ಅಂತರಿಕ್ಷದಲ್ಲಿ ಸಂತಾನವರ್ಧನೆ – ಗಗನಯಾನಿಗಳು ಯೋಚಿಸಿರಲಿಲ್ಲ, ವಿಜ್ಞಾನಿಗಳ ಅಜೆಂಡದಲ್ಲಿ ಇರಲಿಲ್ಲ, ಈಗ ಏಕೆ ಈ ಪ್ರಶ್ನೆ?

ಈ ವಾರ ಅಂತಾರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳು ಒಂದು ಅಪರೂಪದ ಪ್ರಶ್ನೆ ಎತ್ತಿವೆ. ಇದನ್ನು ಅಶ್ಲೀಲ ಸಾಹಿತ್ಯ ಎನ್ನುವಂತಿಲ್ಲ. ವಿಜ್ಞಾನದ ನೆಲೆಯಲ್ಲೇ ಚರ್ಚಿಸಬೇಕಾದ ಜರೂರು ಇರುವ ಪ್ರಶ್ನೆ. ಪತ್ರಿಕೆಗಳು ಪ್ರಸ್ತಾಪಿಸಿರುವ ವಿಚಾರ `ಅಂತರಿಕ್ಷದಲ್ಲಿ ಸೆಕ್ಸ್’ ಕುರಿತು. ಈ ಪ್ರಶ್ನೆ ಕೇಳಲು ಒಂದು ಸಂಗತಿಯೇ ನೆಪವಾಗಿದೆ. ಕಳೆದ ತಿಂಗಳು ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿ ಹಲವಾರು ತಿಂಗಳು ಇಟ್ಟಿದ್ದ ಇಲಿಗಳ ಭ್ರೂಣವನ್ನು ವಾಪಸ್ ಜಪಾನಿಗೆ ತಂದು ಇಲಿಗಳನ್ನು ಸೃಷ್ಟಿಸಿದಾಗ ಅವು ಎಲ್ಲ ಇಲಿಗಳಂತೆಯೇ ಇರುವುದು ಜೀವವಿಜ್ಞಾನಿಗಳಿಗೆ ಬೇರೆ ಬೇರೆ ಪ್ರಶ್ನೆ ಕೇಳಲು ತಾಕತ್ತು ಕೊಟ್ಟಿದೆ. ಇದನ್ನು ಮನುಷ್ಯರಿಗೂ ಏಕೆ ವಿಸ್ತರಿಸಬಾರದು? ಏಕೆ ನಾಸಾ ಸಂಸ್ಥೆ ಅಥವಾ ಯೂರೋಪಿಯನ್ ಸೈನ್ಸ್ ಏಜೆನ್ಸಿ ಅಂತರಿಕ್ಷದಲ್ಲಿ ಸೆಕ್ಸ್ ಕುರಿತು ಏನೂ ಮಾತನಾಡುತ್ತಿಲ್ಲ? ಇದೊಂದು ಗಂಭೀರ ಪ್ರಶ್ನೆಯಲ್ಲವೆ? ಎಂದು ಕೆಣಕಿವೆ.

ಖಗೋಳ ವಿಜ್ಞಾನಕ್ಕೆ ಹೆಸರಾದ space.com ಕೂಡ ಇದಕ್ಕೆ ದನಿಕೊಟ್ಟಿದೆ. ಕ್ರಿ.ಶ.2030ರ ಹೊತ್ತಿಗೆ ಖಾಸಗಿ ವ್ಯೋಮನೌಕೆಗಳು ಯುವಕ, ಯುವತಿಯರನ್ನು ಮಂಗಳಗ್ರಹಕ್ಕೆ ಕಳಿಸುವ ಯೋಚನೆಯಲ್ಲಿವೆ. ಆ ಸಂದರ್ಭ ಬಂದಾಗ ಅದನ್ನು ಕಡೆಗಣಿಸುವುದಕ್ಕಾಗುತ್ತದೆಯೇ ಎಂಬುದು ಖಾಸಗಿ ವ್ಯೋಮಯಾತ್ರೆ ಮಾಡಿಸುವ ಕಂಪನಿಗಳ ಪ್ರಶ್ನೆ.

ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣ (International Space Station) ಸುಮಾರು ಹದಿನೇಳು ದೇಶದ ಖಗೋಳ ಯಾನಿಗಳನ್ನು ಆ ನಿಲ್ದಾಣಕ್ಕೆ ಕಳೆದ ಹದಿನಾರು ವರ್ಷದಿಂದ ಕರೆದುಕೊಂಡು ಹೋಗಿದೆ. ಮರಳಿ ಭೂಮಿಗೆ ಕಳಿಸಿದೆ. ಸುಮಾರು 400 ಕಿಲೋ ಮೀಟರ್ ಎತ್ತರದಲ್ಲಿ ಭೂಮಿಯನ್ನು ಪ್ರತಿ 92 ನಿಮಿಷಕ್ಕೊಮ್ಮೆ ಅದು ಪರಿಭ್ರಮಿಸುತ್ತಿದೆ. ಈ ತಿಂಗಳ ಮೊದಲ ವಾರದ ಹೊತ್ತಿಗೆ ಒಟ್ಟು 227 ಮಂದಿ ಗಗನಯಾತ್ರಿಗಳು ಅಲ್ಲಿಗೆ ಹೋಗಿ ಬಂದಿದ್ದಾರೆ. ಈಗಲೂ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈ ಯಾತ್ರೆಯಲ್ಲಿ ಪುರುಷರೂ ಭಾಗವಹಿಸಿದ್ದಾರೆ, ಮಹಿಳೆಯರೂ ಭಾಗವಹಿಸಿದ್ದಾರೆ. ಅವರೆಲ್ಲರ ಗುರಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ್ದು, ವಿಶೇಷವಾಗಿ ಶೂನ್ಯ ಗುರುತ್ವ ಮನುಷ್ಯನ ಶರೀರದ ಮೇಲೆ ಬೀರುವ ಪರಿಣಾಮ, ಮಾನಸಿಕ ಸ್ಥಿತಿಯಲ್ಲಿ ತರುವ ಬದಲಾವಣೆ, ಫಿಸಿಕ್ಸ್, ಅಸ್ಟ್ರಾನಮಿ, ಮೀಟಿಯರಾಲಜಿ, ಔಷಧಿ, ಡಯೆಟ್ ಹೀಗೆ ಹಲವು ಕ್ಷೇತ್ರದ ಅತಿ ಮುಖ್ಯವಾದ ಸಂಶೋಧನೆಯತ್ತ ಗಮನಕೊಟ್ಟಿದ್ದಾರೆ. ಹಾಗಾದರೆ ಶೂನ್ಯ ಗುರುತ್ವದಲ್ಲಿ ಸೆಕ್ಸ್ ಸಾಧ್ಯವಾದರೆ ಅದರ ಪರಿಣಾಮಗಳೇನು ಎಂಬ ಪ್ರಶ್ನೆ ಈಗ ಎದ್ದಿದೆ. ನಾಸಾದ ಜೀವ ವಿಜ್ಞಾನದ ಲ್ಯಾಬಿನ ವಿಜ್ಞಾನಿಗಳ ಅಜೆಂಡದಲ್ಲಿ ಇದಿಲ್ಲ. ಆದರೆ ಆ ಕುರಿತು ಸಂಶೋಧನೆಗೆ ಇದು ಸಕಾಲವಲ್ಲವೆ ಎಂದು ಹಲವು ಸಂಸ್ಥೆಗಳು ಕೇಳುತ್ತಿವೆ. ಏಕೆಂದರೆ 2030ರ ಹೊತ್ತಿಗೆ ವ್ಯೋಮಯಾನವನ್ನು ವಾಣಿಜ್ಯದ ದೃಷ್ಟಿಯಿಂದ ಏರ್ಪಡಿಸಿರುವ ಸಂಸ್ಥೆಗಳು ನವದಂಪತಿಗಳನ್ನು ಕಳಿಸುವ ಯೋಚನೆಯಲ್ಲಿವೆ. ಇದರ ಜೊತೆಗೆ ಜಗತ್ತಿನ ಖ್ಯಾತ ಭೌತ ವಿಜ್ಞಾನ ಸ್ಟೀಫನ್ ಹಾಕಿಂಗ್ ಈಗಲೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ. ಆತಂಕಕಾರಿಗಳ ಕೈಗೆ ಪರಮಾಣು ಅಸ್ತ್ರ ಸಿಕ್ಕರೆ? ಅಥವಾ ಕ್ಷುದ್ರಗ್ರಹಗಳೇ ಆತಂಕವಾದಿಗಳಾಗಿ ಭೂಮಿಯ ಮೇಲ ಎರಗುವ ಸುಳಿವು ಸಿಕ್ಕರೆ, ಕೊನೆಯಪಕ್ಷ ಮನುಕುಲದ ಪ್ರತಿನಿಧಿಗಳಾಗಿ ಕೆಲವರಾದರೂ ಅನ್ಯಗ್ರಹವನ್ನು ಆಶ್ರಯಿಸಬೇಕಲ್ಲ? ಆಗ ಸಂತಾನ ವೃದ್ಧಿ ಹೇಗಾಗುತ್ತದೆ?

ಮೆಸ್ಯಾಚುಸೆಟ್ಸ್ ನ ಮೆಡಿಕಲ್ ಕಾಲೇಜಿನ ಜೀವ ವಿಜ್ಞಾನಿ ಆ್ಯಂಡ್ರಿ ಡಾಯಿಸ್, ಸಾಮಾನ್ಯರ ತಲೆಯಲ್ಲಿ ಹೊಕ್ಕಿರುವ ಈ ಪ್ರಶ್ನೆಗೆ ವಾಸ್ತವಿಕತೆಯ ಹಿನ್ನೆಲೆಯಲ್ಲಿ ಉತ್ತರಿಸುತ್ತಾಳೆ. ಅಂತರಿಕ್ಷ ನಿಲ್ದಾಣದಲ್ಲಿ ಯಾವುದೇ ವಸ್ತುಗಳು ಅಂಕೆಯಲ್ಲಿಲ್ಲದಿದ್ದರೆ ಮೈಕ್ರೋಗ್ರಾವಿಟಿಯಲ್ಲಿ ಅವು ಅತ್ತಿಂದಿತ್ತ ಸರಿಯುತ್ತಲೇ ಇರುತ್ತವೆ. ಒಮ್ಮೆ ಮೇಲೆ, ಒಮ್ಮೆ ಕೆಳಗೆ, ಒಮ್ಮೆ ಎಡ, ಇನ್ನೊಮ್ಮೆ ಬಲ ಅಂದರೆ ಗಗನಯಾನಿಗಳ ಚಲನೆ ಮೂರೂ ಆಯಾಮದಲ್ಲಿ ನಡೆಯುತ್ತಿರುತ್ತದೆ. ಹೀಗಿರುವಾಗ ಗಂಡು-ಹೆಣ್ಣು ಹತ್ತಿರ ಬರುವುದಕ್ಕೆ ಕಷ್ಟಪಡಬೇಕು. 2006ರಲ್ಲಿ ಲವೌರ ಎಡ್ಮಾಂಡ್ ಸೇ ಎಂಬ ಲೇಖಕಿ `ಸೆಕ್ಸ್ ಇನ್ ಸ್ಪೇಸ್’ ಕೃತಿ ಬರೆಯುವಾಗ ಸ್ಯಾಲಿ ರೈಡ್, ಷಾನಾನ್ ಲೂಸಿಡ್ ಎಂಬ ಇಬ್ಬರು ಮಹಿಳಾ ಗಗನಯಾತ್ರಿಗಳನ್ನು ಸಂದರ್ಶನ ಮಾಡಿದಾಗ, ಅವರಿಬ್ಬರೂ ಹೇಳಿದ್ದು ಒಂದೇ ಉತ್ತರ. `ಆ ವಾತಾವರಣದಲ್ಲಿ ಈ ಪ್ರಶ್ನೆ ನಮ್ಮ ತಲೆಗೆ ಬರಲೇ ಇಲ್ಲ’ ಎಂದು.

1991ರಲ್ಲಿ ಜಾನ್ ಡೇವಿಸ್ ಮತ್ತು ಮ್ಯಾಕ್ಲಿ ದಂಪತಿಯನ್ನು ನಾಸಾ ಅಂತಾರಾಷ್ಟ್ರೀಯ ಅಂತರಿಕ್ಷ ನಿಲ್ದಾಣಕ್ಕೆ ಕಳಿಸಿತ್ತು. ಅವರನ್ನು ಈ ಕುರಿತು ಸಂದರ್ಶಿಸಿದಾಗ, ಹುಬ್ಬೇರಿಸಿ ಮುಂದೆ ಸಾಗಿದ್ದರು ಅಷ್ಟೇ. ವಾಸ್ತವವಾಗಿ ನಾಸಾ ಸಂಸ್ಥೆ ದಂಪತಿಯನ್ನು ಅಂತರಿಕ್ಷಕ್ಕೆ ಕಳಿಸುವುದನ್ನು ಆದಷ್ಟೂ ನಿಯಂತ್ರಿಸುತ್ತದೆ. ಏಕೆಂದರೆ ಉಳಿದ ಗಗನಯಾನಿಗಳ ಗಮನ ತಮ್ಮ ಕರ್ತವ್ಯವಲ್ಲದೆ ಬೇರೆ ಯಾವುದಕ್ಕೂ ಹೋಗಬಾರದು ಎಂಬ ಕಾರಣದಿಂದ. ಗಂಡು ಹೆಣ್ಣು ಅಂತರಿಕ್ಷದಲ್ಲಿ ಕೂಡಲು ನಿಜವಾದ ಸಮಸ್ಯೆ ಏನು? ಒಂದಲ್ಲ ಅನೇಕ ಸಮಸ್ಯೆಗಳಿವೆ. ಮೊದಲನೆಯದು ಚಿಕ್ಕ ಬಾತ್ ರೂಂ ಬಿಟ್ಟರೆ ಎಲ್ಲೂ ಪ್ರೈವಸಿ ಇಲ್ಲ. ನಾಸಾ ಸಂಸ್ಥೆ ಕಂಟ್ರೋಲ್ ಸ್ಟೇಷನ್ ನಿಂದಲೇ ಅಲ್ಲಿನ ಎಲ್ಲ ಚಟುವಟಿಕೆಗಳನ್ನೂ ದಿನದ 24 ಗಂಟೆಯೂ ಗಮನಿಸುತ್ತಿರುತ್ತದೆ. ಇದೂ ಮುಖ್ಯವಲ್ಲ. ವೈಜ್ಞಾನಿಕವಾಗಿಯೂ ಗಗನಯಾನಿಗಳು ಮೈಕ್ರೋ ಗ್ರಾವಿಟಿಯಲ್ಲಿ ಅನುಭವಿಸುವುದೇ ಬೇರೆ. ರಕ್ತದ ಹರಿವು ಆ ಸ್ಥಿತಿಯಲ್ಲಿ ಎಲ್ಲ ಭಾಗಗಳಲ್ಲೂ ಸಮನಾಗಿರುತ್ತದೆ. ವಿಶೇಷವಾಗಿ ಕೆಳಕ್ಕೆ ಹರಿಯುವುದಿಲ್ಲ. ಇದೆಲ್ಲಕ್ಕಿಂತಲೂ ಪುರುಷರಿಗೂ, ಮಹಿಳೆಯರಿಗೂ ಸಮನಾಗಿ ಹಾರ್ಮೋನ್ ಲೈಂಗಿಕ ಚಟುವಟಿಕೆಗಳಿಗೆ ಪ್ರೇರಕವಾಗಿರುವುದಿಲ್ಲ. ಇನ್ನೂ ಒಂದು ತಾಪತ್ರಯವಿದೆ. ಗಗನಯಾನಿಗಳು ಭೂಮಿಗಿಂತ ಮೂವತ್ತು ಪಟ್ಟು ಹೆಚ್ಚು ವಿಕಿರಣಕ್ಕೆ ಒಡ್ಡಿಕೊಂಡಿರುತ್ತಾರೆ. ಇದನ್ನು ನಿಭಾಯಿಸುವುದೇ ದೊಡ್ಡ ಸವಾಲು. ಒಂದುವೇಳೆ ಭ್ರೂಣಕ್ಕೆ ತಟ್ಟಿದರೆ ಕಥೆ ಮುಗಿದೇಹೋಯಿತು. ಭೂಮಿಗೆ ಬಂದಾಗ ಅಂಥ ಮಗು ಯಾವ ಬಗೆಯಲ್ಲಿ ವಿಕೃತವಾಗಿರುತ್ತದೋ ಆ ಬಗ್ಗೆ ಸಂಶೋಧನೆಯಾಗಿಲ್ಲ. ಏಕೆಂದರೆ ಗಗನಯಾನಿಗಳು ಸ್ಪೇಸ್ ವಾಕ್ ಮಾಡಬೇಕಾಗುತ್ತದೆ. ಆಗ ವಿಕಿರಣದ ಅಪಾಯ ಹೆಚ್ಚು. ಗಗನಯಾನಿಗಳು ವ್ಯಾಯಾಮ ಮಾಡುವಾಗ ಬೆವರು ಶರೀರದ ಹೊರಭಾಗದಲ್ಲಿ ಸ್ತರಗಟ್ಟುತ್ತದೆ. ಅದನ್ನು ನಿಭಾಯಿಸುವುದೇ ಕಷ್ಟ ಎಂದಮೇಲೆ ಲೈಂಗಿಕ ಚಟುವಟಿಕೆ ಇನ್ನೆಂಥ ಸಮಸ್ಯೆ ತರಬಹುದು.

ಸದ್ಯಕ್ಕೆ ವಿಜ್ಞಾನಿಗಳನ್ನು ಪ್ರಶ್ನಿಸುತ್ತಿರುವ ಖಾಸಗಿ ವ್ಯೋಮಸಂಸ್ಥೆಗಳು, ಹಾಗಾದರೆ ನಮ್ಮ ಬಿಸಿನೆಸ್ ಏನಾಗಬೇಕು ಎಂದು ಕೇಳುತ್ತಿವೆ. ಮಂಗಳಗ್ರಹಕ್ಕೆ ಕಾಯಂ ಆತಿ ಮನುಷ್ಯರನ್ನು ಕಳಿಸಿದರೆ ಅಲ್ಲಿ ಸಂತಾನ ವೃದ್ಧಿಯಾಗುವುದು ಹೇಗೆ? ಮುಂದೆ ಎದುರಾಗುವ ಸಮಸ್ಯೆಗಳಿಗೆ ವಿಜ್ಞಾನಿಗಳೇಕೆ ಈಗಿನಿಂದಲೇ ಸಂಶೋಧನೆ ಮಾಡುತ್ತಿಲ್ಲ ಎಂದು ಅಪಸ್ವರ ಎತ್ತಿವೆ. ಈಗ ಬಾಹ್ಯಾಕಾಶದಲ್ಲಿ ಸಂಶೋಧನೆಯನ್ನು ಕುರಿತು ಕೆಲಸ ಮಾಡುತ್ತಿರುವವರೆಲ್ಲ `ಹೌದು, ಇದೂ ಕೂಡ ಯೋಚಿಸಬೇಕಾದ ಪ್ರಶ್ನೆ’ ಎನ್ನುತ್ತಿದ್ದಾರೆ.

Leave a Reply