ತಿಥಿ ಅತ್ಯುತ್ತಮ ಚಿತ್ರ, ಅನಂತ್ ನಾಗ್ ಅವರಿಗೆ ಅತ್ಯುತ್ತಮ ನಟ… ಮತ್ಯಾರಿಗೆಲ್ಲಾ ಸಿಕ್ತು ಸೌತ್ ಫಿಲ್ಮ್ ಫೇರ್ ಅವಾರ್ಡ್?

ಡಿಜಿಟಲ್ ಕನ್ನಡ ಟೀಮ್:

ದಕ್ಷಿಣ ಭಾರತದ ಪ್ರತಿಷ್ಠಿತ 64 ನೇ ಜಿಯೋ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಹೈದರಾಬಾದ್ ಅಂತಾರಾಷ್ಟ್ರೀಯ ಕನ್ವೆಷನ್ ಸೆಂಟರ್ ನಲ್ಲಿ ನಡೆದಿದೆ. ಈ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯಲ್ಲಿ ಕನ್ನಡದ ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ, ಯಾವ ನಟ ನಟರಿಗೆ ಪ್ರಶಸ್ತಿ ಬಂದಿವೆ ನೋಡೋಣ ಬನ್ನಿ…

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ರಾಮ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದ ‘ತಿಥಿ’ ಸಿನಿಮಾ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ 150 ದಿನಗಳು ಪ್ರದರ್ಶನ ಕಂಡು ಈ ವರ್ಷ ದಾಖಲೆ ಸೃಷ್ಟಿಸಿದ ‘ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶನಕ್ಕೆ ರಿಷಬ್ ಶೆಟ್ಟಿಯವರಿಗೆ ಕನ್ನಡ ವಿಭಾಗದಿಂದ ಸೌತ್ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸಂದಿದೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಅಭಿನಯಕ್ಕಾಗಿ ಅನಂತ್ ನಾಗ್ ರವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, ನಿರ್ದೇಶಕ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ ‘ಯೂ ಟರ್ನ್’ ಚಿತ್ರದಲ್ಲಿಯ ನಟನೆಗಾಗಿ ನಟಿ ಶ್ರದ್ಧಾ ಶ್ರೀನಾಥ್ ರವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇನ್ನು ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿಯ ಅಭಿನಯಕ್ಕಾಗಿ ವಸಿಷ್ಠ ಎನ್ ಸಿಂಹ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದರೆ, ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಸಂಯುಕ್ತಾ ಹೆಗಡೆ ರವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

ಗಣೇಶ್ ಅಭಿನಯದ ‘ಮುಂಗಾರು ಮಳೆ 2’ ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ರವರು ಬರೆದ ‘ಸರಿಯಾಗಿ ನೆನಪಿದೆ’ ಹಾಡು ಬೆಸ್ಟ್ ಲಿರಿಕ್ಸ್ ಪ್ರಶಸ್ತಿ ಪಡೆದಿದೆ. ‘ಕಿರಿಕ್ ಪಾರ್ಟಿ’ ಚಿತ್ರದ ‘ಬೆಳಗೆದ್ದು ಯಾರ ಮುಖವ’ ಹಾಡಿಗಾಗಿ ವಿಜಯ್ ಪ್ರಕಾಶ್ ರವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ. ‘ರಾಮಾ ರಾಮ ರೇ’ ಚಿತ್ರದಲ್ಲಿನ ‘ನಮ್ಮ ಕಾಯೋ ದೇವರೇ’ ಹಾಡಿರುವ ಅನನ್ಯ ಭಟ್ ಗೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಲಭಿಸಿದೆ.

Leave a Reply