ರಾಹುಲ್ ದ್ರಾವಿಡ್ ಗೆ ಸಿಕ್ಕ ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಬಿಸಿಸಿಐನಿಂದ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ ಗುಡ್ ನ್ಯೂಸ್ ಜತೆಗೆ ಜತೆಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ, ಭಾರತ ಎ ತಂಡ ಹಾಗೂ 19 ವರ್ಷದೊಳಗಿನ ಕಿರಿಯ ತಂಡದ ಕೋಚ್ ಆಗಿ ಎರಡು ವರ್ಷಗಳ ಅವಧಿಗೆ ಒಪ್ಪಂದ ವಿಸ್ತರಣೆ ಮಾಡಲು ಕ್ರಿಕೆಟ್ ಸಲಹಾ ಸಮಿತಿ ನಿರ್ಧರಿಸಿರುವುದು ಗುಡ್ ನ್ಯೂಸ್. ಆದರೆ ದ್ರಾವಿಡ್ ಇನ್ನು ಮುಂದೆ ಐಪಿಎಲ್ ನಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದು ಬ್ಯಾಡ್ ನ್ಯೂಸ್.

ಮೊದಲಿಗೆ ಕೋಚ್ ಅವಧಿ ವಿಸ್ತರಣೆ ಏನು ನೋಡೋಣ ಬನ್ನಿ. ಭಾರತ ಕಿರಿಯರ ತಂಡ ಹಾಗೂ ಎ ತಂಡಕ್ಕೆ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿರುವ ರಾಹುಲ್ ದ್ರಾವಿಡ್ ಅವರನ್ನು ಇನ್ನು ಎರಡು ವರ್ಷಗಳ ಕಾಲ ಕೋಚ್ ಹುದ್ದೆಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಗಂಗೂಲಿ, ಸಚಿನ್ ಹಾಗೂ ಲಕ್ಷ್ಮಣ್ ಅವರನ್ನೊಳಗೊಂಡ ಬಿಸಿಸಿಐ ಸಲಹಾ ಸಮಿತಿ ದ್ರಾವಿಡ್ ರನ್ನು ಕೋಚ್ ಆಗಿ ಮುಂದುವರಿಸುವ ಕುರಿತು ಬಿಸಿಸಿಐಗೆ ಶಿಫಾರಸ್ಸು ಮಾಡಿದೆ. ಈ ಕುರಿತಾದ ಅಧಿಕೃತ ನಿರ್ಧಾರವನ್ನು ಬಿಸಿಸಿಐ ವಿಶೇಷ ಸಭೆಯಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.

ಬಿಸಿಸಿಐನಿಂದ ಬಂದ ಕೋಚ್ ಅವಧಿ ವಿಸ್ತರಣೆಯ ಅವಕಾಶವನ್ನು ದ್ರಾವಿಡ್ ಸ್ವೀಕರಿಸಿದ್ದೇ ಆದರೆ, ಅವರು ಮುಂದಿನ ವರ್ಷದಿಂದ ಐಪಿಎಲ್ ನಲ್ಲಿ ಭಾಗವಹಿಸುವಂತಿಲ್ಲ. ಭಾರತ ಕಿರಿಯರ ತಂಡದ ಕೋಚ್ ಆಗಿರುವುದರ ಜತೆಗೆ ದ್ರಾವಿಡ್ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಸ್ವತಃ ದ್ರಾವಿಡ್ ತಮ್ಮ ಈ ಎರಡು ಹುದ್ದೆಯು ಲೋಧಾ ಸಮಿತಿಯ ಶಿಫಾರಸ್ಸಾದ ಸ್ವಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯಾಗುತ್ತದೆಯೇ ಎಂದು ಪ್ರಶ್ನಿಸಿ ಬಿಸಿಸಿಗೆ ಪತ್ರ ಬರೆದಿದ್ದರು. ದ್ರಾವಿಡ್ ಅವರ ಈ ಜವಾಬ್ದಾರಿ ಕಂಡು ಎಲ್ಲರ ಪ್ರಶಂಸೆ ವ್ಯಕ್ತಪಡಿಸಿದ್ದರು. ಎರಡು ಹುದ್ದೆ ಅಲಂಕರಿಸಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ದ್ರಾವಿಡ್ ಐಪಿಎಲ್ ನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಇದು ದ್ರಾವಿಡ್ ಅಭಿಮಾನಿಗಳ ಪಾಲಿಗಂತೂ ಕೆಟ್ಟ ಸುದ್ದಿಯೇ.

Leave a Reply