ಸೌದಿಯಲ್ಲಿದ್ದುಕೊಂಡೇ ಯೋಗ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನೂಫ್ ಯೋಗ ಮಾರ್ಗದರ್ಶಕಿಯಾಗಿ ಬೆಳೆದಿದ್ದು ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಾರತದ ಪುರಾತನ ದೈಹಿಕ ಹಾಗೂ ಮಾನಸಿಕ ವ್ಯಾಯಾಮ ವಿದ್ಯೆಯಾಗಿರುವ ಯೋಗ ಇಂದು ವಿಶ್ವದ ಮೂಲೆ ಮೂಲೆಯನ್ನು ತಲುಪುತ್ತಿದೆ. ಇಂದು ವಿಶ್ವದೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಆ ಮೂಲಕ ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಲಾಗುತ್ತಿದೆ. ಈ ಸಂದರ್ಭದಲ್ಲಿ ಯೋಗದ ಗಂಧಗಾಳಿಯೂ ಗೊತ್ತಿಲ್ಲದ ಸೌದಿಯಲ್ಲಿ ಯೋಗ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದರ ಅಧ್ಯಯನ ಮಾಡಿ ಸೌದಿಯ ಮೊದಲ ಪ್ರಮಾಣಿಕೃತ ಯೋಗ ಮಾರ್ಗದರ್ಶಕಿಯಾಗಿರುವ ನೂಫ್ ಮೊಹಮದ್ ಅಲ್ ಮರ್ವಾಯ್ ಅವರ ಹಾದಿ ನಮ್ಮೆಲ್ಲರ ಗಮನ ಸೆಳೆಯಲಿದೆ.

ದೂರದ ಅರಬ್ ದೇಶದಲ್ಲಿರುವ ನೂಫ್ ಅವರಿಗೆ ಯೋಗ ಬಗ್ಗೆ ಆಸಕ್ತಿ ಮೂಡಿದ್ದು ಹೇಗೆ? ಆಕೆ ಯೋಗ ಕಲಿತದ್ದು ಹೇಗೆ? ಅದರ ಬಗೆಗಿನ ಅಧ್ಯಯನ ನಡೆಸಿದ್ದು ಹೇಗೆ? ನೂಫ್ ಯೋಗವನ್ನು ಇಸ್ಲಾಂ ಧರ್ಮದ ಹೊರತಾಗಿ ಕಂಡಿದ್ದು ಹೇಗೆ? ಸೌದಿಯ ಮೊದಲ ಅಧಿಕೃತ ಯೋಗ ಮಾರ್ಗದರ್ಶಕಿಯಾಗಿ ಖ್ಯಾತಿ ಪಡೆದಿದ್ದು ಹೇಗೆ ಎಂಬ ಕುತೂಹಲಕಾರಿ ಅಂಶಗಳನ್ನು ತಿಳಿಯೋಣ ಬನ್ನಿ…

ಕೆಲವು ವರ್ಷಗಳ ಹಿಂದೆ ಸೌದಿ ಅರೆಬಿಯಾದ ಸಮಾಜಕ್ಕೆ ಯೋಗ ಒಂದು ಅಪರಿಚಿತ ಪರಿಕಲ್ಪನೆ. ಆದರೆ ನೂಫ್ ಅವರ ತಂದೆ 1980ರ ದಶಕದಲ್ಲೇ ಸೌದಿ, ತುನಿಯೇಶಿಯಾ ಹಾಗೂ ಈಜಿಪ್ಟ್ ಗಳಲ್ಲಿ ಅರಬ್ ಮಾರ್ಷಲ್ ಆರ್ಟ್ಸ್ ಸಂಸ್ಥಾಪಕರಾಗಿದ್ದರು. ಹೀಗಾಗಿ ಈಕೆಗೆ ಯೋಗ ವಿದ್ಯೆಯ ಬಗ್ಗೆ ಸ್ವಲ್ಪ ಮಾಹಿತಿ ಇತ್ತು. ಇತರೆ ಮಾರ್ಷಲ್ ಆರ್ಟ್ಸ್ ಗಳಿಗಿಂತ ಮಂದಗತಿಯಲ್ಲಿ ಮಾಡುವ ವ್ಯಾಯಾಮದ ಬಗ್ಗೆ ಮರ್ವಾಯ್ ಗೆ ಆಸಕ್ತಿ ಇತ್ತು. ಹೀಗಾಗಿ ಯೋಗ ಕಲಿಯಬೇಕು ಎಂಬ ಚಿಂತನೆ ಆಕೆಯಲ್ಲಿ ಮೂಡಿತು. ಯೋಗ ಕಲಿಯುವ ಸಲುವಾಗಿ ಸಾಕಷ್ಟು ಪ್ರಯತ್ನಪಟ್ಟರು ಸೌದಿಯಲ್ಲಿ ಯಾವುದೇ ಮಾರ್ಗದರ್ಶಕರು ಸಿಗಲಿಲ್ಲ. ಇಂತಹ ಸಂದರ್ಭದಲ್ಲಿ ತನಗೆ ಸಿಕ್ಕ ಯೋಗ ಮೂಲಗಳಿಂದಲೇ ಸ್ವತಃ ಯೋಗ ಅಭ್ಯಾಸ ಆರಂಭಿಸಿದರು. ಹೀಗೆ ಮರ್ವಾಯ್ ತನ್ನ 19ನೇ ವಯಸ್ಸಿನಲ್ಲಿ ಯೋಗ ಅಭ್ಯಾಸ ಆರಂಭಿಸಿದರು. ಹೀಗೆ ಏಕಾಂಗಿಯಾಗಿ ಯೋಗ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಮರ್ವಾಯ್ ಗೆ ಓರ್ವ ಭಾರತೀಯ ಯೋಗ ಗುರುವಿನ ಪರಿಚಯವಾಯ್ತು. ನಂತರ ಒಂದು ವರ್ಷಗಳ ಕಾಲ ಆಕೆ ಗುರುವಿನ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡಿದರು. ಈ ಕಾಲಾವಧಿಯಲ್ಲಿ ತನ್ನಲ್ಲಾದ ದೈಹಿಕ ಹಾಗೂ ಮಾನಸಿಕ ಬದಲಾವಣೆ ಕಂಡ ನೂಫ್ ಯೋಗ ಕುರಿತಾಗಿ ಮತ್ತಷ್ಟು ಆಸಕ್ತಿ ಬೆಳೆಸಿಕೊಂಡರು. ಯೋಗ ವಿದ್ಯೆ ಕೇವಲ ವ್ಯಾಯಾಮ ಮಾತ್ರವಲ್ಲ ಅದರ ಹಿಂದೆ ಮನಶಾಸ್ತ್ರ ಹಾಗೂ ವಿಜ್ಞಾನ ಅಡಗಿದೆ ಎಂಬುದನ್ನು ಅರಿತ ನೂಫ್ ಯೋಗದ ಕುರಿತು ಹೆಚ್ಚಿನ ಅಧ್ಯಯನ ಮಾಡಲು ನಿರ್ಧರಿಸಿದರು.

ಯೋಗ ಕುರಿತಾಗಿ ಹೆಚ್ಚಿನ ಅಧ್ಯಯನಕ್ಕಾಗಿ ವಿವಿಧ ಕಾಲೇಜುಗಳು ಹಾಗೂ ಆಯುರ್ವೇದ ಕೇಂದ್ರಗಳನ್ನು ಭೇಟಿ ನೀಡಿದರು. ಇದರ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾ ಸೇರಿದಂತೆ ಬೇರೆ ಬೇರೆ ದೇಶಗಳನ್ನು ಸುತ್ತಲು ಆರಂಭಿಸಿದರು. ಈ ಹಂತದಲ್ಲಿ ಯೋಗದ ಕುರಿತು ಡಿಪ್ಲೋಮಾ ಜತೆಗೆ ಆಯುರ್ವೇದಿಕ್ ಔಷಧ ಕೋರ್ಸು ಮುಗಿಸಿದರು. ಆದರೆ ಯೋಗದ ಬಗೆಗಿನ ಜ್ಞಾನ ವೃದ್ಧಿಸಿಕೊಳ್ಳಬೇಕೆಂಬ ಆಸೆ ಹೊಂದಿದ್ದ ನೂಫ್ ಕಡೆಗೆ ಯೋಗ ಮೂಲವಾದ ಭಾರತಕ್ಕೆ ಆಗಮಿಸಲು ನಿರ್ಧರಿಸಿದರು.

ಯೋಗ ಹಿಂದೂ ಹಾಗೂ ಬೌದ್ಧ ಧರ್ಮಗಳ ಸಂಪರ್ಕ ಹೊಂದಿದೆ ಎಂಬ ಕಾರಣಕ್ಕೆ ಮುಸಲ್ಮಾನ್ ಸಮುದಾಯದವರು ಯೋಗ ಅಭ್ಯಾಸದಿಂದ ದೂರ ಉಳಿದಿರುವುದನ್ನು ಕಂಡಿದ್ದ ನೂಫ್, ಯೋಗ ಹಾಗೂ ಇಸ್ಲಾಂ ನಡುವೆ ಇರುವ ವ್ಯತ್ಯಾಸ ಹಾಗೂ ಭಿನ್ನಾಭಿಪ್ರಾಯದ ಬಗ್ಗೆ ತಿಳಿಯಲು ಆರಂಭಿಸಿದರು. ಯೋಗಭ್ಯಾಸ 5 ಸಾವಿರ ವರ್ಷಗಳ ಪುರಾತನವಾಗಿದ್ದು ಬೌದ್ಧ ಧರ್ಮ ಆರಂಭಕ್ಕೂ ಮುನ್ನವೇ ಚಾಲ್ತಿಯಲ್ಲಿತ್ತು. ಯೋಗ ಕುರಿತಾಗಿ ಹೆಚ್ಚಿನ ಅಧ್ಯಯನ ಮಾಡಿದ ನೂಫ್, ಇದು ಒಂದು ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯ ವಿದ್ಯೆಯಾಗಿದ್ದು, ಯೋಗ ಧರ್ಮದ ಹೊರತಾದ ಒಂದು ಅಭ್ಯಾಸ ಎಂಬುದನ್ನು ಅರಿತರು. ಉಸಿರಾಟದ ಪದ್ಧತಿಯ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠವಾಗುವುದು ಹಾಗೂ ದೇಹದ ನರವ್ಯವಸ್ಥೆಗಳ ಆರೋಗ್ಯ ವೃದ್ಧಿಯಾಗುತ್ತದೆ. ಇದೊಂದು ಚಿಕಿತ್ಸಾ ಪದ್ಧತಿಯಾಗಿದ್ದು, ಧರ್ಮದ ಹಿನ್ನೆಲೆಯನ್ನು ಬದಿಗಿಟ್ಟು ಯೋಗ ಅಭ್ಯಾಸ ಮಾಡಬೇಕು ಎಂದು ನೂಫ್ ವಾದ ಮಂಡಿಸಿದರು.

ಹೀಗೆ ಭಾರತದಲ್ಲಿ ಯೋಗದ ಕುರಿತು ಸಾಕಷ್ಟು ಅಧ್ಯಯನ ನಡೆಸಿದ ನೂಫ್ ನಂತರ ಸೌದಿ ಅರೆಬಿಯಾದಲ್ಲಿ ಯೋಗ ಮಾರ್ಗದರ್ಶಕಿಯಾದರು. ಮಾಧ್ಯಮಗಳ ಪ್ರಚಾರದ ಫಲವಾಗಿ ಒಮ್ಮೆ ಸೌದಿಯ ಕಿಂಗ್ ಅಬ್ದುಲಾಜೀಜ್ ವಿಶ್ವವಿದ್ಯಾಲಯದಿಂದ ಅಲ್ಲಿನ ವಿದ್ಯಾರ್ಥಿನಿಯರಿಗೆ ಒತ್ತಡ ನಿವಾರಣೆಯ ಕುರಿತು ಕಾರ್ಯಾಗಾರ ನಡೆಸಲು ನೂಫ್ ಅವರಿಗೆ ಆಹ್ವಾನ ಬಂದಿತು. ಈ ಕಾರ್ಯಾಗಾರದ ವೇಳೆ ಯೋಗವನ್ನು ಅಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯಿಸಿದಾಗ ಆ ಕಾರ್ಯಾಗಾರ ಯಶಸ್ವಿಯಾಗಿ ಇಲ್ಲಿನ ಮಹಿಳಾ ವಿದ್ಯಾರ್ಥಿಗಳ ಮೇಲೆ ಉತ್ತಮ ಪರಿಣಾಮ ಬೀರಿತು. ಆನಂತರ ಮರ್ವಾಯ್ ಸೌದಿ ಅರೆಬಿಯಾದ ಯೋಗ ಮಾರ್ಗದರ್ಶಕಿಯಾಗಿ ಹೆಸರುವಾಸಿಯಾದರು.

1 COMMENT

Leave a Reply