ಮಹಾತ್ವಾಕಾಂಕ್ಷೆಯ ಜಿಎಸ್ಟಿಗೆ ತಂತ್ರಜ್ಞಾನವೇ ಸಿದ್ಧವಾಗಿಲ್ಲವೇ?, ಸುಬ್ರಮಣಿಯಂ ಸ್ವಾಮಿಯವರಿಂದಲೇ ಹೊರಟಿತು ಟೀಕಾಸ್ತ್ರ

ಡಿಜಿಟಲ್ ಕನ್ನಡ ಟೀಮ್:

‘ಬಹುನಿರೀಕ್ಷಿತ ಜಿಎಸ್ಟಿ ಮಸೂದೆ ಜಾರಿಗೆ ಐಟಿ ಸಂಪರ್ಕ ಸಿದ್ಧವಾಗಿಲ್ಲ. ಹೀಗಾಗಿ ನೂತನ ತೆರಿಗೆ ಪದ್ಧತಿ ಜಾರಿಯನ್ನು ಸ್ವಲ್ಪ ಸಮಯ ಮುಂದೂಡಿ…’ ಇದು ಕೇಂದ್ರ ಹಣಕಾಸು ಸಚಿವರಿಗೆ ಭಾರತೀಯ ಕೈಗಾರಿಕಾ ಮಂಡಳಿ ಮಾಡಿಕೊಂಡಿರುವ ಮನವಿ.

ನಿನ್ನೆಯಷ್ಟೇ ಈ ಕುರಿತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿರುವ ಕೈಗಾರಿಕ ಮಂಡಳಿ ಅಸೋಚಾಮ್ ಹೇಳಿರುವುದಿಷ್ಟು…

‘ಸದ್ಯದ ವ್ಯವಸ್ಥೆಯಲ್ಲಿರುವ ತೆರಿಗೆ ನಿರ್ವಾಹಕರು ಸರಕು ಮತ್ತು ಸೇವಾ ತೆರಿಗೆ ಸಂಪರ್ಕ ಪೋರ್ಟಲ್ ವ್ಯವಸ್ಥೆಗೆ ಹೊಂದಿಕೊಂಡಿಲ್ಲ. ನೂತನ ತೆರಿಗೆ ವ್ಯವಸ್ಥೆಯ ನೊಂದಣಿ ಪ್ರಕ್ರಿಯೆ ಅವರಿಗೆ ಹೊಸದಾಗಿರುವುದರಿಂದ ಐಟಿ ಸಂಪರ್ಕ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧವಾಗಿಲ್ಲ. ಇದರಿಂದ ಜಿಎಸ್ಟಿ ಜಾರಿಗೆ ತರಲು ಐಟಿ ಮೂಲಸೌಕರ್ಯವನ್ನು ಸರಿಯಾದ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದರಿಂದ ಪ್ರಸ್ತುತ ತೆರಿಗೆ ವ್ಯವಸ್ಥೆಯಿಂದ ಜಿಎಸ್ಟಿಗೆ ಬದಲಾಗಲು ದೊಡ್ಡ ಸವಾಲು ಎದುರಾಗಲಿದೆ. ಜೂನ್ ತಿಂಗಳಾಂತ್ಯದ ವೇಳೆಗೆ ಸರಕು ಮತ್ತು ಸೇವಾ ತೆರಿಗೆ ಸಂಪರ್ಕದ ಆನ್ ಲೈನ್ ಅರ್ಜಿಯ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಜುಲೈ 1ರಿಂದ ಈ ಪದ್ಧತಿ ಜಾರಿ ಮಾಡುವುದು ಕಷ್ಟವಾಗಲಿದೆ. ಜುಲೈ 1ರಿಂದಲೇ ತೆರಿಗೆದಾರರು ಜಿಎಸ್ಟಿಯ ಅಗತ್ಯತೆ ಪೂರ್ಣಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಜಿಎಸ್ಟಿ ಜಾರಿಗೆ ಇನ್ನಷ್ಟು ಕಾಲಾವಕಾಶ ಬೇಕಿದೆ.’

ಇತ್ತ, ಅರುಣ್ ಜೇಟ್ಲಿ ನೇತೃತ್ವದ ಹಣಕಾಸು ಇಲಾಖೆಯ ಯಾವುದೇ ಹಿನ್ನಡೆಯನ್ನು ಖಂಡಿಸದೇ ಬಿಡಲೊಲ್ಲದ ಬಿಜೆಪಿ ನೇತಾರ ಸುಬ್ರಮಣಿಯನ್ ಸ್ವಾಮಿ ಈ ಬಗ್ಗೆ ಟ್ವಿಟ್ಟರ್ ನಲ್ಲಿ ತರಾಟೆಗೆ ಇಳಿದಿದ್ದಾರೆ. ‘ಜುಲೈ 1ರ ಅವಧಿ ಒಳಗೆ ಜಿಎಸ್ಟಿ ಅನುಷ್ಠಾನಕ್ಕೆ ತರಲು ವಿಫಲರಾದ ಜಿಎಸ್ಟಿಎನ್ (ಗೂಡ್ಸ್ ಆ್ಯಂಡ್ ಸರ್ವೀಸ್ ಟ್ಯಾಕ್ಸ್ ನೆಟ್ವರ್ಕ್) ಚೇರ್ಮನ್ ಅವರನ್ನು ವಜಾಗೊಳಿಸಬೇಕು’ ಎಂದಿದ್ದಾರೆ ಸ್ವಾಮಿ.

Leave a Reply