು ಅವುಗಳು ಹೀಗಿವೆ…

  • ಅತ್ಯಂತ ಕಡಿಮೆ ಸಮಯದ ಅವಧಿ: ದೇಶದಲ್ಲಿ ನಿರ್ಮಾಣವಾದ ಮೊದಲ ಹಂತದ ಅತಿ ದೊಡ್ಡ ಮೆಟ್ರೋ ಮಾರ್ಗ ಇದಾಗಿದ್ದು, ಕೇವಲ 45 ತಿಂಗಳುಗಳ ಕಾಲಾವಧಿಯಲ್ಲಿ ಈ ಮಾರ್ಗ ಸೇವೆಗೆ ಅರ್ಪಣೆಯಾಗಿದೆ. ಇದು ಅತಿ ಕಡಿಮೆ ಸಮಯದಲ್ಲಿ ನಿರ್ಮಾಣವಾದ ಮೆಟ್ರೋ ಮಾರ್ಗವಾಗಿದ್ದು, ಮುಂಬೈ ಮೆಟ್ರೊ ಮೊದಲ ಹಂತದ 11 ಕಿ.ಮೀ ಉದ್ದದ ಮಾರ್ಗ ನಿರ್ಮಾಣಕ್ಕೆ 75 ತಿಂಗಳು, ಚೆನ್ನೈನ ಮೊದಲ ಹಂತದ 4 ಕಿ.ಮೀ ಉದ್ಧದ ಮಾರ್ಗಕ್ಕೆ 72 ತಿಂಗಳು ಸಮಯ ತೆಗೆದುಕೊಂಡಿತ್ತು.
  • ಪರಿಸರ ಸ್ನೇಹಿ ಮೆಟ್ರೊ: ಈ ಮೆಟ್ರೊ ಪರಿಸರ ಸ್ನೇಹಿಯಾಗಿದ್ದು, ಇದರ ಅಗತ್ಯತೆಯ ಶೇ.25 ರಷ್ಟು ವಿದ್ಯುತ್ ಅನ್ನು ಸೊಲಾರ್ ಮೂಲಕವೇ ಪಡೆದುಕೊಳ್ಳಲಿದೆ. ಈ ಮೆಟ್ರೊ ಮಾರ್ಗದ 23 ನಿಲ್ದಾಣಗಳಲ್ಲೂ ಸೋಲಾರ್ ಹೊಂದಿದ್ದು, ಇವುಗಳಿಂದ 2.3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಿದೆ. ಇಲ್ಲಿ 4 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಇನ್ನು 4000 ಕ್ಕೂ ಹೆಚ್ಚು ಪಿಲ್ಲರ್ ಗಳಿರುವ ಈ ಮೆಟ್ರೋ ಮಾರ್ಗದಲ್ಲಿ ಪ್ರತಿ ಆರು ಪಿಲ್ಲರ್ ಪೈಕಿ ಒಂದರಲ್ಲಿ ವರ್ಟಿಕಲ್ ಗಾರ್ಡನ್ ಮಾಡಲಾಗಿದೆ. ಪಾಲಿಕೆಯ ತ್ಯಾಜ್ಯವನ್ನು ಬಳಸಿ ಇವುಗಳನ್ನು ನಿರ್ವಹಿಸಲಾಗುವುದು.
  • ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಆದ್ಯತೆ: ಈ ಕೊಚ್ಚಿ ಮೆಟ್ರೊವಿನ ಮತ್ತೊಂದು ವಿಶೇಷವೆಂದರೆ ಇಲ್ಲಿ ಕೆಲಸ ಮಾಡುವವರು ಬಹುತೇಕ ಮಹಿಳೆಯರಾಗಿದ್ದಾರೆ. ಅಲ್ಲದೆ ತೃತೀಯ ಲಿಂಗಿಗಳಿಗೂ ಸಾಕಷ್ಟು ಉದ್ಯೋಗ ಕಲ್ಪಿಸಲಾಗಿದ್ದು, ಅತಿ ಹೆಚ್ಚು ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿರುವ ಸರ್ಕಾರಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
  • ಥೀಮ್ ಸ್ಟೇಷನ್ ಗಳು: ಮೊದಲ ಹಂತದಮಾರ್ಗದ 11 ರೈಲ್ವೆ ನಿಲ್ದಾಣಗಳಲ್ಲೂ ಒಂದೊಂದು ಥೀಮ್ ಆಧಾರವಾಗಿ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರತಿ ನಿಲ್ದಾಣ ಆಯಾ ಥೀಮ್ ಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ.
  • ವಾಟರ್ ಮೆಟ್ರೋ: ನಗರಗಳ ನಡುವೆ ಸಂಚಾರಿ ವ್ಯವಸ್ಥೆಯ ಜತೆಗೆ ಕೊಚ್ಚಿಯ 10 ಐಲ್ಯಾಂಡ್ ಗಳಿಗೂ ಸಂಪರ್ಕ ಕಲ್ಪಿಸುವ ವಾಟರ್ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, 2018ರ ಅಂತ್ಯದ ವೇಳೆಗೆ ಈ ಮಾರ್ಗ ಸಿದ್ಧವಾಗುವ ನಿರೀಕ್ಷೆ ಇದೆ.
  • ವಿಶೇಷ ಚೇತನರಿಗೆ ವಿಶೇಷ ಸೌಲಭ್ಯ: ಈ ಮೆಟ್ರೊನಲ್ಲಿ ವಿಶೇಷಚೆತನರಿಗೆ ಅನುಕೂಲವಾಗಲು ವೀಲ್ ಚೇರ್ ಮಾರ್ಗದಿಂದ ಹಿಡಿದು ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವರ ಜತೆಗೆ ಮಹಿಳೆಯರು ಹಾಗೂ ಮಕ್ಕಳು, ಹಿರಿಯ ನಾಗರೀಕರಿಗೆ ಅನುಕೂಲವಾಗುವ ಸೌಲಭ್ಯವಿದೆ.
  • ಉಚಿತ ವೈಫೈ: ಕೊಚ್ಚಿ ಮೆಟ್ರೋ ತನ್ನ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆಯನ್ನು ನೀಡಲು ಮುಂದಾಗಿದೆ. ಈ ರೈಲಿನ ಕೋಚ್ ಗಳು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೌಲಭ್ಯ ನೀಡಲಾಗುವುದು.
  • ಬೋಗಿಗಳಲ್ಲಿ ಚೆಂಡವಾದ್ಯ: ಕೊಚ್ಚಿ ಮೆಟ್ರೊ ರೈಲಿನ ಬೋಗಿಗಳ ಬಾಗಿಲುಗಳು ತೆರೆಯುವಾಗ ಅಥವಾ ಮುಚ್ಚುವಾಗ ಕೇರಳದ ಸಾಂಪ್ರದಾಯಿಕ ಸಂಗೀತವಾದ್ಯ ಚೆಂಡಾದ ಸಂಗೀತ ಕೇಳಬಹುದಾಗಿದೆ.

Leave a Reply