ಬೋರಲು ಬಿದ್ದ ಉಗ್ರಪ್ಪ ಸಮಯ ಸಾಧಕತನ!

ಸಮಯ ಸಾಧಕರು ಎಲ್ಲ ಸಂದರ್ಭದಲ್ಲೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅದೃಷ್ಟ ನೆಟ್ಟಗಿದ್ದು ಎಲ್ಲೋ ಒಂದೆರಡು ಪ್ರಯತ್ನ ಯಶಸ್ವಿ ಆದಾಕ್ಷಣ ಅದೇ ಅನವರತ ಎಂದು ಭ್ರಮಿಸುವಂತಿಲ್ಲ. ಯಾಕೆಂದರೆ ಸಮಯ ಸಾಧಕರು ತಮ್ಮ ನವರಂಗಿ ಆಟಗಳಿಂದ ಬಹುಬೇಗ ಗುರುತಿಸಲ್ಪಡುತ್ತಾರೆ ಹಾಗೂ ಮತ್ತೊಬ್ಬರ ನಿಗಾಕ್ಕೂ ವಸ್ತುವಾಗಿರುತ್ತಾರೆ. ಅನ್ಯರು ತಮ್ಮ ಬಗ್ಗೆ ಸದಾ ಕಟ್ಟೆಚ್ಚರದಿಂದ ಇರುವಂತೆ ವರ್ತಿಸುತ್ತಾರೆ. ಆದರೆ ಅವರು ತಮ್ಮ ಬಗ್ಗೆ ಜಾಗೃತರಾಗಿದ್ದಾರೆ ಎಂದು ಅರಿಯುವಲ್ಲಿ ವಿಫಲರಾಗಿರುತ್ತಾರೆ. ಆ ಮಟ್ಟಿಗಿನ ಭ್ರಮೆ ಅವರನ್ನು ಆವರಿಸಿರುತ್ತದೆ. ಆ ಭ್ರಮೆ ಕಳಚುವಷ್ಟರಲ್ಲಿ ಆಗಬಾರದ ಅನಾಹುತ ಆಗಿಹೋಗಿ, ಮಕಾಡೆ ಮಲಗಿರುತ್ತಾರೆ.

ಇನ್ನೆರಡು ತಿಂಗಳಲ್ಲಿ ನಿವೃತ್ತರಾಗಿ ಅವರ ಪಾಡಿಗೆ ಅವರು ಮನೆಗೆ ಹೋಗಲಿದ್ದ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರಿಗೆ ‘ಆತುರದ ಬೀಳ್ಕೊಡುಗೆ’ ಕೊಡಲು ಹೋಗಿ ಬೋರಲು ಬಿದ್ದಿರುವ ಕಾಂಗ್ರೆಸ್ ತಂತ್ರಗಾರಿಕೆ ಚಿತಾವಣೆಯ ಪ್ರೇರಕ ಮೂರ್ತಿ ವಿ.ಎಸ್.ಉಗ್ರಪ್ಪ ನವರ ಪರಿಸ್ಥಿತಿ ಕೂಡ ಹೀಗೆ ಆಗಿದೆ. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಸೋಲುಂಡ ಪ್ರಹಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಮಿದುಳು’ ಪಾತ್ರ ವಹಿಸಿದ್ದ ಉಗ್ರಪ್ಪನವರು ಕಾಂಗ್ರೆಸ್ ಮರ್ಯಾದೆ ಹರಾಜು ಹಾಕಿದ ಆರೋಪಕ್ಕೆ ಗುರಿಯಾಗಿ ಇದೀಗ ಸ್ವಪಕ್ಷೀಯರಿಂದಲೇ ಹಿಗ್ಗಾಮುಗ್ಗಾ ತರಾಟೆಗೆ ಗುರಿಯಾಗಿದ್ದಾರೆ. ಅಲ್ಲದೇ ಹತ್ತಕ್ಕೂ ಹೆಚ್ಚು ಶಾಸಕರು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರಿಗೆ ದೂರನ್ನೂ ಕೊಟ್ಟಿದ್ದಾರೆ.

ಇಲ್ಲೊಂದು ವಿಚಿತ್ರವಿದೆ. ಸಭಾಪತಿ ಪದಚ್ಯುತಿ ನಿರ್ಣಯದಂಥ ಮಹತ್ವದ ನಿರ್ಣಯ ಕೈಗೊಳ್ಳುವಾಗ ಮುಖ್ಯಮಂತ್ರಿಯವರ ಅಭಿಮತವೇ ಅಂತಿಮ. ಅವರ ಹುಕುಂ ಇಲ್ಲದೆ ಅವಿಶ್ವಾಸ ನಿರ್ಣಯ ಮಂಡಿಸಲು ಸಾಧ್ಯವಿಲ್ಲ. ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸೋಲುಂಡ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಯಾರೊಬ್ಬರೂ ಸಿದ್ದರಾಮಯ್ಯನವರ ಕಡೆ ಬೆರಳು ಮಾಡುತ್ತಿಲ್ಲ. ಯಾರೊಬ್ಬರೂ ಅವರನ್ನು ನಿಂದಿಸುತ್ತಿಲ್ಲ. ಇಂಥ ನಿರ್ಣಯಕ್ಕೆ ಯಾಕೆ ಅವಕಾಶ ಮಾಡಿಕೊಟ್ಟಿರಿ ಎಂದೂ ಪ್ರಶ್ನಿಸುತ್ತಿಲ್ಲ. ಬದಲಿಗೆ ಅವರೆಲ್ಲರ ಸಿಟ್ಟು, ಸೆಡವು ಉಗ್ರಪ್ಪನವರತ್ತ. ಕಾರಣ ಸಿದ್ದರಾಮಯ್ಯನವರ ಸುತ್ತ ಕೋಟೆ ಕಟ್ಟಿ, ‘ಚಿಂತಕರ’ ಹೆಸರಿನಲ್ಲಿ ಅದರ ಕಾವಲಿಗೆ ನಿಂತಿರುವ ಉಗ್ರಪ್ಪನವರು ತಮ್ಮ ಕೈಗೆ ಸಿಎಂ ಸಿಗದಂತೆ ಮಾಡಿದ್ದಾರೆ, ತಮ್ಮ ವಿಚಾರಗಳು, ಅಹವಾಲುಗಳು ಅವರನ್ನು ತಲುಪದಂತೆ ಅಡ್ಡಗಾಲಾಗಿದ್ದಾರೆ ಎಂಬ ಆಕ್ರೋಶ ಅವರದು. ಹೀಗಾಗಿ ಸಭಾಪತಿ ವಿರುದ್ಧದ ನಿರ್ಣಯ ಮಕಾಡೆ ಮಲಗಿದ್ದನ್ನೇ ನೆಪ ಮಾಡಿಕೊಂಡ ‘ಸಮಾನಪೀಡಿತ’ರೆಲ್ಲ ಉಗ್ರಪ್ಪನವರ ವಿರುದ್ಧ ಒಂದಾಗಿ, ಹೊಟ್ಟೆಯೊಳಗೆ ಮಡುಗಟ್ಟಿದ್ದ ಆಕ್ರೋಶವನ್ನೆಲ್ಲ ಯದ್ವಾ-ತದ್ವಾ ಕಕ್ಕುತ್ತಿದ್ದಾರೆ.

ನಿಜ, ಸಿದ್ದರಾಮಯ್ಯನವರ ಸುತ್ತ ಚಿಂತಕರ ವರ್ತುಲವಿದೆ. ಅದು ಯಾವತ್ತಿಗೂ ಪಕ್ಷದ ಇತರ ನಾಯಕರು ಮತ್ತು ಸಿದ್ದರಾಮಯ್ಯನವರ ನಡುವೆ ಕಂದಕವಾಗಿಯೇ ಕೆಲಸ ಮಾಡುತ್ತಿರುತ್ತದೆ. ಬೇರೆಯವರು ಸಿಎಂ ಸಾಮೀಪ್ಯ ಸಂಪಾದಿಸಿದರೆ, ಸಿಎಂ ಮುಂದೆ ತಮ್ಮ ಜ್ಞಾನ ಸುರಿದರೆ, ಸಿಎಂ ಏನಾದರೂ ಅವರ ಮಾತು ಕೇಳಿಬಿಟ್ಟರೆ ತಮಗೆ ಕವಡೆ ಕಿಮ್ಮತ್ತು ಇರುವುದಿಲ್ಲ ಎಂಬ ಆತಂಕಭರಿತ ಸ್ವಕಾಳಜಿ ಈ ಚಿಂತಕರದು. ಹೀಗಾಗಿ ಇವರು ಕೊಟ್ಟಿದ್ದೇ ಸಲಹೆ, ಹೇಳಿದ್ದೇ ಪಾಠ. ಈ ಪ್ರತೀತಿಯೇ ಸಭಾಪತಿ ನಿರ್ಣಯ ವಿಚಾರದಲ್ಲಿ ಸಾಧಕ-ಬಾಧಕಗಳ ಬಗ್ಗೆ ಅನ್ಯರ ಅಭಿಪ್ರಾಯಕ್ಕೆ ಆಸ್ಪದ ಸಿಕ್ಕಿಲ್ಲ. ಈ ಪ್ರಹಸನದಲ್ಲಿ ಜೆಡಿಎಸ್ ನಿಲುವು ಏನು, ಅದರ ಒಳಮರ್ಮ ಏನು ಎಂಬುದು ಸಿದ್ದರಾಮಯ್ಯನವರಿಗೆ ಕೊನೇ ಘಳಿಗೆವರೆಗೂ ಗೊತ್ತಾಗಲೇ ಇಲ್ಲ. ತತ್ಪರಿಣಾಮವಾಗಿ ಯಾರದೋ ಮಾತನ್ನು ಕೇಳಿಕೊಂಡು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಭಂಗ ಅನುಭವಿಸುವಂತಾಗಿದೆ.

ವಾಸ್ತವವಾಗಿ ದೇವೇಗೌಡರಿಗೆ ಇನ್ನೆರಡು ತಿಂಗಳಲ್ಲಿ ನಿವೃತ್ತಿ ಆಗಲಿರುವ ಶಂಕರಮೂರ್ತಿ ಅವರನ್ನು ಪದಚ್ಯುತಿ ಮಾಡಲು ಇಷ್ಟವಿರಲಿಲ್ಲ. ಅದನ್ನು ‘ಅವಿಶ್ವಾಸ ನಿರ್ಣಯ’ ರಾಯಭಾರಿ ಆಗಿ ತಮ್ಮ ಬಳಿ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಬಳಿ ಸ್ಪಷ್ಟವಾಗಿ ಹೇಳಿದ್ದರು. ಎರಡು ತಿಂಗಳು ಬಿಟ್ಟು ಬನ್ನಿ. ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಮಾಡುವುದಾದರೆ ಮಾತ್ರ ತಮ್ಮ ಬೆಂಬಲ ಎಂದಿದ್ದರು. ಇನ್ನೊಂದೆಡೆ ಉಗ್ರಪ್ಪನವರ ಚಿತಾವಣೆಯಿಂದ ಈ ಅವಿಶ್ವಾಸ ನಿರ್ಣಯ ಮಂಡನೆ ಆಗುತ್ತಿದೆ. ತಾವು ಸಭಾಪತಿ ಆಗಬೇಕೆಂಬ ಕಾರಣಕ್ಕೆ ಉಗ್ರಪ್ಪನವರು ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂಬುದು ಪರಮೇಶ್ವರ್ ಅವರಿಗೂ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರು ಗೌಡರ ಬಳಿ ಹೋಗುವಾಗಲೇ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಿರಿಯ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರನ್ನು ಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದ್ದರು. ಅವರಿಗೂ ಉಗ್ರಪ್ಪನವರು ಸಭಾಪತಿ ಆಗುವುದು ಬೇಕಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾವು ಸೋಲು ಅನುಭವಿಸುವಲ್ಲಿ ಉಗ್ರಪ್ಪನವರ ಪಾತ್ರವೂ ಇದೆ ಎಂಬುದು ಅವರ ಬಲವಾದ ನಂಬಿಕೆ. ಹೀಗಾಗಿ ಮೋಟಮ್ಮನವರ ಹೆಸರಿಟ್ಟುಕೊಂಡೇ ಅವರು ಗೌಡರ ಬಳಿ ಹೋಗಿದ್ದರು. ಆದರೆ ಗೌಡರು ತಮ್ಮ ರಾಜಕೀಯ ಜೀವನದಲ್ಲಿ ಇಂಥ ಎಷ್ಟು ಆಟಗಳನ್ನು ಕಂಡಿಲ್ಲ. ನಿಮಗೆ ಮೋಟಮ್ಮನವರ ಬಗ್ಗೆ ಅಷ್ಟೊಂದು ಗೌರವವಿದ್ದರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ, ಹೊರಟ್ಟಿಯವರನ್ನು ಸಭಾಪತಿ ಮಾಡಿ ಎಂದು ಹೇಳಿ ಸಾಗಹಾಕಿದ್ದರು.

ಈ ವಿಚಾರ ಗೊತ್ತಾದ ನಂತರ ಉಗ್ರಪ್ಪನವರ ತಂತ್ರ ಮತ್ತು ವರಸೆಯೇ ಬೇರೆ ಆಯಿತು. ಹಿಂದೆ ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಡ್ಡಮತದಾನ ನಡೆದು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದದ್ದನ್ನು ಉದಾಹರಣೆ ಕೊಟ್ಟು, ಸಭಾಪತಿ ಚುನಾವಣೆಯಲ್ಲೂ ಇದು ಮರುಕಳಿಸುತ್ತದೆ. ಜಂತಕಲ್ ಗಣಿ ಪ್ರಕರಣದಿಂದ ಅಧೀರರಾಗಿರುವ ಕುಮಾರಸ್ವಾಮಿ ಬೆಂಬಲ ಕೊಡುತ್ತಾರೆ. ಒಂದೊಮ್ಮೆ ಕೊಡದೇ ಹೋದರೆ ಜೆಡಿಎಸ್ ಕೋಮುವಾದಿ ಬಿಜೆಪಿ ಜತೆ ಕೈಜೋಡಿಸಿದೆ ಎಂಬುದು ಜಗಜ್ಜಾಹಿರಾಗುತ್ತದೆ. ಬೆಂಗಳೂರು ದಕ್ಷಿಣ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರ ಬಿಜೆಪಿ ಮುಖಂಡರು ಪ್ರಚಾರ ಮಾಡಿದ್ದರೂ ಕಾಂಗ್ರೆಸ್ಸಿಗೇ ಗೆಲುವಾಗಿತ್ತು. ಮುಂದಿನ ಚುನಾವಣೆಗಳಲ್ಲೂ ಅದೂ ಮರುಕಳಿಸುತ್ತದೆ. ಯಾವ ಕೋನದಿಂದ ನೋಡಿದರೂ ಕಾಂಗ್ರೆಸ್ಸಿಗೇ ಲಾಭ ಎಂದು ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿಕೊಟ್ಟರು. ಇಷ್ಟಕ್ಕೆ ಸುಮ್ಮನಾಗಲಿಲ್ಲ. ಮತ್ತೊಂದೆಡೆ ‘ಶಬ್ದವೇಧಿ’ ವಿದ್ಯೆ ಪ್ರಯೋಗಕ್ಕೆ ಮುಂದಾದರು. ಹಳೇ ಬಾಂಧವ್ಯ ಮುಂದಿಟ್ಟು ಜೆಡಿಎಸ್‌ನ ಕೆಲ ನಾಯಕರನ್ನು ಒಳಗೊಳಗೆ ಮನವೊಲಿಸಲು ಪ್ರಯತ್ನ ಶೀಲರಾದರು. ಹೇಗಾದರೂ ಮಾಡಿ ಶಂಕರಮೂರ್ತಿಯವರನ್ನು ಕೆಳಗಿಳಿಸಿ, ಅವರ ಜಾಗದಲ್ಲಿ ಪ್ರತಿಷ್ಠಾಪನೆ ಆಗಬೇಕು ಎಂಬುದಷ್ಟೇ ಅವರ ಇಂಗಿತವಾಗಿತ್ತು. ಅಡ್ಡದಾರಿ ಹಿಡಿದಾಗ ಕಾರ್ಯಸಾಧನೆ ಗುರಿಯಲ್ಲದೆ ಬೇರೇನೂ ಕಣ್ಣಿಗೆ ಗೋಚರಿಸುವುದಿಲ್ಲ. ಹೀಗಾಗಿ ಅವರ ಕುತಂತ್ರ ಕುಮಾರಸ್ವಾಮಿ ಅವರಿಗೆ ಗೊತ್ತಾಗಿದ್ದು ಅವರಿಗೆ ಮಾತ್ರ ಗೊತ್ತಾಗಲೇ ಇಲ್ಲ. ಉಗ್ರಪ್ಪನವರ ಒಳಕಾರ್ಯಾಚರಣೆ ಸುಳಿವಿಡಿದ ಕುಮಾರಸ್ವಾಮಿ ತಕ್ಷಣ ಗೌಡರನ್ನು ಸಂಪರ್ಕಿಸಿ ಮಾಹಿತಿ ನೀಡಿದರು. ತತ್ತ್ವ-ಸಿದ್ಧಾಂತ ಪಕ್ಕಕ್ಕಿಟ್ಟ ಆಪಾದನೆ ಹೊತ್ತರೂ ಪರವಾಗಿಲ್ಲ, ಜೆಡಿಎಸ್ ಪಾಳೆಯದಲ್ಲಿ ಕೈಯಾಡಿಸುತ್ತಿರುವ ಉಗ್ರಪ್ಪನವರಿಗೆ ಬುದ್ದಿ ಕಲಿಸಬೇಕೆಂಬ ನಿರ್ಣಯಕ್ಕೆ ಅಪ್ಪ-ಮಗ ಇಬ್ಬರೂ ಬಂದರು. ಶಂಕರಮೂರ್ತಿ ವಿರುದ್ಧದ ಅವಿಶ್ವಾಸ ನಿರ್ಣಯ ನೆಗೆದುಬಿತ್ತು. ಕೊನೇ ಕ್ಷಣದವರೆಗೆ ಸಿಎಂ ಸಿದ್ದರಾಮಯ್ಯ ಮತ್ತು ಅವರ ‘ಚಿಂತನೆಯ ಸರಕು’ ಉಗ್ರಪ್ಪ ಇಬ್ಬರಿಗೂ ಗೊತ್ತಾಗದಂತೆ!

ನಂಜನಗೂಡು ಮತ್ತು ಗುಂಡ್ಲುಪೇಟೆ ಮರು–ಚುನಾವಣೆಯನ್ನು ಜೆಡಿಎಸ್ ಪರೋಕ್ಷ ಸಹಕಾರದಿಂದ ಗೆದ್ದು ಬೀಗಿದ್ದ ಸಿದ್ದರಾಮಯ್ಯ ಈ ಪ್ರಹಸನದಿಂದ ಬಗ್ಗಿ ಹೋಗಿದ್ದಾರೆ. ಹಾಗೆ ನೋಡಿದರೆ ಸಿದ್ದರಾಮಯ್ಯನವರು ವರ್ಷದಿಂದ ಈಚೆಗೆ ಗೌಡರು ಮತ್ತು ಕುಮಾರಸ್ವಾಮಿ ಬಗ್ಗೆ ಮೃದುಧೋರಣೆ ಬೆಳೆಸಿಕೊಂಡಿದ್ದರು. ಮಾತುಕತೆ ಅವಕಾಶ ಸಿಕ್ಕಾಗೆಲ್ಲ ಬಲವಂತವಾಗಿ ಅದನ್ನು ನಿವಾರಿಸಿಕೊಳ್ಳದ ಮನಸ್ಥಿತಿ ತಲುಪಿದ್ದರು. ಪುತ್ರ ರಾಕೇಶ್ ನಿಧನ ಸಂದರ್ಭದಲ್ಲಿ ಸಿದ್ದರಾಮಯ್ಯ ನಿವಾಸಕ್ಕೆ ದೇವೇಗೌಡರು ಭೇಟಿ ಕೊಟ್ಟು ಸಾಂತ್ವನ ಹೇಳಿದ್ದು, ಕಾವೇರಿ ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಗೌಡರ ನಿವಾಸಕ್ಕೆ ತೆರಳಿ ಸಿದ್ದರಾಮಯ್ಯನವರು ಸಲಹೆ ಪಡೆದಿದ್ದರ ಹಿಂದೆ ಸೌಜನ್ಯದ ಜತೆಜತೆಗೆ ಹಳೇ ಬಾಂಧವ್ಯದ ಎಳೆ ಕೂಡ ಕೆಲಸ ಮಾಡಿತ್ತು. ರಾಜಕೀಯದಲ್ಲಿ ಪ್ರೀತಿ ಮತ್ತು ದ್ವೇಷ ಎರಡೂ ಶಾಶ್ವತ ಅಲ್ಲ ಎಂಬುದು ಸರಿ. ಕಾಲಕ್ಕೆ ತಕ್ಕಂತೆ ಅದು ಬದಲಾಗುತ್ತಾ ಹೋಗುತ್ತದೆ ಎಂಬುದಕ್ಕೆ ದೇವೇಗೌಡರು ಮತ್ತು ಸಿದ್ದರಾಮನ್ಯವರ ನಡುವೆ ಮೂಡಿ, ಒಡೆದರಳಿದ ಬಾಂಧವ್ಯವೇ ಸಾಕ್ಷಿ. ಆದರೆ ಅದೀಗ ಉಗ್ರಪ್ಪನವರ ಸ್ವಾರ್ಥಭರಿತ ವಾಂಛೆಗೆ ಮತ್ತೆ ಮುರುಟಿ ಹೋಗಿದೆ.

ಹಾಗೆ ನೋಡಿದರೆ ಗುಂಡ್ಲುಪೇಟೆ, ನಂಜನಗೂಡು ಚುನಾವಣೆ ನಂತರ ಕಾಂಗ್ರೆಸ್ ವರಿಷ್ಠರು ಕೂಡ ರಾಜ್ಯ ನಾಯಕರಿಗೆ ಜೆಡಿಎಸ್ ಬಗ್ಗೆ ಮೃದುಧೋರಣೆ ಅನುಸರಿಸುವಂತೆ ಸೂಚನೆ ಕೊಟ್ಟಿದ್ದರು. ಮುಂದಿನ ವರ್ಷ ನಡೆವ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶ ಹೀಗೆ ಎಂದು ಹೇಳಲಾಗದು. ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಅನುಕೂಲಕ್ಕೆ ಬರುತ್ತದೆ ಎಂಬುದು ಈ ಸೂಚನೆ ಹಿಂದಿನ ಇಂಗಿತವಾಗಿತ್ತು. ಆದರೆ ಈಗಷ್ಟೇ ಕೆನೆಗಟ್ಟುತ್ತಿದ್ದ ಕಾಂಗ್ರೆಸ್-ಜೆಡಿಎಸ್ ಸ್ನೇಹ ಉಗ್ರಪ್ಪನವರು ಹಿಂಡಿರುವ ಹುಳಿಯಿಂದ ಒಡೆದು ಹೋಗಿದೆ. ಇತ್ತ ಹಾಲೂ ಇಲ್ಲ, ಅತ್ತ ಮೊಸರೂ ಇಲ್ಲ. ಉಗ್ರಪ್ಪನವರ ವಿರುದ್ಧ ಸ್ಫೋಟಗೊಂಡಿರುವ ಕಾಂಗ್ರೆಸ್ ಶಾಸಕರ ಆಕ್ರೋಶಕ್ಕೆ ಇದೂ ಒಂದು ಕಾರಣ. ಈ ಆಕ್ರೋಶ ದೂರಾಗಿ ಹೈಕಮಾಂಡ್ ಬಳಿ ಹೋಗಿದೆ.

ಹಾಗೆ ನೋಡಿದರೆ ಉಗ್ರಪ್ಪನವರಿಗೆ ಮೊದಲಿಂದಲೂ ಮುಖ್ಯಮಂತ್ರಿ ಮತ್ತಿತರ ಪ್ರಮುಖ ಸ್ಥಾನ ಅಲಂಕರಿಸಿದವರ ಆಪ್ತವಲಯ ಅಪಹರಿಸುವ ಕಲೆ ಚೆನ್ನಾಗಿ ಒಲಿದು ಬಂದಿದೆ. ಅಧಿಕಾರಸ್ಥರು ಬದಲಾದಂತೆ ಇವರ ನಿಷ್ಠೆ ಕೂಡ ಬದಲಾಗುತ್ತದೆ. ಗೆದ್ದೆತ್ತಿನ ಬಾಲ ಹಿಡಿಯುವವರಂತೆ. ದೇವೇಗೌಡರು ಮತ್ತು ರಾಮಕೃಷ್ಣ ಹೆಗಡೆ ನಡುವೆ ಹಗೆ ಹೊಗೆಯಾಡುತ್ತಿದ್ದ ಸಂದರ್ಭದಲ್ಲಿ ಗೌಡರ ಜತೆ ಗುರುತಿಸಿಕೊಂಡು, ವಿರೋಧಿ ಪಾಳೆಯದ ಮಾಹಿತಿ ಪೂರೈಕೆದಾರರಾಗಿದ್ದರು. ಗೌಡರು ಮುಂದೆ ಸಿಎಂ ಆದಾಗ ಅವರ ‘ಚಿಂತಕರ ಚಾವಡಿ’ಯಲ್ಲಿ ಪ್ರಮುಖ ಸ್ಥಾನ ಪಡೆದರು. ಚಾವಡಿಯಲ್ಲಿದ್ದ ಬಿ.ಎಲ್. ಶಂಕರ್, ವೈ.ಎಸ್.ವಿ. ದತ್ತಾ, ಸಿದ್ದರಾಮಯ್ಯ ಪೈಕಿ ಉಗ್ರಪ್ಪನವರ ಆರ್ಭಟವೇ ಹೆಚ್ಚಿತ್ತು. ಗೌಡರ ಮಾನಸ ಪುತ್ರ ಎಂಬಷ್ಟರ ಮಟ್ಟಿಗೆ ಆಪ್ತರಾಗಿದ್ದರು. ಗೌಡರು ಪ್ರಧಾನಿಯಾಗಿ ದಿಲ್ಲಿಗೆ ಹೋಗುತ್ತಿದ್ದಂತೆ ಇತ್ತ ಮುಖ್ಯಮಂತ್ರಿಯಾದ ಜೆ.ಎಚ್. ಪಟೇಲರ ಗುಂಪಿಗೆ ಜಾರಿದರು. ಮುಂದೆ ಜನತಾ ದಳ ವಿಭಜನೆ ಆದಾಗ ಗೌಡರು, ಪಟೇಲರನ್ನು ಬಿಟ್ಟು ಹೆಗಡೆ ಅವರ ಲೋಕಶಕ್ತಿ ಕಡೆ ವಾಲಿದರು. ಅಲ್ಲಿಂದ ದೇಶಪಾಂಡೆ ಜತೆ ಕಾಂಗ್ರೆಸ್‌ಗೆ ಬಂದರು. ಅಲ್ಲಿ ದೇಶಪಾಂಡೆ ಬಣ, ಮಲ್ಲಿಕಾರ್ಜುನ ಖರ್ಗೆ ಬಣ ಸುತ್ತಾಡಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗುತ್ತಿದ್ದಂತೆ ಅವರ ಆಪ್ತ ವಲಯ ಸೇರಿದರು. ದೇವೇಗೌಡರನ್ನು ಬೈಯ್ದುಕೊಂಡೇ ಕೃಷ್ಣ ಅವರಿಗೆ ಪರಮಾಪ್ತರಾಗಿ ಹೋದ ಉಗ್ರಪ್ಪ ಹಿಂದುಳಿದ ವರ್ಗಗಳು, ಕಾನೂನು ವಿಚಾರಗಳಲ್ಲಿ ಸಲಹೆ ಕೊಡುತ್ತಿದ್ದರು. ಇವರ ಬುದ್ಧಿಮತ್ತೆ ಮೆಚ್ಚಿ ಕೃಷ್ಣ ಇವರನ್ನು ಮೇಲ್ಮನೆ ಸದಸ್ಯರನ್ನಾಗಿ ಮಾಡಿದರು. ಯಾವ ಪರಿ ಕೃಷ್ಣ ಅವರಿಗೆ ಕಾನೂನು ಸಲಹೆ ಕೊಟ್ಟರು ಎಂದರೆ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಆದೇಶ ಕೊಟ್ಟಾಗ ಇವರು, ಬಿಡಬೇಡಿ, ಬೆಂಗಳೂರಿಂದ ಮೈಸೂರುವರೆಗೆ ಪಾದಯಾತ್ರೆ ಮಾಡಿ, ಜನ ಮೆಚ್ಚಿ ಮುಂದೆ ಮತ್ತೆ ಅಧಿಕಾರಕ್ಕೆ ತರುತ್ತಾರೆ ಅಂತ ಕೃಷ್ಣ ಅವರಿಗೆ ಬೋಧನೆ ಮಾಡಿದರು. ಇವರ ಮಾತು ಕೇಳಿದ ಕೃಷ್ಣ ಸುಪ್ರೀಂ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡರು. ಹಂಗಿತ್ತು ಅವರ ಸಲಹೆ ಬಳುವಳಿ!

ಮುಂದೆ ಅತಂತ್ರ ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಧರ್ಮಸಿಂಗ್ ಕ್ಯಾಂಪಿಗೆ ನೆಗೆದರು. ಧರ್ಮಸಿಂಗ್ ಅವರದೇ ಅಲ್ಪಾವಧಿ. ಹೀಗಾಗಿ ಇವರಿಗೆ ಹೆಚ್ಚು ಆಟವಾಡಲಾಗಲಿಲ್ಲ. ನಂತರ ಪರಮೇಶ್ವರ್, ಖರ್ಗೆ ಅವರ ಜತೆ ಓಡಾಡಿಕೊಂಡೇ ಸಿದ್ದರಾಮಯ್ಯ ಜತೆಗೂಡಿದರು. ಅವರು ಮುಖ್ಯಮಂತ್ರಿ ಆದನಂತರ ಅವರ ‘ಮಿದುಳು’ ಎಂಬಷ್ಟರ ಮಟ್ಟಿಗೆ ಆಪ್ತರಾಗಿದ್ದಾರೆ. ಆ ಮಿದುಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು ಒಂದು ತಾಜಾ ನಿದರ್ಶನ.

ಉಗ್ರಪ್ಪನವರಿಗೆ ಕಾನೂನು ಅರಿವು, ಮಾಹಿತಿ ಕ್ರೋಡೀಕರಣ, ವಿಷಯ ಮಂಡನೆ ಪರಿಣಿತಿ ಇದೆ ಎಂಬುದು ನಿಜ. ಆದರೆ ಎಲ್ಲವೂ ಎಲ್ಲ ಸಂದರ್ಭಗಳಲ್ಲೂ ಕೈಹಿಡಿಯುತ್ತದೆ ಎಂದು ಹೇಳಲು ಬರುವುದಿಲ್ಲ. ಅಧಿಕಾರಸ್ಥರ ಜತೆ ತಮಗಿರುವ ಆಪ್ತತೆ ಎಳೆಯಿಂದಲೇ ವ್ಯವಸ್ಥೆ ಮತ್ತು ಸರಕಾರಿ ಸಂಸ್ಥೆಗಳನ್ನು ನಿಯಂತ್ರಿಸುವ ಒಳತಂತ್ರಗಾರಿಕೆಯಲ್ಲೂ ಅವರು ನಿಪುಣರು. ಇತ್ತೀಚೆಗೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಪ್ರೋ ಯುರೋಲಜಿ ಸಂಸ್ಥೆ ನಿರ್ದೇಶಕರ ಬದಲಾವಣೆ ಆಯಿತು. ಜ್ಯೇಷ್ಠತೆಯಲ್ಲಿ ಒಂದನೇ ಸ್ಥಾನದಲ್ಲಿದ್ದವರನ್ನು ಕದಲಿಸಿ, ಮೂರನೇ ಸ್ಥಾನದಲ್ಲಿದ್ದವರನ್ನು ಆ ಜಾಗಕ್ಕೆ ತರಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಇಲಾಖೆ ಕಾರ್ಯದರ್ಶಿ ಆಕ್ಷೇಪದ ನಡುವೆಯೂ ಈ ಬದಲಾವಣೆ ಆಗಿರುವುದು ಉಗ್ರಪ್ಪನವರ ಒಳತಂತ್ರಗಾರಿಕೆ ಸಾಮರ್ಥ್ಯಕ್ಕೊಂದು ಸಾಕ್ಷಿ. ಆದರೆ ಈ ಸಾಮರ್ಥ್ಯ ಸಭಾಪತಿ ಬದಲಾವಣೆಯಲ್ಲಿ ಸಾಬೀತಾಗದೆ, ಬೋರಲು ಬಿದ್ದದ್ದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಾಲಿನ ದುರಂತ.

ಲಗೋರಿ : ಯಾಮಾರಿಸುವವರೂ ಯಾಮಾರಬೇಕಾಗುತ್ತದೆ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply