ಯೋಗ ದಿನದಲ್ಲಿ ಭಾಗವಹಿಸಿ ಪ್ರಧಾನಿ ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಮೂರನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಲಖನೌನ ರಮಾಭಾಯ್ ಮೈದಾನದಲ್ಲಿ ನಡೆದ ಯೋಗ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು.

ತುಂತುರು ಮಳೆಯ ನಡುವೆ ಸಾವಿರಾರು ಯೋಗ ಆಸಕ್ತರ ಜತೆ ಯೋಗದ ವಿವಿಧ ಆಸನಗಳನ್ನು ಮಾಡಿದ ನರೇಂದ್ರ ಮೋದಿ, ನಂತರ ಯೋಗ ದಿನ ಕುರಿತು ಭಾಷಣ ಮಾಡಿದರು. ಈ ವೇಳೆ ಅವರು ಯೋಗ ಕುರಿತಾಗಿ ಹೇಳಿದ ಮಾತಿನ ಸಾರಾಂಶ ಹೀಗಿದೆ…

‘ವಿಶ್ವದ ಅನೇಕ ರಾಷ್ಟ್ರಗಳಿಗೆ ನಮ್ಮ ದೇಶದ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಗೊತ್ತಿಲ್ಲ. ಆದರೆ ಆ ರಾಷ್ಟ್ರಗಳೆಲ್ಲವೂ ಯೋಗದ ಮೂಲಕ ಭಾರತದ ಜತೆ ಸಂಪರ್ಕ ಸಾಧಿಸುತ್ತಿವೆ. ಯೋಗ ದೇಹ, ಮನಸ್ಸು ಹಾಗೂ ಆತ್ಮವನ್ನು ಬೆಸೆಯುತ್ತದೆ. ಇದರ ಜತೆಗೆ ಈಗ ಯೋಗ ವಿಶ್ವವನ್ನೇ ಬೆಸೆಯುವ ಕೆಲಸ ಮಾಡುತ್ತಿದೆ. ಈ ಹಿಂದೆ ಯೋಗ ಕೇವಲ ಹಿಮಾಲಯದ ಪರ್ವತಗಳಲ್ಲಿನ ಋಷಿಮುನಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಯೋಗ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಭಾಗವಾಗಿದೆ. ದಿನದ 24 ಗಂಟೆಯೂ ಯೋಗ ಮಾಡುವ ಅಗತ್ಯವಿಲ್ಲ. ಬದಲಿಗೆ 50ರಿಂದ 60 ನಿಮಿಷ ಯೋಗ ಮಾಡಿದರೆ ಸಾಕು, ದೇಹ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಹೀಗೆ 125 ಕೋಟಿ ಭಾರತೀಯರ ಜತೆಗೆ ವಿಶ್ವದ ಇತರೆ ಜನರು ಯೋಗದ ಮೂಲಕ ಆರೋಗ್ಯವಂತರಾಗಿರಬಹುದು. ಊಟದ ರುಚಿಗೆ ಉಪ್ಪು ಹೇಗೆ ಮುಖ್ಯವೋ ಅದೇ ರೀತಿ ಆರೋಗ್ಯಕರ ಜೀವನಕ್ಕೆ ಯೋಗ ಅಷ್ಟೇ ಮುಖ್ಯ. ಈಗಿನ ಯುವ ಜನತೆ ಯೋಗವನ್ನು ವೃತ್ತಿಯನ್ನಾಗಿ ಪರಿಗಣಿಸುತ್ತಿದ್ದಾರೆ. ಇದರಿಂದ ವಿಶ್ವದಲ್ಲಿ ಯೋಗಕ್ಕೆ ಹೊಸ ಮಾರುಕಟ್ಟೆಯೇ ಸೃಷ್ಠಿಯಾಗುತ್ತಿದೆ.’

Leave a Reply