ರೈತರ ಸಹಕಾರಿ ಬ್ಯಾಂಕುಗಳಲ್ಲಿನ 50 ಸಾವಿರವರೆಗೂ ಸಾಲ ಮನ್ನಾಕ್ಕೆ ಸರ್ಕಾರದ ನಿರ್ಧಾರ, ಅಧಿವೇಶನದಲ್ಲಿ ಸಿದ್ದರಾಮಯ್ಯ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ದಿನಗಳಿಂದ ಬೆಂಬಿಡದೇ ಕಾಡುತ್ತಿದ್ದ ರೈತರ ಸಾಲ ಮನ್ನಾ ವಿಷಯಕ್ಕೆ ತೆರೆ ಎಳೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜೂನ್ 20 ಅಂದರೆ ನಿನ್ನೆಯವರೆಗೂ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ್ದ ಸಾಲದಲ್ಲಿ ₹50 ಸಾವಿರವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ.

ಮುಂಗಾರು ಅಧಿವೇಶನದಲ್ಲಿ ಬೇಡಿಕೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯನವರು ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ್ದಾರೆ. ಈ ಕುರಿತ ಅಧಿಕೃತ ಆದೇಶವನ್ನು ನಾಳೆ ಹೊರಡಿಸುವ ಸಾಧ್ಯತೆ ಇದೆ. ಈ ಸಾಲಮನ್ನಾ ನಿರ್ಧಾರದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 8,165 ಕೋಟಿ ಹೊರೆ ಬೀಳಲಿದ್ದು, ಒಟ್ಟು 22,27,506 ರೈತರು ಫಲಾನುಭವಿಗಳಾಗಿದ್ದಾರೆ.

ಸಾಲಮನ್ನಾ ನಿರ್ಧಾರ ಕುರಿತಂತೆ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಿಷ್ಟು…

‘ರೈತರ ಸಾಲ ಮನ್ನಾ ಮಾಡುವಂತೆ ಎಲ್ಲೆಡೆಯಿಂದ ಮನವಿಗಳು ಕೇಳಿಬರುತ್ತಿವೆ. ಎಲ್ಲೆ ಹೋದರು ರೈತರು ಸಾಲ ಮನ್ನಾ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ಅವರಿಗೆ ಈ ವಿಷಯದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕೂಡ ಇಲ್ಲ. ರೈತರ ಹಾಗೂ ಕೃಷಿ ಕ್ಷೇತ್ರದ ಹಿತದೃಷ್ಠಿಯಿಂದಾಗಿ ಸಹಕಾರಿ ಬ್ಯಾಂಕುಗಳಲ್ಲಿ ₹ 50 ಸಾವಿರವರೆಗಿನ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿದ್ದೇವೆ. ನಿನ್ನೆಯವರೆಗೆ ಅಂದರೆ ಜೂನ್ 20 2017ರವರೆಗೆ ಸಾಲ ಪಡೆದಿರುವ ರೈತರ ಸಾಲ ಮನ್ನಾ ಮಾಡಲಾಗುವುದು. ಈ ಕುರಿತ ಆದೇಶವನ್ನು ಶೀಘ್ರವೇ ಹೊರಡಿಸಲಿದ್ದೇವೆ.’

ಈ ಸಾಲ ಮನ್ನಾ ನಿರ್ಧಾರದೊಂದಿಗೆ ಕಾಂಗ್ರೆಸ್ ಸರ್ಕಾರ ಮುಂದಿನ ಚುನಾವಣೆಯ ಸಮರದಲ್ಲಿ ವಿರೋಧ ಪಕ್ಷಗಳಿಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಇಷ್ಟು ದಿನಗಳ ಕಾಲ ಸಾಲ ಮನ್ನಾ ವಿಷಯವನ್ನು ಮುಂದಿಟ್ಟುಕೊಂಡ ಸರ್ಕಾರದ ಮೇಲೆ ದಾಳಿ ಮಾಡುತ್ತಿದ್ದ ಬಿಜೆಪಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆದಿದೆ. ಸಾಲ ಮನ್ನಾ ಮಾಡುತ್ತಿದ್ದಂತೆ ‘ನಾವು ಸಾಲ ಮನ್ನಾ ಮಾಡಿದ್ದೇವೆ. ಈಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಿಸಿ’ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಒಟ್ಟಿನಲ್ಲಿ ಚುನಾವಣೆಯ ಹೊಸ್ತಿಲಿನಲ್ಲಿ ಸಾಲ ಮನ್ನಾ ವಿಷಯ ರಾಜಕೀಯ ಪ್ರಬಲ ಅಸ್ತ್ರವಾಗಿರುವುದು ಸಾಬೀತಾಗಿದೆ.

Leave a Reply