ಸ್ವದೇಶಿ ನಿರ್ಮಿತ ರೈಫಲ್ ಬಳಸಲು ಭಾರತೀಯ ಸೇನೆ ನಿರಾಕರಿಸಿದ್ದು ಏಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಕ್ಷಣಾ ವ್ಯವಸ್ಥೆಯಲ್ಲಿನ ಅಗತ್ಯ ವಸ್ತುಗಳನ್ನು ಸ್ವದೇಶದಲ್ಲೇ ಉತ್ಪಾದನೆ ಮಾಡಬೇಕೆಂಬ ಪ್ರಯತ್ನ ಸಾಕಷ್ಟು ಪರಿಣಾಮಕಾರಿಯಾಗುತ್ತಿದೆ. ಇದರ ಭಾಗವಾಗಿಯೇ ಇತ್ತೀಚೆಗೆ ಎಫ್16 ಯುದ್ಧವಿಮಾನವನ್ನು ಭಾರತದಲ್ಲಿ ತಯಾರಿಸಲು ಟಾಟಾ ಹಾಗೂ ಅಮೆರಿಕದ ಲಾಕ್ಹೀಡ್ ಮಾರ್ಟೀನ್ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಎಲ್ಲದರ ನಡುವೆ ಈಗ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಅದೇನೆಂದರೆ ಸ್ವದೇಶದಲ್ಲೇ ಉತ್ಪಾದನೆ ಮಾಡಲಾದ ರೈಫಲ್ ಗಳನ್ನು ಬಳಸಲು ಭಾರತೀಯ ಸೇನೆ ನಿರಾಕರಿಸಿದೆ.

ಭಾರತೀಯ ಸೇನೆ ಈ ರೈಫಲ್ ಗಳನ್ನು ನಿರಾಕರಿಸಲು ಪ್ರಮುಖ ಕಾರಣ, ಅವುಗಳ ಗುಣಮಟ್ಟ. ಕಳೆದ ವಾರ ಐಶಾಪುರದಲ್ಲಿರುವ ರೈಫಲ್ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾದ ಈ ರೈಫಲ್ ಗಳನ್ನು ಹಲವು ಹಂತಗಳ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಎಲ್ಲ ಪರೀಕ್ಷೆಗಳಲ್ಲೂ ಈ ರೈಫಲ್ ಗಳ ಗುಣಮಟ್ಟ ತೃಪ್ತಿದಾಯಕವಾಗಿರಲಿಲ್ಲ. ಹೀಗಾಗಿ ಭಾರತೀಯ ಸೇನೆ ಈ ರೈಫಲ್ ಗಳನ್ನು ನಿರಾಕರಿಸಿದೆ.

ಭಾರತೀಯ ಸೇನೆ ಭಾರತದಲ್ಲೇ ಉತ್ಪಾದನೆಯಾದ ರೈಫಲ್ ಗಳನ್ನು ನಿರಾಕರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ 5.56 ಎಂಎಂ ಸ್ವದೇಶಿ ನಿರ್ಮಿತ ರೈಫಲ್ ಗಳನ್ನು ಬಳಸಲು ಭಾರತೀಯ ಸೇನೆ ನಿರಾಕರಿಸಿತ್ತು. ಈಗ 7.62X51 ಎಂಎಂ ರೈಫಲ್ ಅನ್ನು ಬಳಸಲು ನಿರಾಕರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೇನೆಯ ಮೂಲಗಳು ಹೇಳಿರುವುದಿಷ್ಟು…

‘ಈ ರೈಫಲ್ ನಲ್ಲಿ ಅನೇಕ ಲೋಪದೋಷಗಳಿವೆ. ಇಡೀ ರೈಫಲ್ ವಿನ್ಯಾಸವನ್ನೇ ಬದಲಿಸಬೇಕಾದ ಅನಿವಾರ್ಯತೆ ಇದೆ. ಈ ಪರೀಕ್ಷೆಯ ಹಂತದಲ್ಲಿ ರೈಫಲ್ ಗಳು 20ಕ್ಕೂ ಹೆಚ್ಚು ಬಾರಿ ಕೈಕೊಟ್ಟವು. ಹೀಗಾಗಿ ಈ ರೈಫಲ್ ಗಳ ಮೇಲೆ ನಾವು ಹೆಚ್ಚು ಅವಲಂಬಿತವಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ಸದ್ಯದಲ್ಲೇ ಸಭೆ ನಡೆಸಿ ಭಾರತೀಯ ಸೇನೆಗೆ ಅಗತ್ಯವಿರುವ ರೈಫಲ್ ಬಗ್ಗೆ ಚರ್ಚಿಸಲಾಗುವುದು. ಸದ್ಯ ಭಾರತೀಯ ಸೇನೆಗೆ ಈ ರೈಫಲ್ ಗಳ ಅಗತ್ಯತೆ ಹೆಚ್ಚಾಗಿದ್ದು, ಇವುಗಳ ಪೂರೈಕೆ ತಡವಾಗುತ್ತಿರುವುದು ಬೇಸರದ ಸಂಗತಿ.’

Leave a Reply