ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿರುವುದೇಕೆ? ನಡೆಯುತ್ತಾ ಸೀಮಿತ ದಾಳಿ?

ಡಿಜಿಟಲ್ ಕನ್ನಡ ಟೀಮ್:

ಉಗ್ರರಿಗೆ ತನ್ನ ಒಡಲಲ್ಲಿ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿದೆ. ಇಷ್ಟು ದಿನಗಳವರೆಗೂ ಕೇವಲ ಬಾಯ್ಮಾತಿನ ಬುದ್ಧಿ ಹೇಳುತ್ತಿದ್ದ ಅಮೆರಿಕ, ಈಗ ಪಾಕಿಸ್ತಾನ ವಿರುದ್ಧ ತನ್ನ ನಿಲುವು ಬಿಗಿಗೊಳಿಸುವತ್ತ ಚಿಂತನೆ ನಡೆಸಿದೆ. ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರರು ಭಾರತ ಸೇರಿದಂತೆ ಅಫ್ಘಾನಿಸ್ತಾನ ಹಾಗೂ ಇತರೆ ನೆರೆ ರಾಷ್ಟ್ರಗಳ ಮೇಲೆ ನಿರಂತರ ದಾಳಿ ಮಾಡುತ್ತಿರುವುದು ಅಮೆರಿಕ ಕಣ್ಣು ಕೆಂಪಾಗಿಸಿದೆ. ಹೀಗಾಗಿ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಅಮೆರಿಕ ಸೀಮಿತ ದಾಳಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.

ಹೌದು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಮೆರಿಕವು ಪಾಕಿಸ್ತಾನಕ್ಕೆ ವರ್ಷಗಳಿಂದ ಸಲಹೆ ನೀಡುತ್ತಾ ಬಂದಿದ್ದರೂ ಪಾಕಿಸ್ತಾನ ಕಿಂಚಿತ್ತೂ ಮರ್ಯಾದೆ ಕೊಟ್ಟಿಲ್ಲ. ಹೀಗಾಗಿ ಸ್ವತಃ ಅಮೆರಿಕವೇ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ಸಜ್ಜಾಗಿದೆ ಎಂದು ಅಮೆರಿಕ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವತ್ತ ಚಿಂತಿಸಿದೆ. ಉಗ್ರರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿ ಭಯೋತ್ಪಾದಕರನ್ನು ಮಟ್ಟಹಾಕುವುದು ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಆ ರಾಷ್ಟ್ರಕ್ಕೆ ನೀಡಿರುವ ನ್ಯಾಟೊಯೇತ್ತರ ಪ್ರಮುಖ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆಯುವ ಕುರಿತು ಚಿಂತನೆ ನಡೆಸಲಾಗಿದೆ.

ಈ ಕುರಿತಾಗಿ ಅಮೆರಿಕದ ಭದ್ರತಾ ಅಧಿಕಾರಿಗಳು ಹೇಳಿರುವುದಿಷ್ಟು… ‘ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿರುವುದರಿಂದ ಉಗ್ರರು ಅಲ್ಲಿ ಆಶ್ರಯ ಪಡೆದು ನೆರೆ ರಾಷ್ಟ್ರದಿಂದಲೇ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಹೀಗೆ ಪಾಕಿಸ್ತಾನದಿಂದ ದಾಳಿ ಮಾಡಿ ಮತ್ತೆ ಅಫ್ಘಾನಿಸ್ತಾನದಲ್ಲಿ ನಿಯಂತ್ರಣ ಸಾಧಿಸಲು ತಾಲಿಬಾನ್ ಉಗ್ರಗಾಮಿಗಳು ಪ್ರಯತ್ನಿಸುತ್ತಿದ್ದಾರೆ. ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಳ್ಳಲು ಅಮೆರಿಕ ಚಿಂತಿಸುತ್ತಿಲ್ಲ. ಆದರೆ ಉಗ್ರರ ವಿಚಾರವಾಗಿ ಪಾಕಿಸ್ತಾನ ಕಠಿಣ ನಿಲುವು ತಾಳಲೇಬೇಕು ಎಂಬುದು ಅಮೆರಿಕದ ನಿರೀಕ್ಷೆ. ಹಲವು ವರ್ಷಗಳಿಂದಲೂ ಈ ವಿಚಾರವಾಗಿ ಅಮೆರಿಕ ಸಾಕಷ್ಟು ಸಲಹೆ ನೀಡುತ್ತಿದ್ದರೂ ಪಾಕಿಸ್ತಾನ ಮಾತ್ರ ಸೂಕ್ತ ರೀತಿಯಲ್ಲಿ ಸ್ಪಂಧಿಸುತ್ತಿಲ್ಲ. ಇನ್ನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ, ಹಕ್ಕಾನಿ ಉಗ್ರಗಾಮಿಗಳ ಜತೆ ಸಂಪರ್ಕವನ್ನು ಹೊಂದಿದ್ದು, ಅಫ್ಘಾನಿಸ್ತಾನದಲ್ಲಿ ಕೆಲವು ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ಅಮೆರಿಕ ಕಠಿಣ ನಿಲುವು ತೆಗೆದುಕೊಳ್ಳುವುದಂತೂ ಖಚಿತ. ಅದರ ಭಾಗವಾಗಿ ಅಫ್ಘಾನಿಸ್ತಾನದಲ್ಲಿ ಇನ್ನು ಸಾವಿರಾರು ಮಿಲಿಟರಿ ಟ್ರೂಪ್ ನಿಯೋಜಿಸುವುದರ ಜತೆಗೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಸೀಮಿತ ದಾಳಿ ನಡೆಸುವ ಕುರಿತು ಚಿಂತನೆ ನಡೆಸಲಾಗಿದೆ.’

Leave a Reply