ಇಂಡೊನೇಷ್ಯಾ ಓಪನ್ ಗರಿ ಗೆದ್ದ ಕೆ.ಶ್ರೀಕಾಂತ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಪುರುಷ ಆಟಗಾರ

ಡಿಜಿಟಲ್ ಕನ್ನಡ ಟೀಮ್:

ದೇಶದ ಬಹುತೇಕ ಕ್ರೀಡಾಭಿಮಾನಿಗಳು ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಕಾದಾಟವನ್ನು ಆನಂದಿಸುತ್ತಿರುವಾಗಲೇ, ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಇಂಡೊನೇಷ್ಯಾ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕೆ.ಶ್ರೀಕಾಂತ್ 21-11, 21-19 ನೇರ ಗೇಮ್ ಗಳ ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು. ಆ ಮೂಲಕ ತಮ್ಮ ವೃತ್ತಿ ಜೀವನದ ಎರಡನೇ ಸೂಪರ್ ಸೀರೀಸ್ ಪ್ರಿಮಿಯರ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು.

ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಇದೇ ವರ್ಷ ಜನವರಿಯಲ್ಲಿ ಕಣಕ್ಕೆ ಮರಳಿದ್ದ ಕೆ.ಶ್ರೀಕಾಂತ್, ತಮ್ಮ ಲಯ ಕಂಡುಕೊಂಡಿದ್ದರು. ಈ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಕೊರಿಯಾದ ಸನ್ ವಾನ್ ಹೊ ವಿರುದ್ಧ 21-15, 18-21, 24-22 ಗೇಮ್ ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು.

ಚಾಂಪಿಯನ್ ಕೆ.ಶ್ರೀಕಾಂತ್ (ಬಲಗಡೆ), ರನ್ನರ್ ಅಪ್ ಆದ ಕಜುಮಸಾ (ಎಡಗಡೆ)

ಈ ಅಂತಿಮ ಪಂದ್ಯದಲ್ಲಿ ತಮ್ಮ ಎದುರಾಳಿ ಯುವ ಆಟಗಾರ ಕಜುಮಸಾ ಸಕಾಯ್ ವಿರುದ್ಧ ಪ್ರಭುತ್ವದ ಆಟ ಪ್ರದರ್ಶಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪಂದ್ಯದ ಆರಂಭದಿಂದಲೇ ಎದುರಾಳಿ ವಿರುದ್ಧ ಬಿಗಿ ಹಿಡಿತ ಸಾಧಿಸಿದ ಶ್ರೀಕಾಂತ್ ಮೊದಲ ಸೆಟ್ ಅನ್ನು 21-11 ಅತರದಲ್ಲಿ ಸುಲಭವಾಗಿ ಗೆದ್ದುಕೊಂಡರು. ಆದರೆ, ಎರಡನೇ ಗೇಮ್ ನಲ್ಲಿ ಶ್ರೀಕಾಂತ್, ಕಜುಮಸ ಅವರಿಂದ ತೀವ್ರ ಪೈಪೋಟಿ ಎದುರಿಸಿದರು. ಒಂದು ಹಂತದಲ್ಲಿ 4-9 ಅಂತರದ ಹಿನ್ನಡೆಯಲ್ಲಿದ್ದರು ಶ್ರೀಕಾಂತ್. ಈ ಹಂತದಲ್ಲಿ ಒತ್ತಡಕ್ಕೆ ಸಿಲುಕದೇ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಶ್ರೀಕಾಂತ್ ತಮ್ಮ ಅಂತರವನ್ನು 12-13ಕ್ಕೆ ತಂದು ನಿಲ್ಲಿಸಿದರು. ನಂತರ ಪಂದ್ಯದ ಅಂತಿಮ ಹಂತದವರೆಗೂ ಈ ಇಬ್ಬರ ನಡುವೆ ಸಮಬಲದ ಹೋರಾಟ ಏರ್ಪಟ್ಟಿತು. ಒಂದು ಹಂತದಲ್ಲಿ ಈ ಇಬ್ಬರು ಆಟಗಾರರ ನಡುವೆ 19-19ರ ಸಮಬಲ ಏರ್ಪಟ್ಟಾಗ ಶ್ರೀಕಾಂತ್ ಸತತ ಎರಡು ಅಂಕ ಪಡೆದುಕೊಂಡು ಪಂದ್ಯದಲ್ಲಿ ಜಯ ಸಾಧಿಸಿದರು.

Leave a Reply