ಸಿದ್ದರಾಮಯ್ಯ ಸಾಲಮನ್ನಾಕ್ಕೂ ಉಳಿದ ಮೂರು ರಾಜ್ಯಗಳ ಸಾಲಮನ್ನಾಕ್ಕೂ ವ್ಯತ್ಯಾಸಗಳೇನು? ಯಾರ ಔದಾರ್ಯ ಹೆಚ್ಚು?

ಡಿಜಿಟಲ್ ಕನ್ನಡ ಟೀಮ್:

ರೈತರ ಸಾಲ ಮನ್ನಾ ವಿಷಯವಾಗಿ ವ್ಯಾಪಕ ಒತ್ತಡ ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರೈತರು ಸಹಕಾರಿ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡಿದ್ದಾರೆ.

ರೈತರ ಸಾಲ ಮನ್ನಾ ವಿಷಯವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಡುವಣ ಹಗ್ಗಜಗ್ಗಾಟ ಹೆಚ್ಚಾಗಿ ಕಂಡು ಬಂದಿತ್ತು. ಆದರೆ ಇತ್ತೀಚೆಗೆ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವ ಪಂಜಾಬ್ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಘೋಷಣೆಯಾಗಿದ್ದವು. ಈ ರಾಜ್ಯಗಳು ಕೇಂದ್ರದಿಂದ ಯಾವುದೇ ನೆರವು ಪಡೆಯದೇ ಸಾಲ ಮನ್ನಾ ಮಾಡಿದ್ದು, ಸಿದ್ದರಾಮಯ್ಯನವರ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿತ್ತು.

ಈಗ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕುಗಳಲ್ಲಿ ₹ 50 ಸಾವಿರವರೆಗೂ ರೈತರ ಸಾಲ ಮನ್ನಾ ಮಾಡುವ ಮೂಲಕ ವಿರೋಧ ಪಕ್ಷಗಳ ಬಾಯಿಗೆ ಬೀಗ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕ ರೈತರ ಸಾಲ ಮನ್ನಾ ಮಾಡಿದ ನಾಲ್ಕನೇ ರಾಜ್ಯವಾಗಿದೆ. ಕರ್ನಾಟಕದಲ್ಲಿ ಸಾಲ ಮನ್ನಾ ಆಗಿರುವ ಹೊತ್ತಿನಲ್ಲಿ ಸಹಜವಾಗಿಯೇ ಇತರೆ ರಾಜ್ಯಗಳಲ್ಲಿ ಘೋಷಣೆಯಾದ ರೈತರ ಸಾಲ ಮನ್ನಾ ಜತೆಗೆ ಹೋಲಿಕೆ ಮಾಡಲಾಗುತ್ತಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರತಿ ರಾಜ್ಯಗಳು ಆಯಾ ರಾಜ್ಯಗಳ ವಿಸ್ತೀರ್ಣ, ರೈತರ ಸಮಸ್ಯೆ, ಸಾಲದ ಪ್ರಮಾಣಗಳೆಲ್ಲ ಬೇರೆ ಬೇರೆ. ಆದಾಗ್ಯೂ ನಾಲ್ಕು ರಾಜ್ಯಗಳಲ್ಲಿ ಘೋಷಣೆಯಾಗಿರುವ ರೈತರ ಸಾಲ ಮನ್ನಾ ಪ್ರಮಾಣದ ವ್ಯತ್ಯಾಸಗಳು ಮೇಲ್ನೋಟಕ್ಕೆ ಕಾಣುವುದು ಹೀಗೆ…

  • ಕರ್ನಾಟಕದ ಸಾಲ ಮನ್ನಾ: ಕರ್ನಾಟಕದಲ್ಲಿ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದಲ್ಲಿ ₹50 ಸಾವಿರವರೆಗೂ ಎಲ್ಲಾ ವರ್ಗದ ರೈತರ ಸಾಲ ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹ 8,165 ಕೋಟಿ ಹೊರೆ ಬೀಳಲಿದ್ದು, ಒಟ್ಟು 22,27,506 ರೈತರು ಫಲಾನುಭವಿಗಳಾಗಿದ್ದಾರೆ.
  • ಉತ್ತರ ಪ್ರದೇಶದಲ್ಲಿನ ಸಾಲ ಮನ್ನಾ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಡಿದ ರೈತರ ಸಾಲ ಮನ್ನಾದ ಪ್ರಮಾಣ ₹36,359 ಕೋಟಿ. ಇಲ್ಲಿ ₹1 ಲಕ್ಷದವರೆಗೂ ರೈತರ ಸಾಲ ಮನ್ನಾ ಮಾಡಲಾಗಿದ್ದು, 2.1 ಕೋಟಿ ರೈತರು ಸಾಲ ಮನ್ನಾ ನಿರ್ಧಾರದ ಫಲಾನುಭವಿಗಳಾಗಿದ್ದಾರೆ.
  • ಮಹಾರಾಷ್ಟ್ರದಲ್ಲಿನ ರೈತರ ಸಾಲ ಮನ್ನಾ: ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರ ರೈತರಿಂದ ವ್ಯಾಪಕ ಪ್ರತಿಭಟನೆ ಉದ್ಭವಿಸಿದ ಹಿನ್ನೆಲೆಯಲ್ಲಿ ಸಾಲ ಮನ್ನಾ ಘೋಷಣೆ ಮಾಡಿತ್ತು. ಈ ಸಾಲ ಮನ್ನಾ ಘೋಷಣೆಯಿಂದ ಅಲ್ಲಿನ ಸರ್ಕಾರಕ್ಕೆ ಬಿದ್ದ ಹೊರೆಯ ಪ್ರಮಾಣ ₹ 30,500 ಕೋಟಿ. ಇನ್ನು ಮಹಾರಾಷ್ಟ್ರದಲ್ಲಿ ನೊಂದಣಿಯಾಗಿರುವ 13.6 ಕೋಟಿ ರೈತರ ಪೈಕಿ ಕೇವಲ 3.1 ಕೋಟಿ ರೈತರು ಮಾತ್ರ ಸಾಲ ಮನ್ನಾದ ಫಲಾನುಭವಿಗಳಾಗಿದ್ದಾರೆ.
  • ಪಂಜಾಬ್ ನಲ್ಲಿನ ಸಾಲ ಮನ್ನಾ: ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಸರ್ಕಾರದಲ್ಲಿನ ಸಾಲ ಮನ್ನಾ ಘೋಷಣೆ ಸಾಕಷ್ಟು ಸದ್ದು ಮಾಡಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸರ್ಕಾರ ₹ 2 ಲಕ್ಷವರೆಗಿನ ರೈತರ ಸಾಲ ಮನ್ನಾ ಮಾಡಿದೆ. ಇಲ್ಲಿ ಎಲ್ಲಾ ಬೆಳೆಗಾರರು ಹಾಗೂ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರು ಈ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಈ ಸಾಲ ಮನ್ನಾ ಯೋಜನೆಯಲ್ಲಿ 8.75 ಲಕ್ಷ ರೈತರ ಸಾಲ ಮನ್ನಾ ಆಗಿದೆ. ಇದರಿಂದ ಪಂಜಾಬ್ ಸರ್ಕಾರದ ಬೊಕ್ಕಸಕ್ಕೆ ₹ 24 ಸಾವಿರ ಕೋಟಿ ಹೊರೆ ಹೆಚ್ಚಾಯಿತು.

Leave a Reply