ಮರಗಳನ್ನು ಬೆಳೆಸುವುದಕ್ಕೆ ಕಟ್ಟಡಗಳೇ ನೆಲಸಮ… ಈ ಸತ್ಕಾರ್ಯ ನಡೆಯುತ್ತಿರೋದು ಎಲ್ಲಿ ಗೊತ್ತಾ?

ಕಟ್ಟಡ ನೆಲಸಮ… ಮರಗಳು ಬೆಳೆದ ನಂತರ ಹೇಗಿರಬಹುದೆಂಬುದರ ಕಲ್ಪನಾಚಿತ್ರ

ಡಿಜಿಟಲ್ ಕನ್ನಡ ಟೀಮ್:

ವಿಶ್ವದ ಏಳನೇ ಮಾಲಿನ್ಯ ನಗರ ಎಂಬ ಕಳಂಕ ಹೊತ್ತಿರುವ ನಗರ ಛತ್ತೀಸಗಢದ ರಾಯ್ ಪುರ. ಈಗ ಈ ಕಳಂಕವನ್ನು ತೊಳೆದುಕೊಳ್ಳಲು ಹಲವು ಪ್ರಯತ್ನ ನಡೆಯುತ್ತಿವೆ. ಆ ಪೈಕಿ ಒಂದು ಕಾರ್ಯ ನಿಜಕ್ಕೂ ನಿಮ್ಮೆಲ್ಲರ ಗಮನ ಸೆಳೆಯಲಿದೆ. ಅದೇನೆಂದರೆ, ಆಕ್ಸಿ ಜೋನ್ ಎಂಬ ಪರಿಕಲ್ಪನೆಯಲ್ಲಿ ನಗರದ ಹೃದಯ ಭಾಗದಲ್ಲಿ ಕೃತಕ ಅರಣ್ಯ ನಿರ್ಮಾಣ ಮಾಡುವುದು. ಈ ಕೃತಕ ಅರಣ್ಯ ನಿರ್ಮಾಣಕ್ಕಾಗಿ ಇಲ್ಲಿನ ಸರ್ಕಾರಿ ಕಟ್ಟಡಗಳನ್ನೇ ನೆಲಸಮ ಮಾಡಲಾಗುತ್ತಿದೆ.

ಹೌದು, ನಂಬಲು ಸ್ವಲ್ಪ ಕಷ್ಟ ಎನಿಸಿದರು ಇದು ನಿಜ. ಮಾಲಿನ್ಯ ತಡೆ, ಪರಿಸರ ರಕ್ಷಣೆಯಂತಹ ವಿಷಯಗಳು ಪದೇ ಪದೇ ಪ್ರತಿಧ್ವನಿಸುತ್ತಿರುವ ಸಂದರ್ಭದಲ್ಲಿ ರಾಯ್ ಪುರದಲ್ಲಿ ನಡೆಸಲಾಗುತ್ತಿರುವ ಈ ಕಾರ್ಯ ಸಾಕಷ್ಟು ಗಮನ ಸೆಳೆದಿದೆ. ಹಾಗಾದರೆ ರಾಯ್ ಪುರದಲ್ಲಿ ಪರಿಸರ ಕಾಳಜಿಯ ಕುರಿತಾಗಿ ನಡೆಯುತ್ತಿರುವ ಮಹತ್ಕಾರ್ಯ ಏನು? ನೋಡೋಣ ಬನ್ನಿ…

ಆಕ್ಸಿ ಜೋನ್ ಎಂಬ ಪರಿಕಲ್ಪನೆಯೊಂದಿಗೆ ರಾಯ್ ಪುರ ನಗರದ ಹೃದಯ ಭಾಗದಲ್ಲಿ 19 ಎಕರೆ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ನ್ಯೂಯಾರ್ಕ್ ನಲ್ಲಿರುವ ಸೆಂಟ್ರಲ್ ಪಾರ್ಕ್ ಮಾದರಿಯಲ್ಲೇ ಈ ಆಕ್ಸಿ ಜೋನ್ ಕೃತಕ ಅರಣ್ಯ ನಿರ್ಮಾಣ ಯೋಜನೆ ನಡೆಯುತ್ತಿದೆ. ಸ್ಥಳಿಯ ಜನರ ಈ ಆಶಯವನ್ನು ಸಾಕಾರಗೊಳಿಸುವ ಪಣ ತೊಟ್ಟಿರುವವರು ಇಲ್ಲಿನ ಜಿಲ್ಲಾಧಿಕಾರಿ ಓಂಪ್ರಕಾಶ್ ಚೌಧರಿ. ಜನರ ಆಸೆಯನ್ನು ಚೌಧರಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಅಲ್ಲದೆ ಇದರ ಮಹತ್ವವನ್ನು ವಿವರಿಸಿದರು. ಆ ಮೂಲಕ ಈ ಒಂದು ಉತ್ತಮ ಕಾರ್ಯಕ್ಕೆ ಸರ್ಕಾರದಿಂದಲೂ ಗ್ರೀನ್ ಸಿಗ್ನಲ್ ಪಡೆಯುವಲ್ಲಿ ಯಶಸ್ವಿಯಾದರು. ಸರ್ಕಾರದಿಂದ ಒಪ್ಪಿಗೆ ಸಿಗುತ್ತಿದ್ದಂತೆ ರಾಯ್ ಪುರದ ಮಧ್ಯಭಾಗದಲ್ಲಿ 19 ಎಕರೆ ವಿಸ್ತೀರ್ಣದಲ್ಲಿ ಈ ಆಕ್ಸಿ ಜೋನ್ ನಿರ್ಮಾಣ ಕಾರ್ಯ ಆರಂಭವಾಗಿದೆ. ನಗರದ ಹೃದಯಭಾಗದಲ್ಲಿರುವ ಈ ಪ್ರದೇಶದಲ್ಲಿ ಸುಮಾರು 70ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳಿವೆ. ಆ ಪೈಕಿ ಶೇ.95 ರಷ್ಟು ಕಟ್ಟಡಗಳು ಹಳೆಯದಾದರೆ, ಉಳಿದ ಶೇ.5 ರಷ್ಟು ಕಟ್ಟಡಗಳು ಮಾತ್ರ ಹೊಸ ಕಟ್ಟಡಗಳಾಗಿವೆ. ಹೀಗಾಗಿ ಹಳೆಯ ಕಟ್ಟಡಗಳನ್ನು ನೆಲಸಮ ಮಾಡಿ ಇಲ್ಲಿ ಕೃತಕ ಅರಣ್ಯ ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಹೊಸ ಕಟ್ಟಡಗಳನ್ನು ಹಾಗೇ ಉಳಿಸಿಕೊಂಡು ಅವುಗಳನ್ನು ವಸ್ತು ಸಂಗ್ರಹಾಲಯ ಹಾಗೂ ಸಾಂಸ್ಕೃತಿಕ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡುವ ಉದ್ದೇಶ ಹೊಂದಲಾಗಿದೆ. ಇನ್ನು ಈ ಪ್ರದೇಶದಲ್ಲಿನ ಕೊಳೆಗೇರಿ ಪ್ರದೇಶದಲ್ಲಿ ನೆಲೆಸಿದ್ದ 80ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಬೇರೆಡೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

ಮುಂದಿನ 10 ತಿಂಗಳಲ್ಲಿ ಈ ಆಕ್ಸಿ ಜೋನ್ ಯೋಜನೆ ಪೂರ್ಣಗೊಳ್ಳಲಿದ್ದು, ನಂತರ ಈ ಪ್ರದೇಶದಲ್ಲಿ ಸಾರ್ವಜನಿರಿಗೆ ವಾಕಿಂಗ್, ಜಾಗಿಂಗ್, ಧ್ಯಾನ ಹಾಗೂ ಯೋಗ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಇವುಗಳ ಜತೆಗೆ ನಗರದ ಕೊಳಚೆ ನೀರಿನಿಂದ ಹದಗೆಟ್ಟಿರುವ 28 ಕೆರೆ ಕಟ್ಟೆಗಳಿಗೆ ಮತ್ತೆ ಜೀವ ತುಂಬುವ ಪ್ರಯತ್ನ ನಡೆಯುತ್ತಿವೆ.

1000 ಕೋಟಿ ಬೆಲೆ ಬಾಳುವ ಈ ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದರೆ ಲಕ್ಷಾಂತರ ರುಪಾಯಿ ಆದಾಯ ಬರುತ್ತಿತ್ತು. ಆದರೆ ಈ ಆರ್ಥಿಕ ಲಾಭವನ್ನು ಲೆಕ್ಕಿಸದೇ ಅಲ್ಲಿನ ಸರ್ಕಾರ ಆಕ್ಸಿ ಜೋನ್ ನಂತಹ ಸತ್ಕಾರ್ಯಕ್ಕೆ ಮುಂದಾಗಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ಇತರೆ ನಗರಗಳಿಗೂ ಮಾದರಿಯಾಗಿದೆ.

1 COMMENT

Leave a Reply