ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾ ಅನಿಲ್ ಕುಂಬ್ಳೆ ಆಡಿದ ಮಾತುಗಳು ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲವು ಆಟಗಾರರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ನಿನ್ನೆ ರಾತ್ರಿ ರಾಜೀನಾಮೆ ಸಲ್ಲಿಸಿರುವ ಅನಿಲ್ ಕುಂಬ್ಳೆ ತಮ್ಮ ನಿರ್ಧಾರದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು ಅದು ಹೀಗಿದೆ…

‘ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರಿಯಲು ಕ್ರಿಕೆಟ್ ಸಲಹಾ ಸಮಿತಿ ನನಗೆ ಅವಕಾಶ ನೀಡಿದ್ದು ನನಗೆ ಗೌರವ ತಂದಿದೆ. ಕಳೆದ ಒಂದು ವರ್ಷದಲ್ಲಿ ಟೀಂ ಇಂಡಿಯಾ ಗಳಿಸಿದ ಯಶಸ್ಸಿನ ಶ್ರೇಯ ತಂಡದ ನಾಯಕ ಆಟಗಾರರು ಹಾಗೂ ತರಬೇತು ಸಿಬ್ಬಂದಿಗೆ ಸಲ್ಲಬೇಕು.

ನಿನ್ನೆ ಮೊದಲ ಬಾರಿಗೆ ನನ್ನ ಮಾರ್ಗದರ್ಶನದ ಶೈಲಿಯ ಬಗ್ಗೆ ಹಾಗೂ ತಂಡದ ಮುಖ್ಯ ಕೋಚ್ ಆಗಿ ನಾನು ಮುಂದುವರಿಯಲು ತಂಡದ ನಾಯಕ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ನನಗೆ ಬಿಸಿಸಿಐನಿಂದ ಅಧಿಕೃತ ಮಾಹಿತಿ ಬಂದಿತು. ತಂಡದ ನಾಯಕ ಹಾಗೂ ಕೋಚ್ ಸ್ಥಾನಕ್ಕೆ ಸಂಪೂರ್ಣ ಮರ್ಯಾದೆ ಕೊಟ್ಟು ಅಂತರ ಕಾಯ್ದುಕೊಂಡಿದ್ದ ನನಗೆ ಈ ಮಾಹಿತಿ ಕೇಳಿ ಆಶ್ಚರ್ಯವಾಯಿತು. ನಾಯಕ ಹಾಗೂ ನನ್ನ ನಡುವಣ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಬಿಸಿಸಿಐ ಸಕಲ ಪ್ರಯತ್ನಪಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ನಾನೇ ಇಲ್ಲಿಂದ ಹೊರಡುವುದು ಸೂಕ್ತ ಎಂದು ನಿರ್ಧರಿಸಿದೆ.

ಟೀಂ ಇಂಡಿಯಾ ಕೋಚ್ ಆಗಿದ್ದ ಸಂದರ್ಭದಲ್ಲಿ ವೃತ್ತಿಪರತೆ, ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಪ್ರಶಂಸೆಯ ಕಲೆ ಮತ್ತು ವಿವಿಧ ಆಲೋಚನೆಗಳನ್ನು ನಾನು ನೀಡುತ್ತಲೇ ಬಂದಿದ್ದೆ. ಈ ಎಲ್ಲ ಅಂಶಗಳಿಗೂ ಸೂಕ್ತ ಮರ್ಯಾದೆ ಸಿಕ್ಕಾಗ ಮಾತ್ರ ಒಟ್ಟಾಗಿ ಕೆಲಸ ಮಾಡಲು ಸಾಧ್ಯ.

ಬಿಸಿಸಿಐ ಹಾಗೂ ಸಲಹಾ ಸಮಿತಿಗೆ ಯಾರು ಸೂಕ್ತ ಎಂದು ಅನಿಸುತ್ತದೆಯೋ ಅವರಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಲು ಇಚ್ಛಿಸುತ್ತೇನೆ. ಕಳೆದ ಒಂದು ವರ್ಷಗಳ ಕಾಲ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿನ ನಾನು ಕಾರ್ಯನಿರ್ವಹಿಸಿರುವುದು ನನ್ನ ಅದೃಷ್ಟ. ನನ್ನ ಈ ಹಾದಿಯಲ್ಲಿ ಸಹಕರಿಸಿದ ಬಿಸಿಸಿಐ, ಸಲಹಾ ಸಮಿತಿ ಹಾಗೂ ಇತರ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.

ಟೀಂ ಇಂಡಿಯಾವನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತಾ, ನಾನು ನನ್ನ ದೇಶದ ಕ್ರಿಕೆಟ್ ಬೆಳವಣಿಗೆಗೆ ಒಳ್ಳೆಯದನ್ನು ಬಯಸುವುದನ್ನು ಮುಂದುವರಿಸುತ್ತೇನೆ.’

– ಅನಿಲ್ ಕುಂಬ್ಳೆ

Leave a Reply