‘ಕೊಹ್ಲಿ-ಕುಂಬ್ಳೆ ಮಾತು ಬಿಟ್ಟು 6 ತಿಂಗಳಾಗಿತ್ತು…’ ಬಿಸಿಸಿಐ ಮೂಲಗಳು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜೀನಾಮೆ ನೀಡುತ್ತಿದ್ದಂತೆ ಕೊಹ್ಲಿ ಹಾಗೂ ಕುಂಬ್ಳೆ ನಡುವಣ ಬಿಕ್ಕಟ್ಟಿನ ವಿಚಾರವಾಗಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಸದ್ಯ ಬಿಸಿಸಿಐ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ‘ಕೊಹ್ಲಿ ಹಾಗೂ ಕುಂಬ್ಳೆ ಮಾತು ಬಿಟ್ಟು ಅದಾಗಲೇ ಆರು ತಿಂಗಳೇ ಕಳೆದಿತ್ತು.’

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಗಳು ಹೇಳಿರುವುದಿಷ್ಟು… ‘ಈ ಇಬ್ಬರ ನಡುವಣ ಬಿಕ್ಕಟ್ಟನ್ನು ಬಗೆಹರಿಸಲು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು. ಮೊದಲು ಸಲಹಾ ಸಮಿತಿಯು ಕೋಚ್ ಅನಿಲ್ ಕುಂಬ್ಳೆ ಜತೆಗೆ ಈ ವಿಚಾರವಾಗಿ ಮಾತುಕತೆ ನಡೆಸಿತ್ತು. ನಂತರ ನಾಯಕ ವಿರಾಟ್ ಕೊಹ್ಲಿ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಲಾಗಿತ್ತು. ಕುಂಬ್ಳೆ ಜತೆ ಪ್ರತ್ಯೇಕವಾಗಿ ನಡೆಸಲಾದ ಸಭೆಯಲ್ಲಿ ನನ್ನ ಮತ್ತು ವಿರಾಟ್ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಕುಂಬ್ಳೆ ಹೇಳಿದ್ದರು. ಆದರೆ ವಿರಾಟ್ ಕೊಹ್ಲಿ ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದರು. ಕುಂಬ್ಳೆ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕಳುಹಿಸಲು ಟಿಕೆಟ್ ಸಹ ಬುಕ್ ಆಗಿತ್ತು. ಆದರೆ ಸಲಹಾ ಸಮಿತಿಯು ಅಂತಿಮವಾಗಿ ಈ ಇಬ್ಬರನ್ನು ಮುಖಾಮುಖಿ ಕೂರಿಸಿ ಸಭೆ ನಡೆಸಿತ್ತು. ಈ ಸಭೆಯ ವೇಳೆ ಈ ಇಬ್ಬರು ಕಳೆದ ವರ್ಷ ಡಿಸೆಂಬರ್ ನಲ್ಲಿ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನವೇ ಪರಸ್ಪರ ಮಾತು ಬಿಟ್ಟಿದ್ದರು ಎಂಬ ಆಘಾತಕಾರಿ ಅಂಶ ಗೊತ್ತಾಯಿತು. ಈ ವೇಳೆ ಈ ಇಬ್ಬರ ನಡುವಣ ಬಿಕ್ಕಟ್ಟು ಎಲ್ಲೆ ಮೀರಿದ್ದು, ಬಿಕ್ಕಟ್ಟು ಸರಿಪಡಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ ಎಂಬುದು ತಿಳಿದು ಬಂದಿತು.’

Leave a Reply