ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿ: ಪಾಕಿಸ್ತಾನವನ್ನು 7-1 ಗೋಲುಗಳಿಂದ ಬಗ್ಗು ಬಡಿದ ಭಾರತ

ಡಿಜಿಟಲ್ ಕನ್ನಡ ಟೀಮ್:

ಪ್ರತಿಷ್ಠಿತ ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಹಂತದ ಟೂರ್ನಿಯಲ್ಲಿ ಭಾರತ ಹಾಕಿ ತಂಡ ಪಾಕಿಸ್ತಾನವನ್ನು ಭರ್ಜರಿಯಾಗಿ ಮಣಿಸಿದೆ.

ಒಂದೆಡೆ ದ ಓವಲ್ ಮೈದಾನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಸಮರ ನಡೆಯುತ್ತಿದ್ದರೆ, ಇತ್ತ ಲಂಡನ್ ನಲ್ಲೇ ಭಾರತ ಹಾಗೂ ಪಾಕಿಸ್ತಾನ ಹಾಕಿ ತಂಡಗಳು ವಿಶ್ವ ಹಾಕಿ ಲೀಗ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಹಂತದ ಟೂರ್ನಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೇಲೆ ಸವಾರಿ ಮಾಡಿದ ಭಾರತ ಹಾಕಿ ಆಟಗಾರರು 7-1 ಗೋಲುಗಳ ಅಂತರದಲ್ಲಿ ಬೃಹತ್ ಗೆಲವು ದಾಖಲಿಸಿದರು.

ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ (12, 32ನೇ ನಿಮಿಷ) ತಲ್ವೀಂದರ್ ಸಿಂಗ್ (21, 24ನೇ ನಿಮಿಷ), ಆಕಾಶ್ ದೀಪ್ ಸಿಂಗ್ (46, 58ನೇ ನಿಮಿಷ), ಪ್ರದೀಪ್ ಮೋರ್ (48ನೇ ನಿಮಿಷ) ಆಕರ್ಷಕ ಗೋಲು ದಾಖಲಿಸಿದರೆ, ಪಾಕಿಸ್ತಾನದ ಪರ ಅಂತಿಮ ಹಂತದಲ್ಲಿ ಉಮರ್ ಬಟ್ (56ನೇ ನಿಮಿಷ) ಏಕೈಕ ಗೋಲು ದಾಖಲಿಸಿದರು.

 ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪಂದ್ಯದ 2ನೇ ನಿಮಿಷದಲ್ಲೇ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ ಆ ಅವಕಾಶದಲ್ಲಿ ಗೋಲು ದಾಖಲಿಲ್ಲ. ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನ ಸಂಘಟಿತ ದಾಳಿಗೆ ಮುಂದಾಯಿತು. ಪರಿಣಾಮ 9ನೇ ನಿಮಿಷದಲ್ಲಿ ಪಾಕಿಸ್ತಾನಕ್ಕೆ ಮೊದಲ ಪೆನಾಲ್ಟಿ ಅವಕಾಶ ಸಿಕ್ಕಿತು. ಆದರೆ ಪಾಕ್ ಆಟಗಾರ ಬಿಲಾಲ್, ಈ ಅವಕಾಶವನ್ನು ಕೈ ಚೆಲ್ಲಿದರು. 13ನೇ ನಿಮಿಷದಲ್ಲಿ ಭಾರತಕ್ಕೆ ವರವಾಗಿ ಮತ್ತೊಂದು ಪೆನಾಲ್ಟಿ ಅವಕಾಶ ಲಭಿಸಿತು. ಈ ಅವಕಾಶದಲ್ಲಿ ತಂಡದ ಆಟಗಾರ ಹರ್ಮನ್ ಪ್ರೀತ್ ಸಿಂಗ್ ಗೋಲು ದಾಖಲಿಸಿ ತಂಡದ ಖಾತೆ ತೆರೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಭಾರತ ಮೊದಲ ಕ್ವಾಟರ್ ನಲ್ಲಿ 1-0 ಮುನ್ನಡೆ ಪಡೆಯಿತು.

ಇನ್ನು ಪಂದ್ಯದ ಎರಡನೇ ಕ್ವಾರ್ಟರ್ ನಲ್ಲೂ ಪಾಕಿಸ್ತಾನಕ್ಕೆ ಪೆನಾಲ್ಟಿ ಅವಕಾಶ ಸಿಕ್ಕತಾದರೂ ಅದನ್ನು ಬಳಸಿಕೊಳಅಳಲು ವಿಫಲವಾಯಿತು. ಈ ಹಂತದಲ್ಲಿ ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿತು. ಪರಿಣಾಮ 21ನೇ ನಿಮಿಷದಲ್ಲಿ ಸರ್ದಾರ್ ಅವರಿಂದ ಪಾಸ್ ಪಡೆದ ಚೆಂಡನ್ನು ತಲ್ವೀಂದರ್ ಸಿಂಗ್ ಗೋಲು ಪೆಟ್ಟಿಗೆಯೊಳಗೆ ಸೇರಿಸಿದರು. ಇದಾದ ಮೂರೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಅವಕಾಶ ಬಳಸಿಕೊಂಡ ತಲ್ವಿಂದರ್ ತನ್ನ ಎರಡನೇ ಗೋಲು ಬಾರಿಸಿ ತಂಡದ ಅಂತರವನ್ನು 3-0ಕ್ಕೆ ವಿಸ್ತರಿಸಿದರು. ಅದರೊಂದಿಗೆ ಪಂದ್ಯದ ಮೊದಲಾರ್ಧದ ವೇಳೆಗೆ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಿತು.

ಪಂದ್ಯದ ದ್ವಿತಿಯಾರ್ಧದಲ್ಲೂ ಹೆಚ್ಚಾಗಿ ಕಂಡಿದ್ದು ಭಾರತೀಯ ಆಟಗಾರರ ಪ್ರಾಬಲ್ಯ. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಗೋಲು ದಾಖಲಿಸಿದರು. ಇನ್ನು ಪಂದ್ಯದ ಅಂತಿಮ ಕ್ವಾರ್ಟರ್ 46ನೇ ನಿಮಿಷದಿಂದ 60ನೇ ನಿಮಿಷದವರೆಗೂ ಭಾರತದ ಆಟಗಾರರು ಆಕ್ರಮಣಕಾರಿ ದಾಳಿ ನಡೆಸಿದರು. ಈ ಅವಧಿಯಲ್ಲಿ 46ನೇ ನಿಮಿಷದಲ್ಲಿ ಸರ್ದಾರ್ ಸಿಂಗ್ ಅವರಿಂದ ಪಾಸ್ ಪಡೆದ ಚೆಂಡನ್ನು ಆಕಾಶ್ ದೀಪ್ ಸಿಂಗ್ ಗೋಲು ಗಳಿಸಿದರು. 48ನೇ ನಿಮಿಷದಲ್ಲಿ ಪ್ರದೀಪ್ ಮೋರ್ ಗೋಲು ದಾಖಲಿಸಿ ತಂಡದ ಅಂತರವನ್ನು 6-0 ಅಂತರಕ್ಕೆ ಹೆಚ್ಚಿಸಿದರು. ಪಂದ್ಯದ 56ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಂಡ ಪಾಕಿಸ್ತಾನದ ಉಮರ್ ಬಟ್ ಗೋಲು ದಾಖಲಿಸಿ ಪಾಕಿಸ್ತಾನ ತಂಡದ ಮಾನ ಉಳಿಸಿದರು. ಇದಾದ ಎರಡೇ ನಿಮಿಷದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಆಕಾಶ್ ದೀಪ್ ಸಿಂಗ್ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

Leave a Reply