ಟಿಬೆಟ್ಟಿಗೆ ಚೀನಾ ಪ್ರಾಯೋಜಿತ ವೈಜ್ಞಾನಿಕ ಯಾತ್ರೆ, ಚೀನಿಯರ ಟಿಬೆಟ್ ಕೇಂದ್ರಿತ ಅಸ್ತ್ರಗಳು ಭಾರತವನ್ನು ಘಾಸಿಗೊಳಿಸುತ್ತಿರುವ ಪರಿ ಗೊತ್ತೇ?

   

  ಚೈತನ್ಯ ಹೆಗಡೆ

  ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ಭಾರತ ವಿರೋಧಿಸಿರುವುದು ಗೊತ್ತೇ ಇದೆ. ಇದೇ ಪ್ರಮುಖ ಕಾರಣಕ್ಕಾಗಿ ಚೀನಾದ ಒಂದು ಬೆಲ್ಟ್ ಒಂದು ರಸ್ತೆ ಯೋಜನೆಯಿಂದಲೂ ಭಾರತ ಹೊರಗಿದೆ.

  ಇದೀಗ ಚೀನಾವು ಕ್ವಿಂಗೈ-ಟಿಬೆಟ್ ತಪ್ಪಲಿಗೆ ವೈಜ್ಞಾನಿಕ ಯಾತ್ರೆಯೊಂದನ್ನು ಹಮ್ಮಿಕೊಂಡಿದೆ. ಇದು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರನ್ನು ಒಳಗೊಂಡಿರುತ್ತದೆ ಎಂಬುದೇ ಇಲ್ಲಿನ ಕೌತುಕದ ಅಂಶ. ಸಮುದ್ರ ಮಟ್ಟದಿಂದ 4000 ಅಡಿ ಮೇಲಿರುವ ಈ ಹಿಮಪರ್ವತದಲ್ಲಿ ನಿಂತು ಕಳೆದ 10 ವರ್ಷಗಳಲ್ಲಿ ವಾತಾವರಣ ಬದಲಾವಣೆಗೆ ಕಾರಣಗಳೇನೆಂದು ಹುಡುಕುವುದು ಉದ್ದೇಶವಂತೆ.

  ಇದು ಹಾಗೆ ಹೋಗಿ ಹೀಗೆ ಬರುವ ಸಂಶೋಧನಾ ಯಾತ್ರೆ ಅಲ್ಲ. ಹತ್ತು ವರ್ಷಗಳ ಕಾರ್ಯಸೂಚಿ ಇರಿಸಿಕೊಂಡು ಜಗತ್ತಿನ 100 ವಿಜ್ಞಾನಿಗಳನ್ನೊಳಗೊಂಡು ಕೈಗೊಳ್ಳುತ್ತಿರುವ ಮಹಾಕಾರ್ಯ.

  1970ರಲ್ಲಿ ಇಂಥ ಯಾತ್ರೆ ಕೈಗೊಂಡಿದ್ದ ಚೀನಾ ಈಗ ಎರಡನೇ ಅವತರಣಿಕೆಗೆ ಬಂದಿದೆ. ಈ ನಡೆಯಲ್ಲಿ ಜಾಗತಿಕವಾಗಿ ಟಿಬೆಟಿನಲ್ಲಿ ತನ್ನ ಧ್ವಜವನ್ನು ಅಲುಗಾಡದಂತೆ ಹೂಡುತ್ತಿರುವ ವಿದ್ಯಮಾನವಿದೆ. ಮುಖ್ಯವಾಗಿ, ಚೀನಾ ಚಿಬೆಟ್ ಅನ್ನು ಆಕ್ರಮಿಸಿಕೊಂಡಾಗ ಭಾರತಕ್ಕೆ ತಮ್ಮ ಅನುಯಾಯಿಗಳೊಂದಿಗೆ ಬಂದು ನೆಲೆಸಿರುವ ದಲೈ ಲಾಮಾರ ಕಾರಣದಿಂದ ಟಿಬೆಟ್ ಒಳಗೊಳಗೇ ಸಾಂಸ್ಕೃತಿಕ ಗುರುತೊಂದನ್ನು ಹಾಗೆಯೇ ಕಾಪಾಡಿಕೊಂಡಿದೆ. ಲಾಮಾ ನಂತರ ಭಾರತದಿಂದ ಅಂಥ ಬೆಸುಗೆಯ ಧ್ವನಿಗಳ್ಯಾವವೂ ಇರಬಾರದೆಂಬುದನ್ನು ಚೀನಾ ಬಯಸುತ್ತದೆ. ಹೀಗಾಗಿ ಟಿಬೆಟ್ ಕೇಂದ್ರಿತ ಚೀನಾ ನಡೆಗಳು ಒಟ್ಟಾರೆಯಾಗಿ ಜಾಗತಿಕ ಪ್ರಭಾವ ವಿಸ್ತರಿಸಿಕೊಳ್ಳುವ ವಿಸ್ತಾರ ವಿನ್ಯಾಸ ಹೊಂದಿರುವುದು ಹೌದಾದರೂ, ತಕ್ಷಣಕ್ಕೆ ಭಾರತದ ಸಾಫ್ಟ್ ಪವರ್ ಅನ್ನು ಇಲ್ಲವಾಗಿಸುವುದರತ್ತ ಇದರ ಪರಿಣಾಮಗಳಿವೆ. ಮೇಲೆ ಉಲ್ಲೇಖಿಸಿದ ಹೊಸ ನಡೆಗೂ ಮುನ್ನ ಅದು ಅನುಸರಿಸಿದ ಕೆಲವು ಕ್ರಮಗಳು ಇದಕ್ಕೆ ಪೂರಕವಾಗಿವೆ.

  • ನಳಂದಾ ಮಾದರಿಯ ತನ್ನದೇ ಬೌದ್ಧ ಕಲಿಕಾ ಕೇಂದ್ರವನ್ನು ಚೀನಾ ಇತ್ತೀಚೆಗೆ ಘೋಷಿಸಿದ್ದನ್ನು ಇಲ್ಲಿಯೇ ಓದಿರುತ್ತೀರಿ. ಈ ವಿದ್ಯಮಾನದಲ್ಲಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿನ ಕೋರ್ಸುಗಳಲ್ಲಿ ಟಿಬೆಟ್ ಬುದ್ಧಿಸಂ, ಪಾಳಿ, ಟಿಬೆಟ್ ಮತ್ತು ಚೀನಾ ಭಾಷೆಗಳಿಗೆ ಪ್ರಾಮುಖ್ಯ ನೀಡಿ ಸಂಸ್ಕೃತವನ್ನು ದೂರವಿಡಲಾಗಿದೆ. ಭಾರತದ ನೆರಳಿರದ ತನ್ನದೇ ವ್ಯಾಖ್ಯಾನದ ಬೌದ್ಧಮತದ ಮೂಲಕ ಟಿಬೆಟ್ ಹಾಗೂ ಏಷ್ಯಾದ ಬೌದ್ಧ ಧರ್ಮೀಯ ರಾಷ್ಟ್ರಗಳನ್ನು ಸೆಳೆದಿಡುವುದು ಇಲ್ಲಿನ ಉದ್ದೇಶ.
  • ಯಾವಾಗ ಭಾರತವು ತನ್ನ ಪಾರಂಪರಿಕ ಬೌದ್ಧ ವಾರಸುದಾರಿಕೆ ಶಕ್ತಿಯನ್ನು ಪ್ರದರ್ಶಿಸಿ ರಾಜತಾಂತ್ರಿಕ ಆಕರ್ಷಣೆ ಗಳಿಸಿಕೊಳ್ಳತೊಡಗಿತೋ, ಇದನ್ನು ನಿರಾಕರಿಸುವುದಕ್ಕೆ ಚೀನಾ ತನ್ನೆಲ್ಲ ತಂತ್ರಗಳನ್ನು ಹೆಣೆಯುತ್ತಿದೆ. ನೇಪಾಳವೀಗ ಚೀನಾ ಪ್ರಭಾವವನ್ನೇ ಹೊದ್ದುಕೊಂಡಿದೆ ಎಂಬುದರ ಬಗ್ಗೆ ಅನುಮಾನವಿಲ್ಲ ತಾನೇ? ಅದೀಗ ಬುದ್ಧನ ಜನ್ಮಸ್ಥಳ ಲುಂಬಿನಿಯನ್ನು ಪ್ರವಾಸಿಗರ ಆಕರ್ಷಣೆಯ ಬಿಂದುವಾಗಿಸುವುದಕ್ಕೆ ಎಲ್ಲ ಶ್ರಮ ವಹಿಸುತ್ತಿದೆ. ಚೀನಾ ಪ್ರಭಾವಿತ ಶ್ರೀಲಂಕಾವೂ ಇದಕ್ಕೆ ಕೈಜೋಡಿಸಿದೆ. ಬುದ್ಧ ಎಂದೊಡನೆ ಭಾರತದ ಬೋಧಗಯಾವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಏಕೆಂದರೆ ಜ್ಞಾನೋದಯ ಹೊಂದಿ ಬುದ್ಧನಾದದ್ದು ಇಲ್ಲಿಯೇ. ಆದರೆ ಕಾಲಾಂತರದಲ್ಲಿ ಇದನ್ನು ಮರೆಸಿ ಬುದ್ಧ ಹುಟ್ಟಿದ ನೇಪಾಳದ ಲುಂಬಿನಿಯನ್ನೇ ಜನಮಾನಸದಲ್ಲಿ ಅಚ್ಚಾಗಿಸಿ ಭಾರತದ ಸಾಂಸ್ಕೃತಿಕ ವಾರಸುದಾರಿಕೆಯನ್ನು ಮಸುಕಾಗಿಸುವ ಈ ಸಮರದಲ್ಲಿ ಎದುರಿಗೆ ಕಾಣುವುದು ನೇಪಾಳವಾದರೂ ಬೆನ್ನಿಗಿರೋದು ಚೀನಾ.

  ಪ್ರಾರಂಭದಲ್ಲಿ ಟಿಬೆಟ್ ವಶಪಡಿಸಿಕೊಂಡಾಗ ಅಲ್ಲಿನ ಎಲ್ಲ ಬೌದ್ಧ ಚಹರೆಗಳನ್ನು ಅಳಿಸುವುದಕ್ಕೆ ಯತ್ನಿಸಿ ಬೌದ್ಧ ಆಶ್ರಮಗಳನ್ನೆಲ್ಲ ಕೆಡವಿದ್ದು ಇದೇ ಚೀನಾ. ಭಾರತದಲ್ಲಿ ದಲೈ ಲಾಮಾ ಬೆಂಬಲಿಗರಿರುವಾಗ ಅಂಥ ಮಾರ್ಗದಲ್ಲಿ ಹತ್ತಿಕ್ಕುವುದು ತಿರುಗುಬಾಣವಾದೀತು ಎಂಬುದು ಅರಿವಿಗೆ ಬರುತ್ತಲೇ ಚೀನಾ ಪಥ ಬದಲಿಸಿ, ಇದೀಗ ತನ್ನದೇ ವ್ಯಾಖ್ಯಾನಗಳನ್ನು ಕಟ್ಟುವತ್ತ ಗಮನ ಕೇಂದ್ರೀಕರಿಸಿದೆ.

  ನಮ್ಮೆಲ್ಲರ ಕುತೂಹಲದ ಗಮನವನ್ನು ಬೇಡುತ್ತಿರುವ ಭಾರತ-ಚೀನಾ ಸಾಂಸ್ಕೃತಿಕ ಸಮರ ಇದು.

  Leave a Reply