ಎರಡು ವರ್ಷಗಳ ನಿಷೇಧದಿಂದ ಪಾರಾದ ಗಂಭೀರ್ ಗೆ ಸಿಕ್ತು ನಾಲ್ಕು ಪಂದ್ಯಗಳ ಅಮಾನತು ಶಿಕ್ಷೆ, ಇಷ್ಟೆಲ್ಲಾ ಆಗಿದ್ದೇಕೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಕ್ರಿಕೆಟಿಗ ಗೌತಮ್ ಗಂಭೀರ್ ಅವರಿಗೆ ನಾಲ್ಕು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಿಂದ ನಿಷೇಧದ ಆದೇಶ ನೀಡಲಾಗಿದೆ. ಗಂಭೀರ್ ಈ ಶಿಕ್ಷೆಗೆ ಗುರಿಯಾಗಲು ಕಾರಣ ಏನಂದ್ರೆ, ಕಳೆದ ಮಾರ್ಚ್ ತಿಂಗಳಲ್ಲಿ ಗಂಭೀರ್ ದೆಹಲಿ ರಣಜಿ ತಂಡದ ಕೋಚ್ ಕೆ.ಪಿ ಭಾಸ್ಕರ್ ಜತೆ ಜಗಳವಾಡಿ ಅವರನ್ನು ನಿಂದಿಸಿದಕ್ಕೆ.

ವಿಜಯ್ ಹಜಾರೆ ಟೂರ್ನಿಯ ಸಂದರ್ಭದಲ್ಲಿ ದೆಹಲಿ ತಂಡದ ನಾಯಕ ಗಂಭೀರ್ ಹಾಗೂ ಕೋಚ್ ಭಾಸ್ಕರ್ ಜತೆ ಮನಸ್ಥಾಪ ಉದ್ಭವಿಸಿತ್ತು. ದೆಹಲಿ ತಂಡ ಒಡಿಶಾದಲ್ಲಿರುವಾಗ ಗಂಭೀರ್ ಹಾಗೂ ಭಾಸ್ಕರ್ ನಡುವೆ ಜಗಳವಾಗಿತ್ತು. ಈ ಹಂತದಲ್ಲಿ ಭಾಸ್ಕರ್ ಅವರನ್ನು ಗಂಭೀರ್ ನಿಂದಿಸಿದ್ದರಲ್ಲದೇ, ಕೋಚ್ ತಂಡದಲ್ಲಿರುವ ಯುವ ಆಟಗಾರರ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದರು. ಈ ಪ್ರಕರಣದ ಕುರಿತಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ತನಿಖೆ ನಡೆಸಲು ವಿಶೇಷ ಸಮಿತಿಯನ್ನು ರಚಿಸಿತು. ಈ ತನಿಖಾ ಸಮಿತಿಯಲ್ಲಿ ನ್ಯಾ.ವಿಕ್ರಮ್ ಜಿತ್ ಸೇನ್, ಮದನ್ ಲಾಲ್, ರಾಜೇಂದ್ರ ರಾಥೋರ್ ಹಾಗೂ ಸೋನಿ ಸಿಂಗ್ ಸದಸ್ಯರಾಗಿದ್ದರು.

ಪ್ರಕರಣದ ತನಿಖೆ ನಡೆಸಿದ ತನಿಖಾ ಸಮಿತಿ ಕೋಚ್ ವಿರುದ್ಧ ಗಂಭೀರ್ ತೋರಿರುವ ವರ್ತನೆಯನ್ನು ಖಂಡಿಸಿದ್ದು, ಗಂಭೀರ್ ರನ್ನು ತಪ್ಪಿತಸ್ಥ ಎಂದು ನಿರ್ಧರಿಸಿತು. ಆರಂಭದಲ್ಲಿ ಗಂಭೀರ್ ಅವರಿಗೆ 2 ವರ್ಷಗಳ ಕಾಲ ನಿಷೇಧ ಹೇರುವ ತೀರ್ಮಾನ ಕೈಗೊಳ್ಳಲಾಗಿತ್ತಾದರೂ ನಂತರ ನ್ಯಾ.ವಿಕ್ರಮ್ ಜಿತ್ ಸೇನ್, ತಮ್ಮ ಶಿಕ್ಷೆಯ ಪ್ರಮಾಣ ಬದಲಿಸಿ, ನಾಲ್ಕು ಪಂದ್ಯಗಳ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದಾರೆ.

Leave a Reply