ಲಂಡನ್ ಮಸೀದಿ ಬಳಿ ದಾಳಿ, ಇದು ಇಸ್ಲಾಂ ತೀವ್ರವಾದಿಗಳ ವಿರುದ್ಧ ನಡೆದ ಪ್ರತೀಕಾರದ ಕೃತ್ಯವೇ?

ಡಿಜಿಟಲ್ ಕನ್ನಡ ಟೀಮ್:

ಲಂಡನ್ ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತೆ ಸಾಬೀತಾಗಿದೆ. ಕಳೆದೆರಡು ವಾರಗಳಲ್ಲಿ ಉಗ್ರರ ಬಾಂಬ್ ದಾಳಿಯ ಬೆನ್ನಲ್ಲೇ ಸೋಮವಾರ ಬೆಳಗಿನ ಜಾವ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದೆ. ಆದರೆ ಈ ಬಾರಿ ಸ್ಫೋಟಕಗಳನ್ನು ಬಳಸದೇ ವಾಹನವನ್ನು ಜನ ನಿಬಿಡ ಪ್ರದೇಶದಲ್ಲಿ ನುಗ್ಗಿಸಿ ದಾಳಿ ನಡೆಸಲಾಗಿದೆ.

ಉತ್ತರ ಲಂಡನ್ನಿನ ಫಿನ್ಸ್ ಬರಿ ಪಾರ್ಕ್ ಪ್ರದೇಶದ ಬಳಿ ಇರುವ ಮಸೀದಿಯಲ್ಲಿ ಸೋಮವಾರ ಬೆಳಗಿನ ಜಾವ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸಿ ಹೊರಗೆ ಗುಂಪು ಸೇರಿದ್ದರು. ಈ ಸಂದರ್ಭದಲ್ಲಿ ವಾಹನವನ್ನು ಏಕಾಏಕಿ ಜನರ ಮೇಲೆ ನುಗ್ಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಲಂಡನ್ ಮೆಟ್ರೊಪಾಲಿಟಿನ್ ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ 48 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಈ ದಾಳಿಯನ್ನು ಲಂಡನ್ ಮೇಯರ್ ಸಾದಿಕ್ ಖಾನ್, ‘ಉದ್ದೇಶಿತ ಉಗ್ರರ ದಾಳಿ’ ಎಂದು ಬಣ್ಣಿಸಿದ್ದು, ‘ಈ ಪ್ರಕರಣದ ಕುರಿತಾಗಿ ನಮಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಆದರೆ ಲಂಡನ್ನಿನ ಮುಗ್ಧ ನಾಗರೀಕರ ಮೆಲೆ ಉದ್ದೇಶಿತವಾಗಿ ನಡೆದಿರುವ ದಾಳಿ ಇದಾಗಿದೆ. ಪವಿತ್ರ ರಂಜಾನ್ ಅಂಗವಾಗಿ ಮುಸಲ್ಮಾನರು ಪ್ರಾರ್ಥನೆ ಮುಗಿಸಿ ಹೊರ ಬಂದ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿದೆ’ ಎಂದು ಮಾಹಿತಿ ಕೊಟ್ಟಿದ್ದಾರೆ.

ಈ ದಾಳಿ ನಡೆಸಿದ ಸಂದರ್ಭದಲ್ಲಿ ಸ್ಥಳೀಯರೇ ವಾಹನದ ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಮತ್ತಿಬ್ಬರು ವ್ಯಕ್ತಿಗಳು ಬೇರೊಂದು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೌಂಟರ್ ಟೆರರಿಸಮ್ ಕಮಾಂಡ್ ಪಡೆಯಿಂದ ನಡೆಸಲಾಗುತ್ತಿದ್ದು, ಈ ದಾಳಿಯ ಬೆನ್ನಲ್ಲೇ ಪ್ರಧಾನಿ ಥೆರೆಸ್ಸಾ ಮೇ ತುರ್ತು ಸಭೆಯನ್ನು ಕರೆದಿದ್ದಾರೆ.

ಇನ್ನು ಈ ಮಸೀದಿಯ ಹಿನ್ನೆಲೆಯನ್ನು ನೋಡುವುದಾದರೆ, ಫಿನ್ಸ್ ಬರಿ ಪಾರ್ಕ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ್ ಸಮುದಾಯದವರು ನೆಲೆಸಿದ್ದಾರೆ. ಈ ಪ್ರದೇಶದಲ್ಲಿರುವ ಮಸೀದಿಯಲ್ಲಿ ಈ ಹಿಂದೆ ಹಲವು ಬಾರಿ ಇಸ್ಲಾಂ ತೀವ್ರವಾದಿಗಳ ಸಭೆ ನಡೆಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. 1994ರಲ್ಲಿ ಆರಂಭವಾದ ಈ ಮಸೀದಿ ಆರ್ಸೆನೆಲ್ ಫುಟ್ಬಾಲ್ ಕ್ಲಬ್ ನ ಎಮಿರೆಟ್ಸ್ ಕ್ರೀಡಾಂಗಣದ ಸಮೀಪದಲ್ಲಿಯೇ ಇದೆ. ಈ ಮಸೀದಿಯು ಈಜಿಪ್ಟ್ ಮೂಲದ ಅಬು ಹಂಜಾ ಅಲ್ ಮಸ್ರಿ ಅವರಂತಹ ತೀವ್ರ ಇಸ್ಲಾಂವಾದಿಗಳ ಸಂಪರ್ಕವನ್ನು ಹೊಂದಿದೆ. ಅಬು ಹಂಜಾ 1997ರಿಂದ 2003ರವರೆಗೂ ಈ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸಿದ್ದು, ನಂತರ ಅಲ್ ಖೈದಾ ಹಾಗೂ ತಾಲಿಬಾನ್ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಈತನನ್ನು ಅಮೆರಿಕ ತನ್ನ ವಶಕ್ಕೆ ಪಡೆದುಕೊಂಡಿತ್ತು. ನಂತರ 2015ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮ್ಯಾಚೆಸ್ಟರ್ ಹಾಗೂ ಲಂಡನ್ ಗಳಲ್ಲಿ ನಡೆದ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಇಸ್ಲಾಂ ತೀವ್ರವಾದಿಗಳಿಗೆ ಆಶ್ರಯ ನೀಡಿರುವ ಈ ಮಸೀದಿ ಮೇಲೆ ದಾಳಿ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಇದನ್ನು ಭಯೋತ್ಪಾದಕ ದಾಳಿ ಎಂದು ಬಣ್ಣಿಸಿದ್ದರೂ, ಸರ್ಕಾರ ಇದು ಭಯೋತ್ಪಾದಕರ ದಾಳಿ ಎಂದು ಅಧಿಕೃತವಾಗಿ ಪ್ರಕಟಿಸಿಲ್ಲ. ಇನ್ನು ಈ ದಾಳಿಯನ್ನು ಯಾವುದೇ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ. ಹೀಗಾಗಿ ಇದು ಪ್ರತೀಕಾರದ ದಾಳಿಯಾಗಿರಬಹುದು ಎಂಬ ಅನುಮಾನಗಳು ದಟ್ಟವಾಗಿವೆ.

Leave a Reply