ನಿರೀಕ್ಷೆಯಂತೆ ದಲಿತ ಕಾರ್ಡ್ ಪ್ರಯೋಗಿಸಿದ ಬಿಜೆಪಿ, ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಹಾರ ರಾಜ್ಯಪಾಲ ರಾಮ್ ನಾಥ್ ಕೊವಿಂದ್ ಆಯ್ಕೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜತೆ ರಾಮ್ ನಾಥ್ ಕೊವಿಂದ್ (ಸಂಗ್ರಹ ಚಿತ್ರ)

ಡಿಜಿಟಲ್ ಕನ್ನಡ ಟೀಮ್:

ನಿರೀಕ್ಷೆಯಂತೆ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬಣದಿಂದ ದಲಿತ ಕಾರ್ಡ್ ಪ್ರಯೋಗವಾಗಿದೆ. ಇಂದು ನಡೆದ ಪಕ್ಷದ ಸಂಸದರು ಹಾಗೂ ಶಾಸಕರ ಸಭೆಯ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎನ್ಡಿಎ ಪರ ರಾಷ್ಟ್ರಪತಿ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ‘ಬಿಹಾರದ ರಾಜ್ಯಪಾಲರಾಗಿರುವ ರಾಮ್ ನಾಥ್ ಕೊವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಹಿಂದೆಯೇ ಬಿಜೆಪಿ ರಾಷ್ಟ್ರಪತಿ ಚುನಾವಣೆಯಲ್ಲಿ ದಲಿತ ಹಾಗೂ ಹಿಂದುಳಿದ ಕಾರ್ಡ್ ಪ್ರಯೋಗಿಸುವ ಬಗ್ಗೆ ಡಿಜಿಟಲ್ ಕನ್ನಡ ವಿಶ್ಲೇಷಣಾತ್ಮಕ ವರದಿಯನ್ನು ಪ್ರಕಟಿಸಿತ್ತು. ಈ ಹಿಂದೆ ದಲಿತ ಹಾಗೂ ಹಿಂದುಳಿದAmit Shah ಅಭ್ಯರ್ಥಿಗಳ ಪೈಕಿ ಒಡಿಶಾದ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಹಾಗೂ ಜಾರ್ಖಂಡ್ ನ ಮಾಜಿ ಉಪ ಸಭಾಪತಿ ಬುಡಕಟ್ಟು ನಾಯಕ ಕರಿಯಾ ಮುಂಡಾ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಈ ಇಬ್ಬರ ಹೊರತಾಗಿ ಬಿಜೆಪಿಯು ದಲಿತರ ಪ್ರತಿನಿಧಿಯಾಗಿರುವ ಮತ್ತೊಬ್ಬ ನಾಯಕ ರಾಮ್ ನಾಥ್ ಕೊವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ರಾಮ್ ನಾಥ್ ಕೊವಿಂದ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಪ್ರಕಟಿಸಿದ ಅಮಿತ್ ಶಾ ಹೇಳಿದಿಷ್ಟು… ‘ಎನ್ಡಿಎನಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಹಾರದ ರಾಜ್ಯಪಾಲರಾದ ರಾಮ್ ನಾಥ್ ಕೊವಿಂದ್ ಅವರನ್ನು ಆಯ್ಕೆ ಮಾಡಲಾಗಿದೆ. ನಮ್ಮ ನಿರ್ಧಾರದ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಮ್ ನಾಥ್ ಕೊವಿಂದ್ ಅವರು ದಲಿತರ ಹಾಗೂ ಹಿಂದುಳಿದವರ ಏಳಿಗೆಗಾಗಿ ಹೋರಾಟ ನಡೆಸಿದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಉಪರಾಷ್ಟ್ರಪತಿ ಹುದ್ದೆಗೆ ಇನ್ನು ಅಭ್ಯರ್ಥಿಯನ್ನು ನಿರ್ಧರಿಸಿಲ್ಲ.’

ಈ ರಾಮ್ ನಾಥ್ ಕೊವಿಂದ್ ಯಾರು? ಅವರ ಹಿನ್ನೆಲೆ ಏನು ಎಂಬುದನ್ನು ನೋಡುವುದಾದರೆ…

1945ರ ಅಕ್ಟೋಬರ್ 1ರಂದು ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದೆಹತ್ ಎಂಬ ಪ್ರದೇಶದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ರಾಮ್ ನಾಥ್ ಕೊವಿಂದ್, ಕಾನ್ಪುರ ವಿಶ್ವವಿದ್ಯಾಲಯದಿಂದ ಬಿಕಾಂ ಹಾಗೂ ಎಲ್ಎಲ್ ಬಿ ಪದವಿಯನ್ನು ಪಡೆದರು. ನಂತರ 1977 ರಿಂದ 1979ರವರೆಗೂ ದೆಹಲಿ ಹೈಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿದ್ದರು. 1980ರಿಂದ 1993ರವರೆಗೆ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರದ ಪರ ಪ್ರತಿನಿಧಿಯಾಗಿದ್ದರು. ಕೊವಿಂದ್ ಅವರು ಸುಮಾರು 16 ವರ್ಷಗಳ ಕಾಲ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. 1994ರಿಂದ ಸತತ ಎರಡು ಬಾರಿಗೆ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲಾಯಿತು.

ಇದರ ಜತೆಗೆ 1998ರಿಂದ 2002ರವರೆಗೆ ಬಿಜೆಪಿ ದಲಿತ ಮೋರ್ಚಾದ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದ ಕೊವಿಂದ್ ಅವರನ್ನು 2015ರ ಆಗಸ್ಟ್ 8ರಂದು ಬಿಹಾರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು.

ಈಗ ಇವರನ್ನು ಎನ್ಡಿಎ ಮಿತ್ರಕೂಟದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಇವರು ಜೂನ್ 23ರಂದು ತಮ್ಮ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿವೆ. ಇನ್ನು ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಜೂನ್ 22ರಂದು ಸಭೆ ನಡೆಸಲಿವೆ.

Leave a Reply